ತುಮಕೂರು ಗ್ರಾಮಾಂತರ ಬಿಜೆಪಿ ಕಾರ್ಯಾಲಯದಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಅವರ 101ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಅಟಲ್​ ಸ್ಮೃತಿ ದಿವಸ್​ ಕಾರ್ಯಕ್ರಮದಲ್ಲಿ ಸುರೇಶಗೌಡ ಭಾರತಮಾತಾ, ವಾಜಪೇಯಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಎಚ್​.ಎಸ್​.ರವಿಶಂಕರ್​, ವೈ.ಎಚ್​.ಹುಚ್ಚಯ್ಯ, ರಾಜಶೇಖರ್​, ಸುಮಿತ್ರಮ್ಮ, ನರಸಿಂಹಮೂರ್ತಿ, ಸಿದ್ದೇಗೌಡ ಮತ್ತಿತರರು ಇದ್ದರು.  
ತುಮಕೂರು

ಸಮೃದ್ಧ ಭಾರತದ ಕನಸು ಕಂಡಿದ್ದ ಅಟಲ್​

ಪ್ರಮುಖ ಮುಖ್ಯಾಂಶಗಳು

  • ಅಟಲ್​ ಸ್ಮೃತಿ ದಿವಸ್​
  • ಗ್ರಾಮಾಂತರ ಬಿಜೆಪಿ ಕಾರ್ಯಾಲಯ
  • ಶಾಸಕ ಬಿ.ಸುರೇಶಗೌಡ
ತುಮಕೂರು: ಸುಭದ್ರ, ಸಮೃದ್ಧ ಭಾರತದ ಕನಸು ಕಂಡಿದ್ದ ಅಟಲ್​ ಬಿಹಾರಿ ವಾಜಪೇಯಿ ಅವರು ಸವರ್ಣ ಚತುಷ್ಪಥ ರಸ್ತೆ ಯೋಜನೆ ಮೂಲಕ ಹೆದ್ದಾರಿಗಳ ಅಭಿವೃದ್ಧಿಪಡಿಸಿ ದೇಶ ಒಗ್ಗೂಡಿಸಿದ ದೂರದೃಷ್ಟಿತ್ವವುಳ್ಳ ನಾಯಕರಾಗಿದ್ದರು ಎಂದು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ಹೇಳಿದರು.
ತಾಲೂಕಿನ ಬಾಣಾವಾರದ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಕಾರ್ಯಾಲಯ ಶಕ್ತಿಸೌಧದಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಅವರ 101ನೇ ಜನ್ಮದಿನದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಅಟಲ್​ ಸ್ಮೃತಿ ದಿವಸ್​ ಕಾರ್ಯಕ್ರಮದಲ್ಲಿ ಮಾತನಾಡಿದ ಅರು, ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿ ಪಟ್ಟಣಗಳ ನಡುವೆ ಸಂಪರ್ಕ ಕಲ್ಪಿಸಿ ಅಭಿವೃದ್ಧಿಗೆ ಆದ್ಯತೆ ಕೊಟ್ಟಿದ್ದರು. ಅಜಾತಶತ್ರು ವಾಜಪೇಯಿ ಅವರು ಸಮಾಜಕ್ಕೆ ತಮ್ಮನ್ನೇ ಅರ್ಪಿಸಿಕೊಂಡು ಶ್ರೇಷ್ಠ ನಾಯಕ ಎಂದರು.
ವಾಜಪೇಯಿ ಪ್ರಧಾನಿಯಾಗಿದ್ದಾಗ ದೇಶದ ಅಭಿವೃದ್ಧಿಗಾಗಿ ಹಲವು ಮಹತ್ತರ ಯೋಜನೆಗಳನ್ನು ಜಾರಿಗೆ ತಂದಿದ್ದರು. ಸರ್ವ ಶಿಕ್ಷಾ ಅಭಿಯಾನ ಮೂಲಕ 6ರಿಂದ 14 ವರ್ಷದ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಖಚಿತಪಡಿಸಿಕೊಳ್ಳಲು, ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಗುಣಮಟ್ಟವನ್ನು ಸುಧಾರಿಸುವ ಕಾರ್ಯಕ್ರಮ ರೂಪಿಸಲಾಯಿತು. ನಗರ ಪ್ರದೇಶದ ಬಡವರಿಗೆ ವಸತಿ ಒದಗಿಸಲು ಸಹಾಯ ಮಾಡುವ ನಗರ ವಸತಿ ಯೋಜನೆ ಜಾರಿಗೆ ತಂದಿದ್ದರು ಎಂದು ತಿಳಿಸಿದರು.
