- ಕೊಲೆಯತ್ನ, ಸ್ಫೋಟಕ ವಸ್ತುಗಳ ಕಾಯ್ದೆ ಅಡಿ ಪ್ರಕರಣ
- ಆಸ್ಪತ್ರೆಯಿಂದ ರಮ್ಯಾ ಡಿಸ್ಚಾರ್ಜ್
- ನಾಡಬಾಂಬ್ ನಿಷ್ಕ್ರಿಯಗೊಳಿಸಿದ ಬಾಂಬ್ ಸ್ಕ್ವಾಡ್
ತುಮಕೂರು: ನಾಡಬಾಂಬ್ ಸ್ಫೋಟಿಸಿಕೊಂಡ ಕಾರಿನಲ್ಲೇ ಸಜೀವ ದಹನಗೊಂಡಿದ್ದ ಭಗ್ನಪ್ರೇಮಿ, ಪ್ರೇಯಸಿಯ ಕೊಲೆಗೆ ಮೊದಲೇ ಸಂಚು ರೂಪಿಸಿಕೊಂಡು ಬಂದಿದ್ದ. ಈ ಬಗ್ಗೆ ರಮ್ಯಾ ದೂರಿನಲ್ಲಿ ತಿಳಿಸಿದ್ದು ಆತನ ವಿರುದ್ಧ ಕೊಲೆಯತ್ನ ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ಈ ನಡುವೆ ಕಾರಿನಿಂದ ಹೊರಗೆ ಎಸೆಯಲಾಗಿದ್ದ ಎರಡು ನಾಡ ಬಾಂಬ್ಗಳನ್ನು ಬಾಂಬ್ ನಿಷ್ಕ್ರಿಯ ದಳ ಶನಿವಾರ ರಾತ್ರಿ ಶಿರಾ ಕೈಗಾರಿಕಾ ಪ್ರದೇಶದಲ್ಲಿ ನಿಷ್ಕ್ರಿಯಗೊಳಿಸಿದೆ. ಬಾಂಬ್ಗಳು ಹೇಗೆ ಸಿಕ್ಕಿತೆಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ರಮ್ಯಾ ಕೊಟ್ಟ ದೂರಿನ ಹಿನ್ನೆಲೆ ಶಿರಾ ತಾಲೂಕು ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 4 ಪುಟಗಳ ದೂರಿನಲ್ಲಿ ರಮ್ಯಾ ತನ್ನ ಹಾಗೂ ನಾಗೇಂದ್ರ ಗೌಡನ 6 ವರ್ಷದ ಪ್ರೀತಿ ಬಗ್ಗೆ ಸಂಪೂರ್ಣವಾಗಿ ಬಿಚ್ಚಿಟ್ಟಿದ್ದಾಳೆ. ಪ್ರೀತಿ ಆರಂಭವಾದ ಎರಡು ವರ್ಷದ ಬಳಿಕ ನಾಗೇಂದ್ರನ ಕಿರುಕುಳ ಕೊಡಲಾರಂಭಿಸಿದ್ದ. ಕಳೆದ 4 ವರ್ಷಗಳಿಂದ ಬದಲಾದ ಆತನ ನಡವಳಿಕೆಯಿಂದ ಬೇಸತ್ತು ಇತ್ತೀಚೆಗೆ ಆತನ ಹಿಂಸೆ, ಕಿರುಕುಳ ಮಿತಿಮೀರಿದ್ದರಿಂದ ಬ್ರೇಕ್ ಅಪ್ ಮಾಡಿಕೊಳ್ಳಲು ರಮ್ಯಾ ಮುಂದಾಗಿದ್ದಳು ಎಂಬುದು ದೂರಿನಲ್ಲಿ ಬಯಲಾಗಿದೆ.
ಗಾಯಗೊಂಡಿದ್ದ ರಮ್ಯಾ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆಕೆಯನ್ನು ಪೋಷಕರು ಡಿಸ್ಜಾರ್ಜ್ ಮಾಡಿಸಿಕೊಂಡು ಅಂಕೋಲಕ್ಕೆ ಕರೆದೊಯ್ಯದಿದ್ದಾರೆ.
