ತುಮಕೂರಿನ ಹೆಗ್ಗೆರೆ ಲೆವೆಲ್ ಕ್ರಾಸಿಂಗ್ ಬಳಿ ರಸ್ತೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ಸಂದರ್ಭದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ರನ್ನು ಅಭಿನಂದಿಸಲಾಯಿತು.
- ತುಮಕೂರಿನಲ್ಲಿ ಕೇಂದ್ರ ಸಚಿವ ಸೋಮಣ್ಣ
- ಹೆಗ್ಗೆರೆ ಬಳಿ ಆರ್ ಒಬಿ ನಿರ್ಮಾಣ ಕಾಮಗಾರಿ
- ಲೋಕಸಭೆಯಲ್ಲಿ ನನ್ನ "ಕೈ' ಹಿಡಿದಿದ್ದರು
ತುಮಕೂರು: ಪರಮೇಶ್ವರ್ ಸಿಎಂ ಆಗಲಿ ಎಂಬುದು ಎಲ್ಲೋ ಒಂದು ಕಡೆ ನನಗೂ ಆಸೆ ಇದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ತಾಲೂಕಿನ ಹೆಗ್ಗೆರೆ ಲೆವೆಲ್ ಕ್ರಾಸಿಂಗ್ ಬಳಿ ಮೇಲ್ಸೇತುವೆ ಕಾಮಗಾರಿ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾನಾಡಿದ ಅವರು, ಅದೃಷ್ಟದ ಬಲ ಗೃಹಮಂತ್ರಿ ಆಗಿದ್ದಾರೆ. ಅವರಿಗೆ ಆ ಕನಸಿರಲಿಲ್ಲ. ಅವರು ಸಿಎಂ ಆಗಲಿ ಎಂಬುದು ನನ್ನಾಸೆ ಕೂಡ. ಸುರೇಶ್ಗೌಡ ಹೇಳಿದ್ದು ನೂರಕ್ಕೆ ನೂರು ಸತ್ಯ. ಪರಮೇಶ್ವರ್ ಈ ರಾಜ್ಯದ ಮುಖ್ಯಮಂತ್ರಿ ಆಗಲಿ ಎಂಬುದು ಜಿಲ್ಲೆಯ ಜನತೆ ಒತ್ತಾಸೆ ಕೂಡ ಎಂದರು.
ಈ ವೇಳೆ ನಿಮ್ಮ ಕ್ಷೇತ್ರದ ಡಿ.ಕೆ.ಶಿವಕುಮಾರ್ ರೇಸ್ನಲ್ಲಿದ್ದಾರೆ ಎಂದು ಸುರೇಶಗೌಡ ಕೆಣಕಿದರು. "ಅವರು ಇರಲಿ ಬಿಡಪ್ಪ. ಶಿವಕುಮಾರ್ ಏನಾಗಬೇಕು ಅನ್ನುವುದು ಹಣೆಬರಹ. ಏನಾಗುತ್ತೆ ಅನ್ನುವುದು ದೊಡ್ಡದು. ನಡವಳಿಕೆ ಇನ್ನೂ ದೊಡ್ಡದು'. ಒಂದಂತು ಸತ್ಯ ಅದೃಷ್ಟವಿದ್ದರೆ ಏನೆಲ್ಲಾ ಆಗಬಹುದು ಅನ್ನುವದಕ್ಕೆ ನಾನೇ ನಿದರ್ಶನ ಎಂದು ಸೋಮಣ್ಣ ತಮ್ಮದೇ ಶೈಲಿಯಲ್ಲಿ ಹೇಳಿದರು.
ನಾನು ಅನಿರೀಕ್ಷಿತವಾಗಿ ಇಲ್ಲಿಗೆ ಬಂದೆ. ನಮ್ಮ ರಾಷ್ಟ್ರೀಯ ನಾಯಕುರು ತುಮಕೂರಿಗೆ ಹೋಗಿ ಸ್ಪರ್ಧೆ ಮಾಡುವಂತೆ ಸೂಚನೆ ನೀಡಿದರು. ನನಗೆ ಕಾಯವಾಚ ಮನಸ ಬಿಜೆಪಿ ಕಾರ್ಯಕರ್ತರು ಯಾವ ರೀತಿ ಸಹಾಯ ಮಾಡಿದರೋ, ಜೆಡಿಎಸ್ ನವರು ಅದೇ ರೀತಿ ನೆರವು ನೀಡಿದರು. ಬಹುತೇಕ ಕಾಂಗ್ರೆಸ್ನ ಒಂದು ಭಾಗವು ಕೈಹಿಡಿಯಿತು. ನಾನು ನಿಮಗೆಲ್ಲಾ ಆಭಾರಿಯಾಗಿರುತ್ತೀನಿ. ರಾಜಕಾರಣ ಅನ್ನುವುದು ಅದೃಷ್ಟ. ನಾನು ಮಂತ್ರಿಯಾದ ಮೇಲೆ ನನಗೆ ಮೊದಲು ಕರೆ ಮಾಡಿ ಅಭಿನಂದನೆ ತಿಳಿಸಿ, ಒಳ್ಳೆಯ ಇಲಾಕೆ ಸಿಕ್ಕಿದೆ ಎಂದಿದ್ದು ಪರಮೇಶ್ವರ್ ಎಂದು ನೆನಪಿಸಿಕೊಂಡರು.