ತುಮಕೂರಿನ ನಗೆಮಲ್ಲಿಗೆ ಬಳಗ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಯೋಜಿಸಿದ್ದ 31ನೇ ವರ್ಷದ ಮೂರ್ಖರ ದಿನ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎಂ.ಕೆ.ನಾಗರಾಜರಾವ್ಗೆ ಗೌ.ತಿ. ದತ್ತಿ ಪ್ರಶಸ್ತಿಯನ್ನು ಕೆ.ಎಸ್.ಸಿದ್ದಲಿಂಗಪ್ಪ ಪ್ರದಾನ ಮಾಡಿದರು. ವೈ.ವಿ.ಗುಂಡುರಾವ್, ಬಾ.ಹ.ರಮಾಕುಮಾರಿ, ಡಾ.ಶೈಲಾನಾಗರಾಜ್, ವೈ.ಎಸ್.ನಂಜುಂಡಸ್ವಾಮಿ, ಮಣ್ಣೆರಾಜು, ಡಾ. ಜಿ.ನಾಗರಾಜು, ಜಿ.ಎನ್.ರಾಧಾಕೃಷ್ಣ, ಗೌ.ತಿ. ರಂಗನಾಥ್, ಗೌ.ತಿ. ವೆಂಕಟಾಚಲ ಮತ್ತಿತರರು ಇದ್ದರು.
- ಹಾಸ್ಯ ಸಾಹಿತಿ ವೈ.ವಿ.ಗುಂಡುರಾವ್
- ಗೌ.ತಿ.ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ
- ನಗೆಮಲ್ಲಿಗೆ ಬಳಗದಿಂದ ಮೂರ್ಖರ ದಿನಾಚರಣೆ
ತುಮಕೂರು: ಹಾಸ್ಯ ಮನೋಭಾವ, ಹೊಂದಾಣಿಕೆ ಮನಸ್ಥಿತಿ ಬೆಳೆಸಿಕೊಂಡರೆ ಜೀವನದಲ್ಲಿ ಶಾಂತಿ, ನೆಮ್ಮದಿ, ಆರೋಗ್ಯದಿಂದ ಬಾಳಲು ಸಾಧ್ಯವಿದೆ ಎಂದು ಹಾಸ್ಯ ಸಾಹಿತಿ ವೈ.ವಿ.ಗುಂಡುರಾವ್ ಹೇಳಿದರು.
ನಗರದ ಕನ್ನಡಭವನದಲ್ಲಿ ನಗೆಮಲ್ಲಿಗೆ ಬಳಗ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ 31ನೇ ವರ್ಷದ ಮೂರ್ಖರ ದಿನಾಚರಣೆ, ಗೌ.ತಿ. ದತ್ತಿ ಪ್ರಶಸ್ತಿ ಪ್ರದಾನ ಹಾಗೂ ಹಾಸ್ಯಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕ್ರಿಯಾಶೀಲತೆ ಬೆಳೆಸಿಕೊಂಡು ದೈನಂದಿನ ಬದುಕಿನಲ್ಲಿ ಹಾಸ್ಯ ಹುಡುಕಿ ಆನಂದಿಸಬೇಕು. ಎಲ್ಲವನ್ನೂ ವಕ್ರ ದೃಷ್ಟಿಯಲ್ಲಿ ನೋಡಿದರೆ ಹಾಸ್ಯ ಹುಟ್ಟುತ್ತದೆ. ಆದರೆ ಬದುಕನ್ನು ವಕ್ರವಾಗಿ ನೋಡಿದರೆ ತತ್ವಶಾಸ್ತ್ರ ಹುಟ್ಟುತ್ತದೆ ಎಂದರು.
