ತುಮಕೂರಿನಲ್ಲಿ ಮಹಾತ್ಮಗಾಂಧಿ ಒಳಾಂಗಣ ಕ್ರೀಡಾಂಗಣಕ್ಕೆ ಡಾ.ಜಿ.ಪರಮೇಶ್ವರ್​ ಹೆಸರಿಟ್ಟಿರುವುದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ಸಂಜೆ ಪ್ರತಿಭಟನೆ ನಡೆಸಿದರು. ಟಿ.ಎಚ್​.ಹನುಮಂತರಾಜು, ಟಿ.ಕೆ.ಧನುಷ್​, ಬಿ.ಎಚ್​.ನವಚೇತನ್​, ಸಂದೀಪ್​ಗೌಡ, ಎಚ್​.ಎಂ.ರವೀಶಯ್ಯ, ಕೆ.ವೇದಮೂರ್ತಿ, ಮಲ್ಲಿಕಾರ್ಜುನ್​, ಗಣೇಶ್​ ಪ್ರಸಾದ್​, ಸತ್ಯಮಂಗಲ ಜಗದೀಶ್​ ಮತ್ತಿತರರು ಇದ್ದರು. 
ತುಮಕೂರು

ಕ್ರೀಡಾಂಗಣಕ್ಕೆ ಪರಂ ಹೆಸರಿಗೆ ಬಿಜೆಪಿ ವಿರೋಧ

ಪ್ರಮುಖ ಮುಖ್ಯಾಂಶಗಳು

  • ತುಮಕೂರಲ್ಲಿ ಹೆಚ್ಚಿದ ಪ್ರತಿಭಟನೆ ಕಿಚ್ಚು
  • ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು
  • ಅಹೋರಾತ್ರಿ ಧರಣಿಗೆ ಮುಂದಾಗಿದ್ದ ಬಿಜೆಪಿ
ತುಮಕೂರು: ಮಹಾತ್ಮ ಗಾಂಧಿ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಅವರ ಹೆಸರು ಇಡಲು ಮುಂದಾಗಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಸ್ಮಾರ್ಟ್​ಸಿಟಿ ಯೋಜನೆ ಅಡಿ ನಿರ್ಮಿಸಿರುವ ಒಳಾಂಗಣ ಕ್ರೀಡಾಂಗಣಕ್ಕೆ ಪರಂ ಹೆಸರು ಇಟ್ಟಿ ನಾಮಲಕ ಅಳವಡಿಸಿರುವುದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ಸಂಜೆ ಕ್ರೀಡಾಂಗಣ ಎದುರು ಅಹೋರಾತ್ರಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಜಿಲ್ಲಾಡಳಿತಕ್ಕೆ ಇದು ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ರಾತ್ರೋರಾತ್ರಿ ಮಹಾತ್ಮಗಾಂಧಿ ಕ್ರೀಡಾಂಗಣ ಮುಂಭಾಗದ ಒಳಾಂಗಣ ಕ್ರೀಡಾಂಗಣದಲ್ಲಿ "ಡಾ.ಜಿ.ಪರಮೇಶ್ವರ ಒಳಾಂಗಣ ಕ್ರೀಡಾ ಸಂಕೀರ್ಣ' ಕನ್ನಡ, ಇಂಗ್ಲೀಷ್​ ನಾಮಫಲಕಗಳು ಅಳವಡಿಸಿದ್ದು ಇದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದರು. ಸುದ್ದಿ ತಿಳಿಯುತ್ತಿದ್ದಂತೆ ಮಹಾತ್ಮಗಾಂಧಿ ಕ್ರೀಡಾಂಗಣದ ಎರಡು ಬದಿ ರಸ್ತೆಗಳನ್ನು ಬಂದ್​ ಮಾಡಿದ ಪೊಲೀಸರು ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನಕ್ಕೆ ನಡೆಸಿದರು.
ಬಿಜೆಪಿ ಪ್ರತಿಭಟನೆ: ಸ್ಮಾರ್ಟ್​ಸಿಟಿ ಯೋಜನೆ ಅಡಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಿದ್ದು ಪರಂ ಹೆಸರನ್ನು ಇಡುವ ಜಿಲ್ಲಾಡಳಿತದ "ಓಲೈಕೆ' ಪ್ರಯತ್ನಕ್ಕೆ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದರಲ್ಲದೆ ಎಲ್ಲಿಯೂ ಕೇಂದ್ರ ಸರ್ಕಾರದ ಲಾಂಛನಗಳನ್ನು ಕಾಣಿಸದೇ ಇರುವುದಕ್ಕೆ ಘೋಷಣೆಗಳನ್ನು ಕೂಗಿದರು.