ಜನಸಂಘದಲ್ಲಿ ಸಕ್ರಿಯವಾಗಿದ್ದ ವಾಜಪೇಯಿ ಅವರು 1980ರಲ್ಲಿ ಬಿಜೆಪಿ ಸ್ಥಾಪನೆಯಾದಾಗ ಪಕ್ಷದ ಮೊದಲ ಅಧ್ಯಕ್ಷರಾದರು. ಅವರ ಮಾರ್ಗದರ್ಶನದಲ್ಲಿ ಬಿಜೆಪಿ ಬಲವಾಗಿ, ಶಕ್ತಿಯುತವಾಗಿ ಸಂಟಿತವಾಗಿ ಅಟಲ್​ಜಿ ಪ್ರಧಾನಿಯಾದರು. ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಚ್​.ಎಸ್​.ರವಿಶಂಕರ್​ ಹೇಳಿದರು.
ದೂರದೃಷ್ಟಿ ಚಿಂತಕ ಅಟಲ್​ಜಿ ಅವರು ಪ್ರಧಾನ ಮಂತ್ರಿಯಾಗಿದ್ದಾಗ ದೇಶದ ಅಭಿವೃದ್ಧಿಗೆ ತಮ್ಮದೇ ಆದ ಯೋಜನೆಗಳನ್ನು ರೂಪಿಸಿದ್ದರು. ಆ ಸರ್ಕಾರದ ಯೋಜನೆಗಳು ಮಾದರಿಯಾಗಿ ಉಳಿದಿವೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ ಹಾಗೂ ಪ್ರಧಾನ ಮಂತ್ರಿ ಗ್ರಾಮ ಸಡಕ್​ ಯೋಜನೆ ದೇಶಾದ್ಯಂತ ಹೆದ್ದಾರಿಗಳನ್ನು ಸಂಪರ್ಕಿಸುವ ಮತ್ತು ಗ್ರಾಮೀಣ ಪ್ರದೇಶಗಳಿಗೆ ರಸ್ತೆಗಳನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆಗಳಾಗಿವೆ ಎಂದರು.
ವಾಜಪೇಯಿ ಅವರು ವಿಶ್ವ ಮೆಚ್ಚಿದ ನಾಯಕ, ಮೊರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದಾಗ ವಿದೇಶಾಂಗ ಖಾತೆ ಸಚಿವರಾಗಿದ್ದ ವಾಜಪೇಯಿ ನೆರೆಯ ದೇಶಗಳೊಂದಿಗೆ ಭಾರತ ಸೌಹಾರ್ದ ಸಂಬಂಧ ಹೊಂದುವ ಆಶಯ ಹೊಂದಿದ್ದರು. ಆ ಸಂದರ್ಭದಲ್ಲಿ ಪಾಕಿಸ್ತಾನಕ್ಕೂ ಹೋಗಿ ಬಂದಿದ್ದರು. ಅಟಲ್​ಜೀ ದೇಶದ ಅಭಿವೃದ್ಧಿ ಚಿಂತನೆಯ ಮಾದರಿ ನಾಯಕರಾಗಿದ್ದರು ಎಂದು ಜಿಲ್ಲಾ ಬಿಜೆಪಿ ಹಿರಿಯ ಉಪಾಧ್ಯಕ್ಷ, ಜಿಪಂಮಾಜಿ ಅಧ್ಯಕ್ಷ ವೈ.ಎಚ್​.ಹುಚ್ಚಯ್ಯ ಹೇಳಿದರು.
ಗ್ರಾಮಾಂತರ ಬಿಜೆಪಿ ಅಧ್ಯಕ್ಷ ರಾಜಶೇಖರ್​, ಜಿಪಂ ಮಾಜಿ ಸದಸ್ಯರಾದ ಗೂಳೂರು ಶಿವಕುಮಾರ್​, ರಾಮಚಂದ್ರಪ್ಪ, ತಾಪಂ ಮಾಜಿ ಅಧ್ಯಕ್ಷರಾದ ನರಸಿಂಹಮೂರ್ತಿ, ಗಂಗಾಂಜನೇಯ, ಹೊಳಕಲ್​ ಗ್ರಾಪಂ ಅಧ್ಯಕ್ಷ, ಬಿಜೆಪಿ ಎಸ್​ಸಿ ಮೋರ್ಚಾ ಜಿಲ್ಲಾಧ್ಯಕ್ಷ ಎಚ್​.ಎ.ಆಂಜನಪ್ಪ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುಮಿತ್ರಮ್ಮ, ಮುಖಂಡರಾದ ಸಿದ್ಧೇಗೌಡರು, ಶಂಕರಣ್ಣ, ವೈ.ಟಿ.ನಾಗರಾಜು, ಪ್ರಭಾಕರ್​, ನಾಗರತ್ನಮ್ಮ, ರೇಣುಕಮ್ಮ ಮತ್ತಿತರರು ಉಪಸ್ಥಿತರಿದ್ದರು.
ಅಟಲ್​ಜಿ ಪ್ರೇರಣೆ
ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರ ಪ್ರೇರಣೆಯಿಂದ ತಾವು ರಾಜಕಾರಣ ಪ್ರವೇಶಿಸಿದ್ದು ಇಂದಿಗೂ ನಾನು ಅವರ ಅಭಿವೃದ್ಧಿಯ ಆದರ್ಶಗಳನ್ನು ಅಳವಡಿಸಿಕೊಂಡಿದ್ದೇನೆ. ಅವರ ದಾರಿಯಲ್ಲೇ ಸಾಗಿರುವ ತಾವು ಗ್ರಾಮಾಂತರ ಕ್ಷೇತ್ರದಲ್ಲಿ ಉತ್ತಮ ರಸ್ತೆ ನಿಮಾರ್ಣಕ್ಕೆ ಆದ್ಯತೆ ನೀಡಿದ್ದು, 10-15 ವರ್ಷಗಳ ಹಿಂದೆ ನಿರ್ಮಿಸಿದ್ದ ರಸ್ತೆಗಳು ಈಗಲೂ ಉತ್ತಮ ಗುಣಮಟ್ಟದಿಂದ ಕೂಡಿರುವುದಕ್ಕೆ ಸಾಯಾಗಿವೆ ಎಂದು ಸುರೇಶಗೌಡ ಹೇಳಿದರು.