ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದ ತಂಡ ತುಮಕೂರು ತಾಲೂಕಿನಲ್ಲಿ ಬರ ಪರಿಸ್ಥಿತಿ ವೀಕ್ಷಣೆ ಮಾಡಿತು. 
ತುಮಕೂರು

ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಿದ ಬಿ.ವೈ.ವಿಜಯೇಂದ್ರ

ಪ್ರಮುಖ ಮುಖ್ಯಾಂಶಗಳು

  • ಪ್ರವಾಸದಲ್ಲಿ ಮಳೆಯ ಸಿಂಚನ, ರೈತರ ಜತೆ ಮಾತು

ತುಮಕೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದ ಬಿಜೆಪಿ ಮುಖಂಡರ ತಂಡ ಜಿಲ್ಲೆಯಲ್ಲಿ ಬರ ಅಧ್ಯಯನ ಪ್ರವಾಸಕೈಗೊಂಡು ಪರಿಸ್ಥಿತಿ ಅವಲೋಕಿಸಿತು. ವೀಕ್ಷಣೆಗೆ ದೇವರಾಯನದುರ್ಗ ಸುತ್ತಮುತ್ತಲ ಪ್ರದೇಶ ಆಯ್ಕೆ ಮಾಡಿಕೊಂಡಿದ್ದ ತಂಡ ತೆರಳಿದ ಮಾರ್ಗದಲ್ಲೆಲ್ಲಾ ಹಸಿರು ಬರ ಕಾಣಿಸಿತು, ದಾರಿಯುದ್ದಕ್ಕೂ ಮಳೆಯ ಸಿಂಚನವೂ ಆಯಿತು.

