ತುಮಕೂರಿನಲ್ಲಿ ರಾಜ್ಯ ಸರ್ಕಾರದ ಸಾಧನಾ ಸಮಾವೇಶ ವಿರೋಧಿಸಿ ಬಿಜೆಪಿ ಶಾಸಕ ಬಿ.ಸುರೇಶಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿ.ಬಿ.ಜ್ಯೋತಿಗಣೇಶ್, ಎಚ್.ಎಸ್.ರವಿಶಂಕರ್, ಎಸ್.ಡಿ.ದಿಲೀಪ್ಕುಮಾರ್, ಟಿ.ಎಚ್.ಹನುಮಂತರಾಜು, ಧನುಷ್ ಮತ್ತಿತರರು ಇದ್ದರು.
- ಸರ್ಕಾರ ತೊಲಗಿದರೆ ಶಾಪವಿಮೋಚನೆ
- ಜನವಿರೋಧಿ ಸಮಾವೇಶ
- ಗ್ರಾಮಾಂತರ ಶಾಸಕ ಬಿ.ಸುರೇಶಗೌಡ
ತುಮಕೂರು: ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದ್ದು ಅದನ್ನು ಮುಚ್ಚಿಕೊಳ್ಳಲಿಕ್ಕೆ ಮಾಡುತ್ತಿರುವ ಇದು ಸಾಧನಾ ಸಮಾವೇಶ ಅಲ್ಲ, ಇದು ಶೂನ್ಯ ಸಮಾವೇಶ. ಇಂತಹ ಜನವಿರೋಧಿ ಸಮಾವೇಶವನ್ನು ಬಿಜೆಪಿ ಬಹಿಷ್ಕರಿಸಲಿದೆ ಎಂದು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ 3 ವರ್ಷ ತುಂಬಿದ ಸಂದರ್ಭದಲ್ಲಿ ನಗರದಲ್ಲಿ ಸಾರ್ಥಕ ಸೇವಾ ಸಮರ್ಪಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಯಾವ ಪುರುಷಾರ್ಥಕ್ಕೆ ಈ ಸಮಾವೇಶ ಮಾಡುತ್ತಿದ್ದಾರೆ? ಭ್ರಷ್ಟಾಚಾರ, ದುರಾಡಳಿತವೇ ರಾಜ್ಯ ಕಾಂಗ್ರೆಸ್ ಸರ್ಕಾರದ ಮೂರು ವರ್ಷದ ಸಾಧನೆಯಾಗಿದೆ. ಕೂಡಲೇ ರಾಜೀನಾಮೆ ಕೊಡಬೇಕು. ಈ ಸರ್ಕಾರ ತೊಲಗಿದ್ದೇ ಆದಲ್ಲಿ ರಾಜ್ಯಕ್ಕೆ ಮೂರು ವರ್ಷಗಳಿಂದ ಹಿಡಿದಿರುವ ಶಾಪವಿಮೋಚನೆ ಆಗಲಿದೆ ಎಂದು ಹರಿಹಾಯ್ದರು.
ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್ ಕಮೀಷನ್ ಸರ್ಕಾರ ಎಂದು ಟೀಕಿಸುತ್ತಿದ್ದ ಕಾಂಗ್ರೆಸ್ಸಿಗರ ಮೇಲೆ ಗುತ್ತಿಗೆದಾರರು ಈಗ 80 ಪರ್ಸೆಂಟ್ ಕಮೀಷನ್ ಸರ್ಕಾರ ಎಂಬ ಆರೋಪ ಹೊರಿದ್ದಾರೆ. ಈ ಆರೋಪಕ್ಕೆ ಸಿಎಂ, ಡಿಸಿಎಂ ಆಗಲಿ ಪ್ರತಿಕ್ರಿಯೆ ನೀಡಿಲ್ಲದೆ ಮೌನವಹಿಸಿರುವುದು ಭ್ರಷ್ಟಾಚಾರವನ್ನು ಒಪ್ಪಿಕೊಂಡಂತಾಗಿದೆ. ಇನ್ನೂ ಸಿದ್ದರಾಮಯ್ಯ ತಮ್ಮ ಪತ್ನಿ ಹೆಸರಿನಲ್ಲಿ ಅಕ್ರಮವಾಗಿ ಮೂಡಾ ನೀವೇಶನ ಪಡೆದ ಪ್ರಕರಣದಲ್ಲಿ 14 ನಿವೇಶನಗಳನ್ನು ವಾಪಸ್ ನೀಡಿರುವುದು ಅಕ್ರಮ ಒಪ್ಪಿಕೊಂಡಂತಾಗಿದೆ. ಈ ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿರುವ ಕುರ್ಚಿ ಕಿತ್ತಾಟ ವಿಚಾರಗಳು ಮಾಧ್ಯಮಗಳಲ್ಲಿ ಪ್ರತಿನಿತ್ಯ ಸುದ್ದಿಯಾಗುತ್ತಲೇ ಇವೆ. ಈ ಸರ್ಕಾರದಲ್ಲಿ ಹಲವಾರು ಗುಂಪು, ಬಣಗಳಿದ್ದು ಆಡಳಿತ ದಿಕ್ಕುತಪ್ಪಿದೆ ಎಂದರು.
