ತುರುವೇಕೆರೆ ಪೊಲೀಸರು ಬಂಧಿಸಿರುವ ಆರೋಪಿಗಳು
- ರಾಜ್ಯದೆಲ್ಲೆಡೆ ದೇವಾಲಯಗಳಿಗೆ ಕನ್ನ ಹಾಕಿದ್ದ ತಂಡ
- ತುರುವೇಕೆರೆ ಪೊಲೀಸರ ಕಾರ್ಯಾಚರಣೆ
- ಬಂಧಿತ ಆರು ಆರೋಪಿಗಳಿಂದ 14 ಲಕ್ಷ ರೂ. ಮೌಲ್ಯದ ಚಿನ್ನ ವಶ
ತುಮಕೂರು: ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್ ಬುಧವಾರ ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹೆಚ್ಚಿರುವುದನ್ನು ತಿಳಿಸಿದರು.
ಜೂ.19ರಂದು ರಾತ್ರಿ ತುರುವೇಕೆರೆ ತಾಲೂಕು ಜೋಡುಗಟ್ಟೆ ಗ್ರಾಮದ ಬಳಿ ಬಸ್ ನಿಲ್ದಾಣದ ಬಳಿ ದರೋಡೆಗೆ ಸಂಚು ರೂಪಿಸಿದ್ದ ಆರು ಆರೋಪಿಗಳನ್ನು ಬಂಧಿಸಿದ್ದು ಅವರಿಂದ ರಾಜ್ಯದ ವಿವಿಧೆಡೆ ದೇವಾಲಯಗಳಲ್ಲಿ ಕಳ್ಳತನ ಮಾಡುತ್ತಿದ್ದ ಪ್ರಕರಣವನ್ನು ತುರುವೇಕೆರೆ ಠಾಣೆ ಪೊಲೀಸರು ಪತ್ತೆ ಮಾಡಿದ್ದಾರೆ.
ಹಿರಿಸಾವೆಯ ಲಯನ್ ಎಟಿಎಂ(29), ಮಧುಸೂಧನ(24), ಮಾಗಡಿ ತಾಲೂಕು ಜೋಗಿಪಾಳ್ಯದ ಮಂಜುನಾಥ(28), ನಾಗಮಂಗಲ ತಾಲೂಕು ಗೊಂಡೇನಗಳ್ಳಿ ಚಂದನ್(19), ನರಸಿಂಹಮೂರ್ತಿ(32) ಹಾಗೂ ಮಹಾಲಕ್ಷಿ$್ಮ ಲೇಔಟ್ ಬಾಬು(22) ಬಂಧಿತ ಆರೋಪಿಗಳು.
ಆರೋಪಿಗಳು ತಿಪಟೂರು. ಚಿ.ನಾ.ಹಳ್ಳಿ, ಕೊರಟಗೆರೆ, ಮಧುಗಿರಿ, ಶಿರಾ, ಚೆನ್ನರಾಯಪಟ್ಟಣ, ನಾಗಮಂಗಲ ತಾಲೂಕು ಠಾಣಾ ವ್ಯಾಪ್ತಿಗಳಲ್ಲಿ ದೇವಸ್ಥಾನಗಳ ಬೀಗ ಮುರಿದು ರಾತ್ರಿ ಸಮಯದಲ್ಲಿ ಕಳ್ಳತನ ಮಾಡಿ ದೇವರ ತಾಳಿ, ಚಿನ್ನದ ಒಡವೆಗಳು, ಬೆಳ್ಳಿ ಒಡವೆಗಳು ಹಾಗೂ ಹುಂಡಿ ಹಣವನ್ನು ಕಳ್ಳತನ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ.
ತುರುವೇಕೆರೆ ಪೊಲೀಸ್ ಠಾಣೆ- 8, ದಂಡಿನಶಿವರ ಪೊಲೀಸ್ ಠಾಣೆ- 1, ಕುಣಿಗಲ್ ಪೊಲೀಸ್ ಠಾಣೆ- 1, ಅಮೃತೂರು ಪೊಲೀಸ್ ಠಾಣೆ- 1, ಮಿಡಿಗೇಶಿ ಪೊಲೀಸ್ ಠಾಣೆ- 2, ತಿಪಟೂರು ಗ್ರಾಮಾಂತರ- 2, ಕೊಡಗೇನಹಳ್ಳಿ ಪೊಲೀಸ್ ಠಾಣೆ- 1, ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆ- 1, ಕೆ.ಬಿ ಕ್ರಾಸ್ ಪೊಲೀಸ್ ಠಾಣೆ- 1, ಶಿರಾ ಪೊಲಿಸ್ ಠಾಣೆ- 1, ಸಿ.ಎಸ್.ಪುರ ಪೊಲೀಸ್ ಠಾಣೆ- 1, ಕೂದುರು ಪೊಲೀಸ್ ಠಾಣೆ- 1, ಬಿಂಡಿಗನವಿಲೆ ಪೊಲೀಸ್ ಠಾಣೆ- 1 ಪ್ರಕರಣ ಸೇರಿ 22 ದೇವಸ್ಥಾನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಬಾಯ್ಬಿಟ್ಟಿದ್ದಾರೆ.
ತುರುವೇಕೆರೆ ತಾಲೂಕು ಬೆನಕೆನಕೆರೆ ವಿದ್ಯಾರಣ್ಯ ಪ್ರೌಢಶಾಲೆಯ ಬೀಗ ಮುರಿದು ಕಳ್ಳತನ ಮಾಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ,
ಆರೋಪಿಗಳಿಂದ 86 ಗ್ರಾಂ ತೂಕದ 25 ಚಿನ್ನದ ತಾಳಿ ಮತ್ತು ಇತರೆ ಚಿನ್ನದ ಒಡವೆಗಳು, 3 ಬೈಕ್ಗಳು, 1 ಆಟೋ ಹಾಗೂ 2 ಗ್ಯಾಸ್ ಸಿಲಿಂಡರ್ ಗಳು ಪತ್ತೆಯಾಗಿದ್ದು, ಇವುಗಳ ಮೌಲ್ಯ-14,19,000 ಎಂದು ಅಂದಾಜಿಸಲಾಗಿದೆ.