ಮಂಗಳವಾರ ಬೆಳಗ್ಗೆ ತುಮಕೂರಿನ ಕೊಲ್ಲಾಪುರದಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬರ ಅಧ್ಯಯನಕ್ಕೆ ಆಗಮಿಸಿದ್ದ ವಿಜಯೇಂದ್ರ, ತುಮಕೂರು ತಾಲೂಕು ದುರ್ಗದಹಳ್ಳಿ, ಆಚಾರಗುಡ್ಲು, ಕೊರಟಗೆರೆ ತಾಲೂಕು ವಡ್ಡರಹಳ್ಳಿ, ಇರಕಸಂದ್ರ, ತಣ್ಣೇನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ರೈತರ ಹೊಲಗಳಿಗೆ ಭೇಟಿ ನೀಡಿದರು.
ಜಿಲ್ಲೆಯಲ್ಲಿ ಕಳೆದೊಂದು ವಾರದಿಂದಲೂ ಮಳೆ ಸುರಿಯುತ್ತಿದ್ದ ರೈತರ ಜಮೀನುಗಳಲ್ಲಿ ಬಿತ್ತನೆಗೆ ಸಿದ್ಧ ಮಾಡಿಕೊಂಡಿದ್ದು ಕಾಣಿಸಿತು ಆದರೆ, ಸಕಾಲದಲ್ಲಿ ಮಳೆಯಾಗದೆ ಬೆಳೆ ಬೆಳೆಯಲು ತೊಂದರೆಯಾಗಿರುವ ಬಗ್ಗೆ ರೈತರು ಅಳಲು ತೋಡಿಕೊಂಡರು. ತೆಂಗು, ಅಡಕೆ ಸಂಪೂರ್ಣ ಹೊಳಗಿಲ್ಲವಾದರೂ ಕೊಳವೆಬಾವಿಗಳು ಕೈಕೊಡುತ್ತಿರುವ ಬಗ್ಗೆ ಆತಂಕಪಟ್ಟರು.
ಸುದ್ದಿಗಾರರ ಜತೆ ಮಾತನಾಡಿದ ಬಿವೈವಿ, ಸಕಾಲದಲ್ಲಿ ಮಳೆ ಇಲ್ಲದೆ ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಎದುರಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಫಸಲ್​ ಬೀಮಾ ಯೋಜನೆಯ ವಿಮಾ ಯೋಜನೆಗೆ ಹಣ ಕಟ್ಟಲೂ ರೈತರಿಗೆ ಕಷ್ಟವಾಗಿದೆ. ಸರ್ಕಾರವೇ ರೈತರ ವಿಮಾ ಹಣ ಪಾವತಿಸಬೇಕು, ಪ್ರತಿ ತಾಲೂಕಿಗೆ ಹೆಚ್ಚುವರಿಯಾಗಿ ತಲಾ ಇನ್ನೂ ಎರಡು ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಕೇವಲ ಕೇಂದ್ರ ಸರ್ಕಾರಕ್ಕೆ ಪತ್ರಬರೆದು ಕೈಕಟ್ಟಿ ಕೂರುವುದು ಸರಿಯಲ್ಲ. ತಕ್ಷಣ ಹತ್ತು ಸಾವಿರ ಕೋಟಿ ರೂ ಬಿಡುಗಡೆ ಮಾಡಿ ಕುಡಿಯುವ ನೀರು ಮತ್ತಿತರ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು. ತುಮಕೂರು ಜಿಲ್ಲೆಯ ಎಲ್ಲಾ ಹತ್ತು ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿ ತುರ್ತು ಪರಿಹಾರ ಕಾರ್ಯ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮಾಂತರ ಶಾಸಕ ಬಿ.ಸುರೇಶ್​ಗೌಡ ಮಾತನಾಡಿ, ರೈತರು ಚೆನ್ನಾಗಿದ್ದರೆ ದೇಶ ಚೆನ್ನಾಗಿರುತ್ತಾರೆ. ಕರ್ನಾಟಕದಲ್ಲಿ ಈ ಬಾರಿ ಶೇ.70ರಷ್ಟು ಮಳೆ ಬಿದ್ದಿಲ್ಲ, ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು ರಾಜ್ಯ ಸರ್ಕಾರ ಪರಿಹಾರ ಕ್ರಮಗಳನ್ನು ಆರಂಭಿಸಿ ರೈತರನ್ನು ಉಳಿಸಿಬೇಕು. ತಕ್ಷಣ ಹತ್ತು ಸಾವಿರ ಕೋಟಿ ರೂ. ಬಿಡುಗಡೆ ಮಾಡಿ ಬರಪರಿಹಾರ ಕಾರ್ಯ ತ್ವರಿತವಾಗಿ ಆರಂಭಿಸಬೇಕು ಎಂದು ಒತ್ತಾಯಿಸಿದರು.
ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್​, ದೊಡ್ಡಬಳ್ಳಾಪುರ ಶಾಸಕ ಧೀರಜ್​ ಮುನಿರಾಜು, ಮಾಜಿ ಶಾಸಕರಾದ ಚಿದಾನಂದ ಎಂ.ಗೌಡ, ವೈ.ಎ. ನಾರಾಯಣಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್​ ಹೆಬ್ಬಾಕ, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಮುಖಂಡರಾದ ಓಂಕಾರ್​, ವೈ.ಹೆಚ್​.ಹುಚ್ಚಯ್ಯ ಮತ್ತಿತರರು ಇದ್ದರು.
ಸೋಮಣ್ಣ, ಜೆಸಿಎಂ, ಮಸಾಲೆ ಸೇರಿ ಹಲವರ ಗೈರು!
ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬರ ಅಧ್ಯಯನ ಪ್ರವಾಸದ ಸಂದರ್ಭದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ, ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ, , ಬಿ.ಸಿ.ನಾಗೇಶ್​, ಮಸಾಲೆ ಜಯರಾಮ್​, ರಾಜೇಶ್​ಗೌಡ ಸೇರಿದಂತೆ ಸಾಕಷ್ಟು ಮುಖಂಡರು ಗೈರಾಗಿದ್ದು ವಿಶೇಷವಾಗಿತ್ತು. ಮಾಜಿ ಸಂಸದ ಜಿ.ಎಸ್​.ಬಸವರಾಜು ತುಮಕೂರಿನ ಕೊಲ್ಲಾಪುರದಮ್ಮ ದೇವಾಲಯದಲ್ಲಿ ಜತೆಯಲ್ಲಿ ಪೂಜೆ ಸಲ್ಲಿಸಿದರು.
ಜಿಲ್ಲಾ ಮಟ್ಟದ ಪ್ರವಾಸವಾಗಿದ್ದರೂ ಜಿಲ್ಲಾ ಮಟ್ಟದ ಮುಖಂಡರನ್ನು ಒಗ್ಗೂಡಿಸದೇ ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಸೀಮಿತವಾಗಿ ಬರ ಅಧ್ಯಯನ ಪ್ರವಾಸ ನಡೆಸಿದಂತೆ ಭಾಸವಾಯಿತು. ಬರ ವೀಕ್ಷಣೆಗೆ ಸಾಕಷ್ಟು ಪ್ರದೇಶಗಳಿದ್ದರೂ ತುಮಕೂರು ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಮಳೆ ಬೀಳುವ ದೇವರಾಯನದುರ್ಗ ಅರಣ್ಯ ಪ್ರದೇಶದ ಸುತ್ತಮುತ್ತಲ ಹೊಲಗಳಲ್ಲಿ ಅಧ್ಯಯನ ಪ್ರವಾಸಕ್ಕೆ ಸ್ಥಳ ಗುರುತಿಸಿದ್ದರ ಬಗ್ಗೆಯೂ ಪಕ್ಷದ ಮುಖಂಡರೇ ಗೊಣಗಾಡುತ್ತಿದ್ದರು.