ಈ ಸರ್ಕಾರ ಗ್ಯಾರಂಟಿ ಯೋಜನೆ ಕಾರ್ಯಕ್ರಮಗಳನ್ನು ಸರಿಯಾಗಿ ಕೊಡುತ್ತಿಲ್ಲ. ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂ. ಹಣ ತಲುಪುತ್ತಿಲ್ಲ. 5 ಸಾವಿರ ಕೋಟಿ ಗೃಹಲಕ್ಷಿ$್ಮ ಹಣ ಫಲಾನುಭವಿಗಳಿಗೆ ತಲುಪಿಲ್ಲವೆಂಬುದುನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ತಮ್ಮ ಸರ್ಕಾರದ ಲೋಪವನ್ನು ಒಪ್ಪಿಕೊಂಡಿದ್ದಾರೆ. ಶಾಲಾ ಕಟ್ಟಡಗಳಿಗೆ ಬಣ್ಣ ಬಳಿಯಲು, ಒಂದು ಹಿಡಿ ಮಣ್ಣು ಹಾಕಲು ಈ ಸರ್ಕಾರದ ಬಳಿ ಕಾಸಿಲ್ಲ. ಮೂರು ವರ್ಷದಲ್ಲಿ 8 ಲಕ್ಷ ಕೋಟಿ ಸಾಲ ಮಾಡಿದ್ದು ಸಾಲದ ಹಣವನ್ನು ಗ್ಯಾರಂಟಿಗಳಿಗೆ ಬಳಕೆ ಮಾಡುತ್ತಾ ಅಭಿವೃದ್ಧಿ ಶೂನ್ಯವಾಗಿದೆ. ಇನ್ನೂ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದ್ದು ಈ ಸರ್ಕಾರ ತೊಲಗಿದರೆ ಸಾಕು ಎಂದು ರಾಜ್ಯದ ಜನ ಕಾಯುತ್ತಿದ್ದಾರೆ. ಇದೊಂದು ಜನ, ರೈತ, ಬಡವರ ವಿರೋಧಿ ಸಮಾವೇಶ ಎಂದು ವಾಗ್ಧಾಳಿ ನಡೆಸಿದರು.
ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಎಸ್. ರವಿಶಂಕರ್ , ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ, ರಾಜ್ಯ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್, ಮುಖಂಡ ಎಸ್.ಡಿ. ದಿಲೀಪ್ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಎಚ್. ಹನುಮಂತರಾಜು, ಕಾರ್ಯದರ್ಶಿ ಕೆ. ವೇದಮೂರ್ತಿ, ನಗರ ಅಧ್ಯಕ್ಷ ಧನುಷ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುಮಿತ್ರಾದೇವಿ, ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಎ.ಹೆಚ್. ಆಂಜನಪ್ಪ ಮತ್ತಿತರರು ಹಾಜರಿದ್ದರು.
ನಮ್ಮ ಮೆಟ್ರೋ ತುಮಕೂರಿಗೆ ತರುತ್ತೀವಿ ಅಂತ ಪರಮೇಶ್ವರ್ 3 ವರ್ಷದಿಂದ ಹೇಳುತ್ತಲೇ ಇದ್ದು ಹಳಿ ಇಲ್ಲದೇ ರೈಲು ಓಡಿಸುತ್ತಲೇ ಇದ್ದಾರೆ. ಇನ್ನೂ ಕ್ರಿಕೆಟ್ ಸ್ಟೇಡಿಯಂ ಶಂಕಸ್ಥಾಪನೆ ನೆರವೇರಿಸಿ ವರ್ಷಗಳೇ ಆದರೂ ಇನ್ನೂ ಕಾಮಗಾರಿ ಆರಂಭಿಸಿಲ್ಲ. ಪದೇ ಪದೇ ಸಿದ್ದರಾಮಯ್ಯ ತುಮಕೂರಿಗೆ ಬರುತ್ತಿದ್ದು ಅವರು ಈವರೆಗೆ ಶಂಕುಸ್ಥಾಪನೆ ನೆರವೇರಿಸುವ ಕಾಮಗಾರಿಗಳಿಗೆ ಒಂದು ಪೈಸೆ ಕೂಡ ದುಡ್ಡು ಬಂದಿಲ್ಲ. ಈ ಬಗ್ಗೆ ಶ್ವೇತಪತ್ರ ಹೊರಡಿಸಲಿ. ಇಂಧನ ಬೆಲೆ ಏರಿದ್ದಕ್ಕೆ ಮೋದಿ ಅವರನ್ನು ಟೀಕಿಸುವ ಈ ಕಾಂಗ್ರೆಸ್ಸಿಗರು ಅವರ ಕಾಲಿನ ಧೂಳಿಗು ಸಮಾನ ಇಲ್ಲ.