ಬಿಜೆಪಿ ಬಾವುಟ, ಮಹಾತ್ಮ ಗಾಂಧಿ ಭಾವಚಿತ್ರ ಪ್ರದರ್ಶಿಸುತ್ತಾ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಡಾ.ಪರಮೇಶ್ವರ್​ ಹೆಸರನ್ನು ತೆಗೆದು ಮಹಾತ್ಮ ಗಾಂಧಿ ಹೆಸರನ್ನೇ ಉಳಿಸಬೇಕು ಎಂದು ಒತ್ತಾಯಿಸಿ, ಡಾ.ಪರಮೇಶ್ವರ್​ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಪೊಲೀಸರು ಮೌನವಹಿಸಿದರು.
ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ನಗರ ಬಿಜೆಪಿ ಮಾಜಿ ಅಧ್ಯಕ್ಷ ಟಿ.ಎಚ್​.ಹನುಮಂತರಾಜು ಮಾತನಾಡಿ, ಶಿಥಿಲಗೊಂಡಿದ್ದ ಮಹಾತ್ಮ ಗಾಂಧಿ ಕ್ರೀಡಾಂಗಣವನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸ್ಮಾರ್ಟ್​ ಸಿಟಿ ಯೋಜನೆಯಡಿ ಸುಮಾರು 60 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿಮಾರ್ಣ ಮಾಡಲು ಶಾಸಕ ಜಿ.ಬಿ.ಜ್ಯೋತಿಗಣೇಶ್​ ಕಾಳಜಿ ವಹಿಸಿದ್ದರು. ಏನೂ ಮಾಡದ ಸಚಿವ ಡಾ.ಪರಮೇಶ್ವರ್​ ಅವರು ಯಾರೋ ಮಾಡಿದ ಕೆಲಸಕ್ಕೆ ತಮ್ಮ ಹೆಸರು ಹಾಕಿಕೊಂಡು ಚಿಲ್ಲರೆ ಪ್ರಚಾರ ಪಡೆಯಲು ಹೊರಟಿದ್ದಾರೆ ಎಂದು ಹರಿಹಾಯ್ದರು.
ಮಹಾತ್ಮ ಗಾಂಧಿಯನ್ನು ದತ್ತು ಪಡೆದವರಂತೆ ಪ್ರಚಾರ ಮಾಡುವ ಕಾಂಗ್ರೆಸ್​ ನಾಯಕರು ಇಲ್ಲಿ ಗಾಂಧಿ ಹೆಸರನ್ನೇ ತೆಗೆದು ತಮ್ಮ ಹೆಸರನ್ನು ಇಟ್ಟುಕೊಳ್ಳುವ ಕೀಳುಮಟ್ಟಕ್ಕೆ ಇಳಿದಿದ್ದಾರೆ. ಕ್ರೀಡಾಂಗಣಕ್ಕೆ ಕ್ರೀಡಾಪಟುಗಳ ಹೆಸರು ಇಡಬೇಕಾದ ಪರಿಸ್ಥಿತಿ ಬಂದರೆ ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡಿರುವ ಅನೇಕ ಕ್ರೀಡಾಪಟುಗಳು ನಮ್ಮಲ್ಲಿದ್ದಾರೆ, ಅವರ ಹೆಸರಿಡಲಿ. ಕ್ರೀಡಾಂಗಣಕ್ಕೆ ಡಾ.ಪರಮೇಶ್ವರ್​ ಹೆಸರಿಡುವ ಪ್ರಯತ್ನ ಕೈ ಬಿಟ್ಟು ಮಹಾತ್ಮ ಗಾಂಧಿ ಹೆಸರನ್ನೇ ಉಳಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂದೀಪ್​ಗೌಡ, ಜಿಲ್ಲಾ ಕಾರ್ಯದರ್ಶಿ ಎಚ್​.ಎಂ.ರವೀಶಯ್ಯ, ನಗರ ಅಧ್ಯಕ್ಷ ಟಿ.ಕೆ.