ಪಕ್ಷದ 7 ತಂಡಗಳು ರಾಜ್ಯದ 30 ಜಿಲ್ಲೆಗಳಲ್ಲಿ ಬರ ಅಧ್ಯಯನ ನಡೆಸುತ್ತಿವೆ. ತುಮಕೂರು ಜಿಲ್ಲೆ ಕಂಡು ಕೇಳರಿಯದ ಭೀಕರ ಬರ ಎದುರಿಸುತ್ತಿದೆ. ಬೆಳೆ ವಿಮೆ ಕಂತಿಗೆ ಜಿಲ್ಲೆಯ ಪ್ರತಿಯೊಂದು ಕ್ಷೇತ್ರಕ್ಕೂ ರಾಜ್ಯ ಸರ್ಕಾರ 50 ಲಕ್ಷ ಬಿಡುಗಡೆ ಮಾಡಬೇಕು. ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿಗೆ ಮೊದಲ ಆದ್ಯತೆ ನೀಡಬೇಕು.

ಬಿ.ವೈ.ವಿಜಯೇಂದ್ರ
ಬಿಜೆಪಿ ರಾಜ್ಯಾಧ್ಯಕ್ಷ
ಕುಂಚಿಟಿಗ ಮಹಾ ಸಂಸ್ಥಾನ ಮಠಕ್ಕೆ ಭೇಟಿ:
ಕುಂಚಿಟಿಗ ಮಹಾಸಂಸ್ಥಾನ ಮಠಕ್ಕೆ ಭೇಟಿ ನೀಡಿದ ವಿಜಯೇಂದ್ರ ಮಠದ ಪೀಠಾಧ್ಯಕ್ಷ ಶ್ರೀಹನುಮಂತನಾಥ ಸ್ವಾಮೀಜಿ ಆಶೀರ್ವಾದ ಪಡೆದರು.
ಬರದಿಂದ ರೈತರು ಸಂಕಷ್ಟದಲ್ಲಿದ್ದು ಸರ್ಕಾರ ನೆರವಿಗೆ ಬರಬೇಕು ಪೂರ್ಣಪ್ರಮಾಣದ ಸಚಿವ ಸಂಪುಟ ಕೂಡ ಅಸ್ತಿತ್ವಕ್ಕೆ ಬಂದಿದ್ದು, ಸರ್ಕಾರ
ಜನರ ಬಳಿಗೆ ಬರಬೇಕಿದೆ ಎಂದು ಸ್ವಾಮೀಜಿ ಕೂಡ ಒತ್ತಾಯಿಸಿದರು.
ಕಳೆದ ಹತ್ತು ವರ್ಷಗಳಲ್ಲಿ ಶ್ರೀಮಠ ಸಾಧಿಸಿರುವ ಸಾಧನೆ ಅನನ್ಯವಾಗಿದ್ದು, ಕೇವಲ ಧಾರ್ಮಿಕವಾಗಿ ಅಲ್ಲದೆ, ಶೈಕ್ಷಣಿಕವಾಗಿ ಸಾಮಾಜಿಕವಾಗಿ, ಜಿಲ್ಲೆಯಲ್ಲಿ ಅತ್ಯುತ್ತಮ ಶಕ್ತಿಕೇಂದ್ರವಾಗಿ ಮಠ ಬೆಳೆದಿದೆ. ಯಡಿಯೂರಪ್ಪ ಅವರೂ ಮಠಕ್ಕೆ ಭೇಟಿ ನೀಡಿದ್ದರು ಎಂದು ವಿಜಯೇಂದ್ರ ಸ್ಮರಿಸಿದರು.