ತಮಿಳುನಾಡಿಗೆ ನೀರು ಹರಿಸುವ ಕಾವೇರಿ ನೀರಾವರಿ ಪ್ರಾಧಿಕಾರದ ಆದೇಶ ಧಿಕ್ಕರಿಸುವಂತೆ ವಿಜಯಸೇನೆ ಜಿಲ್ಲಾ ಟಕದ ನೇತೃತ್ವದಲ್ಲಿ ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟಿಸಲಾಯಿತು. ಕೆ. ಗಂಗಾಧರ್, ಹರೀಶ್, ನಯನ್ ಕುಮಾರ್, ತಿಪ್ಪೇಶ್, ರಾಕೇಶ್, ಎಂ.ಕೆ.ರುದ್ರೇಶ್, ಯಾಸ್ಮಿನ್ ತಾಜ್, ಕಾವ್ಯ ಮತ್ತಿತರರು ಇದ್ದರು.
- ವಿಜಯಸೇನೆ ನೇತೃತ್ವದಲ್ಲಿ ಪ್ರತಿಭಟನೆ
- ಕಾವೇರಿ ನೀರು ಪ್ರಾಧಿಕಾರದ ಆದೇಶ ಅವಮಾನವೀಯ
- ಡಿಸಿ ಮೂಲಕ ಸರ್ಕಾರಕ್ಕೆ ಆಗ್ರಹ
ತುಮಕೂರು: ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿದಿನ 3500 ಕ್ಯೂಸೆಕ್ ನೀರು ಹರಿಸುವ ಕಾವೇರಿ ನೀರು ಪ್ರಾಧಿಕಾರದ ಆದೇಶ ಅಮಾನವೀಯವಾಗಿದ್ದು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕು ನೀರು ಬಿಡಬಾರದು ಎಂದು ಒತ್ತಾಯಿಸಿ ವಿಜಯಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟಿಸಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ವಿಜಯಸೇನೆಯ ಆಟೋ ಘಟಕ ಕಾರ್ಯಕರ್ತರು ಆಟೋಗಳ ಸಮೇತ ಮೆರವಣಿಗೆಯಲ್ಲಿ ಭಾಗಿಯಾಗಿ ರಾಜ್ಯದಲ್ಲಿ ಕುಡಿಯುವ ನೀರಿಗು ಸಂಕಷ್ಟು ಎದರಾಗಿದ್ದು ಈ ವೇಳೆ ತಮಿಳುನಾಡಿಗೆ ನೀರು ಕೊಡುವುದು ರಾಜ್ಯದ ಹಿತವನ್ನು ಬಲಿಕೊಟ್ಟಂತೆ ಎಂದು ಆಕ್ರೋಶ ಹೊರಹಾಕಿದರು. ಈ ವೇಳೆ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಕೆ. ಗಂಗಾಧರ್, ಈಗಾಗಲೇ ರಾಜ್ಯ ಸರ್ಕಾರವು 11 ಜಿಲ್ಲೆಯನ್ನು ಬರ ಪೀಡಿತ ಜಿಲ್ಲೆ ಎಂದು ಘೋಷಿಸಿದೆ, ಕೆಆರ್ಎಸ್ನಲ್ಲಿ ಶೇಕಡ 33ರಷ್ಟು ಮಾತ್ರ ನೀರಿದೆ. ಇಂತಹ ಜಲ ಸಂಕಷ್ಟ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶಿಸಿರುವುದು ಸರಿಯಲ್ಲ ಎಂದರು.
ಕಾವೇರಿ ವಿಚಾರದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಇದೆ, ಪ್ರಸ್ತುತ ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರುಸುತ್ತಿರುವ ಹೊತ್ತಿನಲ್ಲಿ ತಮಿಳುನಾಡು ಭಾಗದ ಬೆಳೆಗಳಿಗೆ ಪ್ರತಿನಿತ್ಯ 3500 ಕ್ಯೂಸೆಕ್ ನೀರು ಬಿಡುವಂತೆ ಆದೇಶಿಸಿರುವುದು ದುರಾದೃಷ್ಟಕರ. ಕಾವೇರಿ ಕೊಳ್ಳದ ರೈತರ ರಕ್ಷಣೆ ಮಾಡುವುದು ಕೂಡ ರಾಜ್ಯ ಸರ್ಕಾರದ ಕರ್ತವ್ಯ. ತಕ್ಷಣ ಮರು ಪರಿಶೀಲನಾ ಅರ್ಜಿಯನ್ನು ಟ್ರಿಬ್ಯುನಲ್ ಮುಂದೆ ಸಲ್ಲಿಸಿ ಸಮರ್ಥ ರೀತಿಯಲ್ಲಿ ವಾದ ಮಂಡಿಸಬೇಕು, ಕಾವೇರಿ ನೀರು ನಿಯಂತ್ರಣ ಸಮಿತಿ ಮಾಡಿರುವ ಶಿಫಾರಸ್ಸನ್ನು ಒಪ್ಪಿ ಕಾವೇರಿ ನೀರು ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡಬಾರದು ಎಂದು ಒತ್ತಾಯಿಸಿದರು.
ನಂತರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರು.
ವಿಜಯಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್, ಉಪಾಧ್ಯಕ್ಷ ನಯನ್ಕುಮಾರ್, ಆಟೋ ಘಟಕ ಜಿಲ್ಲಾಧ್ಯಕ್ಷ ತಿಪ್ಪೇಶ್, ನಗರ ಅಧ್ಯಕ್ಷ ರಾಕೇಶ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಕೆ. ರುದ್ರೇಶ್, ಕಾರ್ಯಾಧ್ಯಕ್ಷ ಎಸ್. ರುದ್ರೇಶ್, ಪ್ರಧಾನ ಕಾರ್ಯದರ್ಶಿ ಯೋಗೀಶ್, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಯಾಸ್ಮೀನ್ ತಾಜ್, ನಗರ ಅಧ್ಯಕ್ಷೆ ಕಾವ್ಯ, ಮುಖಂಡರಾದ ಮೋಹನ್, ತಿಮ್ಮರಾಜು, ಪವನ್, ಅಂಬಿಕಾ ಮಹೇಶ್, ಕನ್ನಿಕಾಂಬ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.