ಡಿಎನ್ಎ ಪರೀಕ್ಷೆ : ನಾಡಬಾಂಬ್ ಸ್ಫೋಟಿಸಿಕೊಂಡು ಸಜೀವವಾಗಿ ದಹಿಸಿಕೊಂಡಿದ್ದ ನಾಗೇಂದ್ರನ ಸುಟ್ಟುಕರಕಲಾದ ದೇಹವನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಒಳಪಡಿಸಿದ್ದಲ್ಲದೆ, ಡಿಎನ್ಎ ಪರೀಕ್ಷೆಗೆ ಅಂಗಾಂಗ ಮಾದರಿ ಪಡೆಯಲಾಯಿತು. ನಂತರ ಮಧ್ಯಾಹ್ನ ಕಳ್ಳಂಬೆಳ್ಳ ಠಾಣೆ ಪೊಲೀಸರು ನಾಗೇಂದ್ರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ರಮ್ಯಾ ನೀಡಿದ ದೂರಿನ ಹಿನ್ನೆಲೆ ಕಳ್ಳಂಬೆಳ್ಳ ಠಾಣೆಯಲ್ಲಿ ಕೊಲೆಯತ್ನ, ಸ್ಫೋಟಕ ವಸ್ತುಗಳ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.
10 ದಿನಗಳ ಹಿಂದೆ ಬಂದಿದ್ದ ನಾಗೇಂದ್ರ
ಸಂಜಯ್ ಗಾಂಧಿ ಆಸ್ಪತ್ರೆ ಒಟಿ ಟೆಕ್ನಿಷಿಯ್ ಆಗಿದ್ದ ರಮ್ಯಾ ಬಾಡಿಗೆ ರೂಂನಲ್ಲಿ ಸ್ನೇಹಿತೆಯೊಂದಿಗಿದ್ದರು. ಆದರೂ ಆಕೆಗೆ ಇನ್ನಿಲ್ಲದಂತೆ ಕಾಡುತ್ತಿದ್ದ ನಾಗೇಂದ್ರನ ಗುಣ ನಡೆತೆ ಸರಿಇಲ್ಲದ ಕಾರಣ ಆತನ ಮೊಬೈಲ್ ನಂಬರ್ ಅನ್ನು ರಮ್ಯಾ ಬ್ಲಾಕ್ ಲಿಸ್ಟ್ಗೆ ಹಾಕಿದ್ದಳು. ಇದರಿಂದ ಇನ್ನಷ್ಟು ಕುಪಿತಗೊಂಡಿದ್ದ ನಾಗೇಂದ್ರ 10 ದಿನದ ಹಿಂದಷ್ಟೇ ರೂಂ ಬಳಿ ಬಂದು ನೀನು ಮದುವೆ ಆಗದಿದ್ದರೆ ನಾನು ಸಾಯುತ್ತೇನೆ. ಜೀವಂತವಾಗಿರುವುದಿಲ್ಲವೆಂದು ಹೆದರಿಸಿದ್ದ. ಈ ವೇಳೆ ಮದುವೆ ಆಗುವುದಾಗಿ ಏನು ಮಾಡಿಕೊಳ್ಳಬಾರದೆಂದು ರಮ್ಯಾ ಸಮಾಧಾನ ಮಾಡಿಸಿಕಳುಹಿಸಿದ್ದಳು. ಆದರೆ, ನಾಗೇಂದ್ರ ಊರಿಗೆ ಮರಳದೆ ಬೆಂಗಳೂರಿನಲ್ಲೇ ಪಿಜಿನಲ್ಲಿ ನೆಲೆಸಿದ್ದ ಎನ್ನುವುದು ತಿಳಿದುಬಂದಿದೆ.
ಪ್ರೀತಿ ನಿರಾಕರಣೆ ಹಿನ್ನೆಲೆ ಕಾರು ಸ್ಫೋಟಿಸಿಕೊಂಡು ಆತ್ಮಾಹುತಿ ಮಾಡಿಕೊಂಡಿದ್ದ ನಾಗೇಂದ್ರ ಗೌಡ ಮೊದಲೇ ರಮ್ಯಾ ಕೊಲೆಗೆ ಸಂಚು ಮಾಡಿಕೊಂಡಿದ್ದು ಎಫ್ ಐಆರ್ನಲ್ಲಿ ಬಯಲಾಗಿದೆ.