ಸಾಹಿತ್ಯ ಪರಿಷತ್ತಿನ ಸಾಹಿತ್ಯ ಚಟುವಟಿಕೆಗಳಿಗೆ ಸಹಕಾರಿಯಾಗಿ ದತ್ತಿನಿಧಿ ಸ್ಥಾಪನೆ ಮಾಡುವುದು ಸ್ವಾಗತಾರ್ಹ. ನಗೆಮಲ್ಲಿಗೆ ಬಳಗದವರು ಪರಿಷತ್ತಿನಲ್ಲಿ ಗೌಡನಕಟ್ಟೆ ತಿಮ್ಮಯ್ಯ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸಿ ಅವರ ಸ್ಮರಣೆ ಹಾಗೂ ಹಾಸ್ಯ ಕಾರ್ಯಕ್ರಮಗಳು ಪ್ರತಿ ವರ್ಷ ನಡೆಸಿಕೊಂಡು ಬರುತ್ತಿದ್ದಾರೆ. ಸಾಹಿತ್ಯ, ಸಾಂಸ್ಕತಿಕ ಚಟುವಟಿಕೆಗಳಿಗೆ ಪೂರಕವಾಗಿ ಸಾರ್ವಜನಿಕರು ಪರಿಷತ್ತಿನಲ್ಲಿ ದತ್ತಿ ಸ್ಥಾಪನೆ ಮಾಡುವಂತೆ ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಹೇಳಿದರು.
ನಗೆಬರಹಗಾರ ಮಣ್ಣೆ ರಾಜು ಕಾರ್ಯಕ್ರಮ ಉದ್ಘಾಟಿಸಿದರು. ನಗೆಮಲ್ಲಿಗೆ ಬಳಗ ಅಧ್ಯಕ್ಷೆ ಬಾ.ಹ. ರಮಾಕುಮಾರಿ ಅಧ್ಯಕ್ಷತೆವಹಿಸಿದ್ದರು. ಡಾ. ಶೈಲಾ ನಾಗರಾಜ್ ಪ್ರಾಸ್ತಾಔಇಕ ನುಡಿಗಳನ್ನಾಡಿದರು.
ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಅಧ್ಯಕ್ಷ ವೈ.ಎಸ್. ನಂಜುಂಡಸ್ವಾಮಿ, ಜಿಲ್ಲಾ ಆಸ್ಪತ್ರೆಯ ತಜ್ಞವೈದ್ಯ ಡಾ. ಜಿ.ನಾಗರಾಜು ಉಪಸ್ಥಿತರಿದ್ದರು. ಜಿಲ್ಲಾ ಇಂಜಿನಿಯರ್ಸ್ ಸೇವಾ ಸಂಘದ ಅಧ್ಯಕ್ಷ ಜಿ.ಎನ್. ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಬಳಗದ ಅಬ್ಬಿನಹೊಳೆ ಸುರೇಶ್, ವಿಶ್ವನಾಥ್ ಸ್ವದೇಶಿ, ಡಿ.ವಿ.ಶೇಷಾಚಲ, ಗೌ.ತಿ. ರಂಗನಾಥ್, ಗೌ.ತಿ. ವೆಂಕಟಾಚಲ, ಸಂಕೇತ್ ಗುರುದತ್, ದೊಂಬರನಹಳ್ಳಿ ನಾಗರಾಜ್, ವೆನ್ನಲ ಕೃಷ್ಣ ಮತ್ತಿತರರು ಇದ್ದರು.
ನಾಗರಾಜರಾವ್ಗೆ ಗೌತಿ ದತ್ತಿ ಪ್ರಶಸ್ತಿ
ಕಳೆದ 31 ವರ್ಷಗಳಿಂದ ಪ್ರತಿ ಏಪ್ರಿಲ್ 1ರಂದು ಮೂರ್ಖರ ದಿನ ಹಮ್ಮಿಕೊಂಡು ಬಂದಿರುವ ನಗೆಮಲ್ಲಿಗೆ ಬಳಗದ ವತಿಯಿಂದ ಹಿರಿಯ ಸಾಹಿತಿ, ಯೋಗಗುರು ಎಂ.ಕೆ. ನಾಗರಾಜರಾವ್ ಅವರಿಗೆ 5 ಸಾವಿರ ರೂ., ನಗದು ಒಳಗೊಂಡ ಗೌಡನಕಟ್ಟೆ ತಿಮ್ಮಯ್ಯ ದತ್ತಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಪ್ರಶಸ್ತಿ ಪ್ರದಾನ ಮಾಡಿದರು.