ತುಮಕೂರಿನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಘಟಕದ ವತಿಯಿಂದ ಅಭಿವೃದ್ಧಿಪಡಿಸಿರುವ "ಆನ್ಲೈನ್ ಅನುಭವ ಮಂಟಪ'ವೆಬ್ಸೈಟ್ಗೆ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಚಾಲನೆ ನೀಡಿದರು. ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ, ಶಂಕರ ಬಿದರಿ, ಸಾಗರನಹಳ್ಳಿ ನಟರಾಜ್, ಡಾ.ಎಸ್.ಪರಮೇಶ್, ತಳವಾರಹಳ್ಳಿ ವಿಜಯಕುಮಾರ್, ಡಾ.ಕೆ.ಎಲ್.ದರ್ಶನ್ ಮತ್ತಿತರರು ಇದ್ದರು.
- "ಆನ್ಲೈನ್ ಅನುಭವ ಮಂಟಪ'ವೆಬ್ಸೈಟ್ಗೆ ಚಾಲನೆ
- ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕಾರ್ಯಕ್ರಮ
- ಸಿದ್ದಗಂಗಾ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ
ತುಮಕೂರು: ಹನ್ನೆರಡನೇ ಶತಮಾನದಲ್ಲಿ ಶರಣರು ಸಾರಿದ ಸಿದ್ಧಾಂತವು ಮಾನವ ಸಿದ್ಧಾಂತ ಎಂದು ಸಿದ್ದಗಂಗಾ ಮಠದ ಉತ್ತರಾಧಿಕಾರಿ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ನಗರದ ಗುರುಕುಲ ಆರ್ಕೇಡ್ ಸಭಾಂಗಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಘಟಕದ ವತಿಯಿಂದ ಅಭಿವೃದ್ಧಿಪಡಿಸಿರುವ "ಆನ್ಲೈನ್ ಅನುಭವ ಮಂಟಪ'ವೆಬ್ಸೈಟ್ಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ಕಾಯಕ ತತ್ವ, ಸಮಾನತೆ, ತನು ಶುದ್ಧ, ಮನ ಶುದ್ಧ ಗುಣಗಳ ತತ್ವ-ಸಂದೇಶದ ಶರಣರ ಅನುಭವ ಮಂಟಪವು 21ನೇ ಶತಮಾನದಲ್ಲಿ ಶಾಂತಿ, ಸೌಹಾರ್ದತೆಯಿಂದ ಬಾಳಲು ಮಾರ್ಗದರ್ಶನ ನೀಡಿರುವ ಸಿದ್ಧಾಂತವಾಗಿದೆ ಎಂದರು.
ಶರಣರ 12ನೇ ಶತಮಾನ ಸುವರ್ಣಯುಗ. ಜಗತ್ತಿನ ಇತಿಹಾಸದಲ್ಲಿ ಈ ಕಾಲಾವಧಿ ಮಹತ್ವದ ಸ್ಥಾನಮಾನ ಪಡೆದಿದೆ. ಬಸವಾದಿ ಶರಣರು ವಚನಗಳ ನುಡಿಮುತ್ತುಗಳು, ಸತ್ಯಶುದ್ಧವಾದ ಕಾಯಕ ಮತ್ತು ದಾಸೋಹ ತತ್ವಗಳು ಶರಣರನ್ನು ಮುನ್ನೆಲೆಗೆ ತಂದವು. ವಚನ ಸಾಹಿತ್ಯವು ಶರಣರು ಬೆಳೆದ ಚಿನ್ನದ ಬೆಳೆ. ಶರಣರ ಅನುಭವ ಮಂಟಪ ಸರ್ವಸಮಾನತೆ ಸಾರುವ, ಜ್ಞಾನ ಮೂಡಿಸುವ ಮಂಟಪವಾಗಿತ್ತು. ಅನುಭವ ಮಂಟಪಕ್ಕೆ ಕಾಯಕ ಹಾಗೂ ದಾಸೋಹದ ಗೋಡೆ, ಸರ್ವಸಮಾನತೆಯ ಛಾವಣೆ ಇತ್ತು ಎಂದು ಶ್ರೀಗಳು ಹೇಳಿದರು.
ತನು ಶುದ್ಧತೆ, ಮನ ಶುದ್ಧತೆ, ಭಾವ ಶುದ್ಧತೆ ಮುಂತಾದ ಗುಣಗಳು ಅನುಭವ ಮಂಟಪ ಪ್ರವೇಶದ ಅರ್ಹತೆಯಾಗಿತ್ತು. ಜಾತಿ, ಲಿಂಗದ ಬೇಧಭಾವ ಇರಲಿಲ್ಲ, ಸಮಾನರಾಗಿ ಕುಳಿತು ಚರ್ಚಿಸಲು ಮುಕ್ತ ಅವಕಾಶವನ್ನು ಅನುಭವ ಮಂಟಪದಲ್ಲಿ ಕಲ್ಪಿಸಲಾಗಿತ್ತು. ಇಂದಿನ ಆಧುನಿಕ ಜಗತ್ತಿನ ಬದಲಾವಣೆಗೆ ತಕ್ಕಂತೆ ನಮ್ಮ ಜೀವನಶೈಲಿಯೂ ಬದಲಾಗಬೇಕಾದ ಅವಶ್ಯಕತೆಯಿದೆ. ಆಧುನಿಕತೆಯ ಒತ್ತಡದ ಬದುಕಿನಲ್ಲಿ ಶಾಂತಿ, ನೆಮ್ಮದಿಯ ಹುಡಕಾಟ ನಡೆದಿದೆ. ಶರಣರ ವಚನಗಳು ಇದಕ್ಕೆ ಪರಿಹಾರ ನೀಡಬಲ್ಲವು. ಈಗಿನ ಯುವಜನರು ಮೊಬೈಲ್ ದಾಸರಾಗಿದ್ದಾರೆ. ಸಾಮಾಜಿಕ ಜಾಲತಾಣವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಬಗ್ಗೆ ಜನಾಂಗಕ್ಕೆ ಸರಿಯಾದ ಮಾರ್ಗದರ್ಶನ ನೀಡುವುದು ಅತ್ಯವಶ್ಯಕವಾಗಿದೆ ಎಂದರು.
