ಆಧಾರ್ ಕಾರ್ಡ್ ಪಡೆದ ಖುಷಿಯಲ್ಲಿ ಚಿಕ್ಕನಾಯಕನಹಳ್ಳಿ ಪಟ್ಟಣದ ಕುರುಬರಹಳ್ಳಿ ಅರಳೀಕಟ್ಟೆ ಗುಡಿಸಲಿನಲ್ಲಿರುವ ಅಲೆಮಾರಿ ಕುಟುಂಬ.
- ಆಧಾರ್ಕಾರ್ಡ್ ಸಮಸ್ಯೆ ಬಗ್ಗೆ ವಿಜಯವಾಣಿ ವರದಿ
- ವರದಿಗೆ ಸ್ಪಂದಿಸಿದ ಚಿ.ನಾ.ಹಳ್ಳಿ ತಹಸೀಲ್ದಾರ್ ಮಮತಾ
ತುಮಕೂರು: ಜನ್ಮ ದಿನಾಂಕಕ್ಕೆ ಸಂಬಂಧಪಟ್ಟ ಯಾವ ದಾಖಲೆಯೂ ಇಲ್ಲದ ಕಾರಣಕ್ಕೆ ಆಧಾರ್ ಕಾರ್ಡ್ ಪಡೆಯಲಾಗದೆ ಸರ್ಕಾರದ ಯಾವ ಸೌಲಭ್ಯವನ್ನೂ ಪಡೆಯಲಾರದೆ ಅನಾಥರಾಗಿದ್ದ ಅಲೆಮಾರಿ ಚಿಕ್ಕನಾಯಕನಹಳ್ಳಿ ಪಟ್ಟಣದ ಕುರುಬರಹಳ್ಳಿ ಅರಳೀಕಟ್ಟೆ ಗುಡಿಸಲಿನಲ್ಲಿ ವಾಸವಿರುವ ಕುಟುಂಬಕ್ಕೆ ಆಧಾರ್ಕಾರ್ಡ್ ಸಿಕ್ಕಿದೆ.
ಶಾಲೆಯ ಮುಖವನ್ನೇ ನೋಡದೆ ಊರೂರು ಅಲೆದು ಬದುಕಿದ ಬಂಡಿ ಸಾಗಿಸುತ್ತಿರುವ ಅಲೆಮಾರಿ ಕುಟುಂಬವೀಗ ಒಂದೆಡೆ ನೆಲೆಯೂರಿ ಬದುಕಿಗೆ ಅಗತ್ಯವಾದ ಸರ್ಕಾರಗಳ ಕನಿಷ್ಟ ಸೌಲಭ್ಯಕ್ಕಾಗಿ ಅಗತ್ಯವಾಗಿರುವ ಆಧಾರ್ ಸಂಖ್ಯೆಗೆ ಅರ್ಜಿ ಸಲ್ಲಿಸಿ ಕಂದಾಯ ಇಲಾಖೆ ಕಚೇರಿಗೆ ಅಲೆದಾಡುತ್ತಿದ್ದ ಬಗ್ಗೆ ಮಾ.8ರಂದು ವಿಜಯವಾಣಿ ವರದಿ ಪ್ರಕಟಿಸಿ ಸಂಬಂಧಪಟ್ಟವರ ಗಮನ ಸೆಳೆದಿತ್ತು.