ಬ್ಯಾಗ್ನಲ್ಲಿ ಚಾಕು ಹಾಗೂ ನಾಡಬಾಂಬ್ ಸಮೇತ ಬಂದಿದ್ದ ನಾಗೇಂದ್ರ ಶನಿವಾರ ಬೆಳಗ್ಗೆ 7.30ರಲ್ಲೇ ಬೆಂಗಳೂರಿನ ರಮ್ಯಾ ರೂಂ ಬಳಿ ಪ್ರತ್ಯಕ್ಷನಾಗಿದ್ದ. ಒಂದಲ್ಲ, ಎರಡಲ್ಲ ಬರೋಬ್ಬರಿ ಮೂರು ಗಂಟೆ ಕಾಲ ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿ ಹೈಡ್ರಾಮಾವೇ ನಡೆದಿತ್ತು. ನನ್ನನ್ನು ಪ್ರೀತಿಸಿ ಮೋಸ ಮಾಡಿದ್ದೀಯಾ ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲವೆಂದು ಚಾಕು ತೆಗೆದು ಕೊಲೆಬೆದರಿಕೆಯೊಡ್ಡಿದ್ದ. ಈ ವೇಳೆ ಮಧ್ಯಪ್ರವೇಶಿಸಿದ ರಮ್ಯಾ ಗೆಳತಿಗೆ ಬೆದರಿಕೆ ಹಾಕಿದ್ದು ಚಾಕುವಿನಿಂದ ಹಲ್ಲೆ ನಡೆಸಲು ಮುಂದಾಗಿದ್ದ. ಈತನ ಹುಚ್ಚಾಟ ಕಂಡು ಹೆದರಿದ ರಮ್ಯಾ ಅವನೊಂದಿಗೆ ಅಂಕೋಲಕ್ಕೆ ತೆರಳಲು ಒಪ್ಪಿಕೊಂಡಿದ್ದಾಗಿ 4 ಪುಟಗಳ ದೂರಿನಲ್ಲಿ ಬಿಚ್ಚಿಟ್ಟಿದ್ದಾಳೆ.
"ನಾವಿಬ್ಬರು ಊರಿಗೆ ಹೋಗಿ ಸಾಯೋಣ, ಬದುಕೋದು ಬೇಡ. ಬೇರೆ ಕಡೆ ಸತ್ತರೇ ಮನೆಯವರಿಗೆ ಶವ ಸಿಗುವುದಿಲ್ಲ' ಹೀಗೆಂದು ಕ್ಯಾಬ್ ಹತ್ತುತ್ತಿದ್ದಂತೆ ಹೇಳಲು ಆರಂಭಿಸಿದ್ದ ನಾಗೇಂದ್ರ ದಾರಿಯುದ್ದಕ್ಕು ಇದನ್ನೇ ಹೇಳಿಕೊಂಡು ಬಂದಿದ್ದ. ಮಧ್ಯಾಹ್ನ 1.30ರಲ್ಲಿ ಕ್ಯಾಬ್ ಚಾಲಕನಿಗೆ ಪೊಲೀಸರು ಕರೆ ಮಾಡಿ ಕಾರು ನಿಲ್ಲಿಸುವಂತೆ ಹೇಳಿದಾಗ ನನ್ನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದು ಎಡಗೈ ತೋಳಿಗೆ, ಕುತ್ತಿಗೆ ಹಿಂಭಾಗಕ್ಕೆ ಗಾಯವಾಗಿತ್ತು. ಅಲ್ಲದೆ, ಬಾಂಬ್ ತೆಗೆದು ಲೈಟರ್ನಿಂದ ಹಚ್ಚಲು ಯತ್ನಿಸಿದಾಗ ಅದನ್ನು ಕಿತ್ತು ಎಸೆದು ಕಾರಿನಿಂದ ಹೊರಬಂದೆ ಎಂದು ರಮ್ಯಾ ದೂರಿನಲ್ಲಿ ತಿಳಿಸಿದ್ದಾಳೆ.