ಶರಣರ ಅನುಭವ ಮಂಟಪದಲ್ಲಿ ಸರ್ವಸಮಾನತೆ ಇತ್ತು. ಪ್ರತಿಯೊಬ್ಬರೂ ಸ್ವತಂತ್ರ ಭಾವನೆ ವ್ಯಕ್ತಪಡಿಸಲು ಅವಕಾಶವಿತ್ತು. ಶರಣರ ಅನುಭವ ಮಂಟಪದ ಆದರ್ಶಗಳನ್ನು ಇಂದಿನ ರಾಜಕೀಯ ವ್ಯವಸ್ಥೆಗೆ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ. ಇಂದಿನ ಯುವಜನಾಂಗ ಸಾಗುತ್ತಿರುವ ಹಾದಿ ಆತಂಕಕಾರಿಯಾಗಿದೆ. ಅವರಿಗೆ ಉತ್ತಮ ನಡೆನುಡಿ, ಸಂಸ್ಕಾರ, ಗುರುಹಿರಿಯರನ್ನು ಗೌರವಿಸುವ ಗುಣಗಳನ್ನು ಕಲಿಸಬೇಕಾಗಿದೆ ಎಂದು ಮಹಾಸಭಾದ ಜಿಲ್ಲಾ ಗೌರವಾಧ್ಯಕ್ಷರೂ ಆದ ಕೆರೆಗೋಡಿ ರಂಗಾಪುರ ಮಠದ ಗುರುಪರದೇಶೀಕೇಂದ್ರ ಸ್ವಾಮೀಜಿ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಟಕದ ಅಧ್ಯಕ್ಷ ಶಂಕರ ಬಿದರಿ ಮಾತನಾಡಿ, ಸಮಾಜದಲ್ಲಿ ದ್ವೇಷ ಕಡಿಮೆ ಮಾಡಿ ಪ್ರೀತಿ ಬೆಳೆಸುವ ಕೆಲಸವಾಗಬೇಕು. ಶರಣರ ಅನುಭವ ಮಂಟಪದ ಆದರ್ಶಗಳನ್ನು ಪರಿಚಯಿಸುವ ಮೂಲಕ ಸಮಾಜ ಪರಿವರ್ತನೆಗೆ ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಇನ್ನರ್ವರ್ಸ್ 360 ಸಂಸ್ಥೆಯ ಕೆ.ಆರ್.ಶಿವರಾಮ್ ಅವರು ಅಭಿವೃದ್ಧಿಪಡಿಸಿರುವ ಆನ್ಲೈನ್ ಅನುಭವ ಮಂಟಪ ಸಹಕಾರಿಯಾಗಲಿದೆ ಎಂದರು.
ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ, ಗುರುಕುಲ ವಿದ್ಯಾರ್ಥಿನಿಲಯ ಅಧ್ಯಕ್ಷ ಜಿ.ಎನ್.ಬಸವರಾಜಯ್ಯ, ಇನ್ನರ್ವರ್ಸ್ 360 ಸಂಸ್ಥೆಯ ಕೆ.ಆರ್.ಶಿವರಾಮ್ ಹಾಗೂ ಅವರ ತಾಯಿ ಸರ್ವಮಂಗಳ ಆವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಸಭಾದ ಜಿಲ್ಲಾಧ್ಯಕ್ಷ ಡಾ.ಎಸ್.ಪರಮೇಶ್, ಕಾರ್ಯದರ್ಶಿ ತಳವಾರಹಳ್ಳಿ ವಿಜಯಕುಮಾರ್, ಶಶಿಹುಲಿಕುಂಟೆಮಠ್, ಯುವ ಘಟಕದ ಜಿಲ್ಲಾಧ್ಯಕ್ಷ ಡಾ.ಕೆ.ಎಲ್.ದರ್ಶನ್ , ಗುರುಕುಲ ವಿವಿಧೋದ್ಧೇಶ ಸಹಕಾರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಬಸವರಾಜಪ್ಪ ಮತ್ತಿತರರು ಉಪಸ್ಥಿತರಿದ್ದರು.
ಯುವಜನರು ದುಶ್ಚಟಗಳಿಗೆ ಬಲಿಯಾಗುತ್ತಿದ್ದು ಹಿರಿಯರಿಗೆ ಗೌರವ ಕೊಡುತ್ತಿಲ್ಲ. ಮೊಬೈಲ್, ಇಂಟನರ್ನೆಟ್ ದಾಸರಾಗಿದ್ದಾರೆ. ಅವರನ್ನು ಸರಿದಾರಿಗೆ ತರಲು ಅವರು ಬಳಸುವ ಸಾಮಾಜಿಕ ಜಾಲತಾಣದ ಮೂಲಕವೇ ತಿಳುವಳಿಕೆ ಮೂಡಿಸುವಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಈಶ್ವರ ಬಿ.ಖಂಡ್ರೆ ಅವರು ವರ್ಚುಯಲ್ನಲ್ಲಿ ಸಲಹೆ ಮಾಡಿದರು.