ಪತ್ರಿಕೆಯ ವರದಿ ಓದಿದ್ದ ಜಿಲ್ಲಾಧಿಕಾರಿ ಶುಭಕಲ್ಯಾಣ್ ಹಾಗೂ ಚಿಕ್ಕನಾಯಕನಹಳ್ಳಿ ತಹಸೀಲ್ದಾರ್ ಮಮತಾ ವಿಶೇಷ ಆಸಕ್ತಿವಹಿಸಿ ಅಲೆಮಾರಿ ಕುಟುಂಬಕ್ಕೆ ಅಗತ್ಯವಾಗಿದ್ದ ಆಧಾರ್ ಹಾಗೂ ಪಡಿತರ ಕಾರ್ಡ್ ಮಾಡಿಕೊಟ್ಟು ಬಡಕುಟುಂಬಕ್ಕೆ ಆಸರೆಯಾಗಿದ್ದಾರೆ. ಆಧಾರ್ ಕಾರ್ಡ್ ಇಲ್ಲದೆ ವಸತಿ ಶಾಲೆಯಲ್ಲಿ ದಾಖಲಾತಿ ಹಾಗೂ ಶಿಷ್ಯವೇತನ ಕೂಡ ಪಡೆಯಲಾಗದೆ ಸಂಕಷ್ಟ ಅನುಭವಿಸಿದ್ದ ಅಲೆಮಾರಿ ಕುಟುಂಬದ ಮಕ್ಕಳಿಗೂ ಈಗ ವಿದ್ಯಾಭ್ಯಾಸಕ್ಕೆ ನೆರವು ಸಿಕ್ಕಿದೆ.
ಕುರುಬರಹಳ್ಳಿಯಲ್ಲಿ ನೆಲೆಸಿರುವ ಚನ್ನದಾಸ ಅಲೆಮಾರಿ ಸಮುದಾಯದ ಉಮಾ ಹಾಗೂ ಮಹೇಶ್ ದಂಪತಿ ಈವರೆಗೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಆಧಾರ್ ಸಂಖ್ಯೆ ಇಲ್ಲದೆ ಜಾತಿ ಪ್ರಮಾಣಪತ್ರ ಕೂಡ ಪಡೆಯುವುದು ಸಾಧ್ಯವಿರಲಿಲ್ಲ, 55 ವರ್ಷದ ಅನಾಥೆ ಕಿಡಮ್ಮ ಕೂಡ ಆಧಾರ್ ಸಂಖ್ಯೆ ಸಿಗದೆ ಈವರೆಗೂ ರೇಷನ್ ಕಾರ್ಡ್ ಕೂಡ ಪಡೆಯಲು ಸಾಧ್ಯವಾಗದೆ ಭಿೆ ಬೇಡಿಕೊಂಡು ಬದುಕುತ್ತಿದ್ದರು.
ತಂದೆ, ತಾಯಿ ಇಲ್ಲದ ಅನಾಥ, ದಾಸ ಅಲೆಮಾರಿ ಸಮುದಾಯದ 22 ವರ್ಷದ ಗುಂಡ ಕೂಡ ಆಧಾರ್ ಸಂಖ್ಯೆ ಪಡೆದಿದ್ದು ಸರ್ಕಾರದ ಸೌಲಭ್ಯಗಳನ್ನು ಪಡೆಯುವ ವಿಶ್ವಾಸ ಪಡೆದಿದ್ದಾನೆ.
ಅಲೆಮಾರಿ ಸಮುದಾಯದ ಕೆಲವು ಕುಟುಂಬಕ್ಕೆ ಆಧಾರ್ ಕಾರ್ಡ್ ಸಿಕ್ಕಿಲ್ಲ ಎಂಬುದನ್ನು ತಿಳಿದ "ವಿಜಯವಾಣಿ' ಪತ್ರಿಕೆ ಪ್ರಕಟಿಸಿದ ವರದಿಗೆ ತಾಲೂಕು ಆಡಳಿತದ ಶ್ರೀವೇ ಸ್ಪಂದಿಸಿದೆ. ಅನಾಥರಾದ ನಮಗೆಲ್ಲರಿಗೂ ಸರ್ಕಾರವೇ ತಂದೆ, ತಾಯಿ ಎಂಬುದನ್ನು ಪತ್ರಿಕೆ ವರದಿಯಲ್ಲಿ ನೆನಪಿಸಿದ್ದರಿಂದ ತಹಸೀಲ್ದಾರ್ ಮಮತಾ ಮೇಡಮ್ ವಿಶೇಷ ಆಸಕ್ತಿವಹಿಸಿ ಆಧಾರ್ಕಾರ್ಡ್ ಮಾಡಿಕೊಟ್ಟಿದ್ದಾರೆ.