ತುಮಕೂರಿನ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಕೃಷಿ ಇಲಾಖೆ ಮತ್ತು ರೇಡಿಯೋ ಸಿದ್ಧಾರ್ಥ ಸಹಯೋಗದಲ್ಲಿ "ಕೃಷಿ ಕಣಜ' ಬಾನುಲಿ ಸರಣಿ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಚಾಲನೆ ನೀಡಿದರು. ಲಕ್ಷ್ಮಣ ಎಸ್​.ಕಳ್ಳೆನ್ನವರ, ಎಚ್​.ಎಲ್​.ಚಂದ್ರಕುಮಾರ್​, ಡಾ.ಬಿ.ಟಿ.ಮುದ್ದೇಶ್​, ಹೇಮಲತಾ ಇದ್ದರು.  
ತುಮಕೂರು

ತ್ವರಿತಗತಿಯಲ್ಲಿ ಲಿಂಕ್​ ಕೆನಾಲ್​ ಯೋಜನೆ ಕಾಮಗಾರಿ

ಪ್ರಮುಖ ಮುಖ್ಯಾಂಶಗಳು

  • ರೇಡಿಯೋ ಸಿದ್ಧಾರ್ಥ ಹಾಗೂ ಕೃಷಿ ಇಲಾಖೆ ಸಹಯೋಗ
  • ಕೃಷಿ ಕಣಜ ಬಾನುಲಿ ಕಾರ್ಯಕ್ರಮ
  • ಜಿಲ್ಲಾಧಿಕಾರಿ ಶುಭಕಲ್ಯಾಣ್​
ತುಮಕೂರು: ಎತ್ತಿನಹೊಳೆ ಹಾಗೂ ಹೇಮಾವತಿ ಲಿಂಕ್​ ಕೆನಾಲ್​ ಯೋಜನೆಗಳ ಕಾಮಗಾರಿ ತ್ವರಿತ ಗತಿಯಲ್ಲಿ ಸಾಗಿದ್ದು, ಈ ವರ್ಷವೇ ಪ್ರಾರಂಭವಾಗುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್​ ಹೇಳಿದರು.
ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಕೃಷಿ ಇಲಾಖೆ ಮತ್ತು ರೇಡಿಯೋ ಸಿದ್ಧಾರ್ಥ ಸಹಯೋಗದಲ್ಲಿ "ಕೃಷಿ ಕಣಜ' ಬಾನುಲಿ ಸರಣಿ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆ ಇದ್ದರು ಕೂಡ ರೈತರು ಹನಿ ನೀರಾವರಿ ಪದ್ಧತಿ ಅನುಸರಿಸುವ ಮೂಲಕ ನೀರಿನ ಸದ್ಭಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದರು.
ರೈತರಿಗೆ ಕೃಷಿ ಉಪಕರಣಗಳನ್ನು ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ವತಿಯಿಂದ ಈಗಾಗಲೇ ವಿತರಣೆ ಮಾಡಲಾಗಿದೆ. ರೇಡಿಯೋ ಸಿದ್ದಾರ್ಥ ಸಮುದಾಯ ಬಾನುಲಿ ಆಗಿ ಜಿಲ್ಲೆಯಾದ್ಯಂತ ಕೃಷಿಕರನ್ನು ತಲುಪಬೇಕು. ಸಾಮಾಜಿಕ ಮಾಧ್ಯಮಗಳ ಮೂಲಕ ಕೃಷಿ ಯೋಜನೆಗಳು ಹಾಗೂ ಅದರ ಸದುಪಯೋಗಗಳ ಬಗ್ಗೆ ಅರಿವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.
ರೈತ ಸಮುದಾಯಕ್ಕಾಗಿ ಕೃಷಿ ಇಲಾಖೆ ಹಾಗೂ ರೇಡಿಯೋ ಸಿದ್ದಾರ್ಥ ವತಿಯಿಂದ "ಸರಣಿ ಬಾನುಲಿ' ಕಾರ್ಯಕ್ರಮ ಮಾಡುತ್ತಿದ್ದು, ರೈತರಿಗೆ ಬೆಳೆಗಳಿಗೆ ಸಂಬಂಧಪಟ್ಟ ಕಾರ್ಯಕ್ರಮ, ಕೃಷಿ ಸಮಸ್ಯೆಗಳಿಗೆ ಪರಿಹಾರ ಸೇರಿದಂತೆ ಹಲವು ಕೃಷಿ ಯೋಜನೆಗಳನ್ನು ಪ್ರಸಾರ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಎಸ್​. ಕಳ್ಳೆನ್ನವರ ಹೇಳಿದರು.
ಮಧುಗಿರಿ ವಿಭಾಗದ ಉಪ ಕೃಷಿ ನಿರ್ದೇಶಕರಾದ ಎಚ್​. ಎಲ್​. ಚಂದ್ರಕುಮಾರ್​, ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಬಿ. ಟಿ ಮುದ್ದೇಶ್​, ಶ್ರೀ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಹೇಮಲತಾ ಮತ್ತಿತರರು ಉಪಸ್ಥಿತರಿದ್ದರು.