ಧನುಷ್​, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಿ.ಎಚ್​. ನವಚೇತನ್​, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ವೇದಮೂರ್ತಿ, ನಗರಪಾಲಿಕೆ ಮಾಜಿ ಸದಸ್ಯರಾದ ಮಲ್ಲಿಕಾರ್ಜುನ್​, ಇಂದ್ರಕುಮಾರ್​, ಮುಖಂಡರಾದ ಪುಟ್ಟರಾಜು, ಮಹೇಶ್​ಬಾಬು,ಗಣೇಶ್​ಪ್ರಸಾದ್​, ಸತ್ಯಮಂಗಲ ಜಗದೀಶ್​, ಕುಮಾರ್​, ಹನುಮಂತರಾಜು, ಗಂಗೇಶ್​, ಪ್ರೀತಂ, ರುದ್ರೇಶ್​, ಪ್ರಸನ್ನಕುಮಾರ್​, ವೆಂಕಟೇಶಾಚಾರ್​ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಹಿರಿಯ ರಾಜಕಾರಣಿ ಡಾ.ಪರಮೇಶ್ವರ್​ ಅವರು ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ, ಇಂತಹವರು ಕೇವಲ ಒಂದು ಒಳಾಂಗಣ ಕ್ರೀಡಾಂಗಣಕ್ಕೆ ತಮ್ಮ ಹೆಸರು ಬಯಸುವುದು ಕ್ಷುಲ್ಲಕ. ತಮ್ಮ ಹೆಸರು ಇಡದಂತೆ ತಮ್ಮ ಹಿಂಬಾಲಕರಿಗೆ ಹೇಳಿ ನಿರ್ಧಾರ ಹಿಂಪಡೆಯುವುದು ಗೌರವ.
ಬಿ.ಸುರೇಶಗೌಡ
ಗ್ರಾಮಾಂತರ ಶಾಸಕ
ಅಧಿಕಾರದ ಕೊನೆಯ ಹಂತದಲ್ಲಿ ರಾಜಕಾರಣಿಗಳ ಹೆಸರನ್ನು ಇಡುವುದು, ಬಯಸುವುದು ಸೂಕ್ತ ಹೊರತು, ಈಗಲ್ಲ. ಕೇವಲ ಒಳಾಂಗಣ ಕ್ರೀಡಾಂಗಣಕ್ಕೆ ತಮ್ಮ ಹೆಸರು ಹಾಕಿಸಿಕೊಳ್ಳುವುದು ಅವರಿಗೆ ಶೋಭೆಯಲ್ಲ, ಇದಕ್ಕಿಂಥಾ ದೊಡ್ಡದಕ್ಕೆ ಇವರ ಹೆಸರಿಡುವಂತಾಗಬೇಕು. ಕ್ರೀಡಾಂಗಣದ ಹೆಸರು ಪ್ರಯತ್ನ ಕೈ ಬಿಟ್ಟು ಈಗಿರುವಂತೆ ಮಹಾತ್ಮ ಗಾಂಧಿಯ ಹೆಸರನ್ನು ಮುಂದುವರೆಸಲಿ.
ಜಿ.ಬಿ.ಜ್ಯೋತಿಗಣೇಶ್​
ನಗರ ಶಾಸಕ
ವಶಕ್ಕೆ ಪಡೆದ ಪೊಲೀಸರು !
ಪರಂ ಹೆಸರು ಕೈಬಿಡುವಂತೆ ಒತ್ತಾಯಿಸಿ ಅಹೋರಾತ್ರಿ ಹೋರಾಟಕ್ಕೆ ಮುಂದಾಗಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಲವಂತವಾಗಿ ವಶಕ್ಕೆ ಪಡೆದು ವ್ಯಾನ್​ಗಳಲ್ಲಿ ತುಂಬಿಕೊಂಡು ಡಿಎಆರ್​ ಮೈದಾನಕ್ಕೆ ತೆರಳಿದರು. ರಾತ್ರಿ ಇಡೀ ಪ್ರತಿಭಟನೆ ನಡೆಸುವ ಪ್ರತಿಭಟನಾಕಾರರನ್ನು ಪೊಲೀಸರು "ಬಲ'ಬಳಸಿ ಜಿಲ್ಲಾಡಳಿತ ತಡೆಯಿತು.