After Indira, Modi is the mass leader! 
ತುಮಕೂರು

ಇಂದಿರಾ ನಂತರ ಮೋದಿ ಮಾಸ್​ ಲೀಡರ್​!

ಮಧುಗಿರಿ: ಇಂದಿರಾ ಗಾಂಧಿ ನಂತರ ಮಾಸ್​ ಲೀಡರ್​ ಯಾರಾದರೂ ಇದ್ದರೆ ಅದು ಮೋದಿನೇ...ಹಾಗೆಂದು ನಾನು ಮೋದಿ ಹೊಗಳುತ್ತಿಲ್ಲ, ವಾಸ್ತವಾಂಶ ಹೇಳುತ್ತಿದ್ದೇನೆ. ರಾಜಕಾರಣದಲ್ಲಿ ಪಾಪ್ಯುಲಾರಿಟಿ ಯಾರಿಗೂ ಶಾಶ್ವತ ಅಲ್ಲ. ಇದನ್ನು ಮೊದಲು ಅವರು (ಮೋದಿ) ಅರಿಯಬೇಕು ಎಂದು ಮಾಜಿ ಸಚಿವ, ಶಾಸಕ ಕೆ.ಎನ್​.ರಾಜಣ್ಣ ತಿರುಗೇಟು ನೀಡಿದರು.
ಮೇ 20ರಂದು ಸಿಎಂ ಸಿದ್ದರಾಮಯ್ಯ ತುಮಕೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಧಿಕಾರಿಗಳ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಇಂದಿರಾ ಗಾಂಧಿ ಹೆಸರು ಹೇಳಿಕೊಂಡು 200 ಸಂಸದರು ಗೆಲ್ಲುತ್ತಿದ್ದರು. ಅಂತಹವರೇ ಪರಿಸ್ಥಿತಿಯ ಒತ್ತಡಗಳಿಗೆ ಸಿಲುಕಿ ಸ್ವಯಂ ಸೋಲು ಅನುಭವಿಸಬೇಕಾಯಿತು. ರಾಜಕಾರಣದಲ್ಲಿ ಪಾಪ್ಯುಲಾರಿಟಿ ಯಾರಿಗೂ ಶಾಶ್ವತ ಅಲ್ಲ ಎಂಬುದನ್ನು ಅರಿಯಬೇಕು ಎಂದರು.
ಸಿಎಂ ಕುರ್ಚಿ ಅಲುಗಾಡುತ್ತಿದೆಯೋ ಇಲ್ಲವೋ ಎಂಬುದು ನಮ್ಮ ಪದ ಆಂತರಿಕ ವಿಚಾರ. ನಮ್ಮ ಪದ ವಿಚಾರ ಅವರಿಗೇಕೆ?. ಅವರಿಗೂ ಇದಕ್ಕೂ ಏನು ಸಂಬಂಧ?. ಆಡಳಿತಯಂತ್ರ ದುರುಪಯೋಗ ಮಾಡಿಕೊಂಡು ಪಶ್ಚಿಮ ಬಂಗಾಳ ಚುನಾವಣೆ ಗೆದಿದ್ದಾರೆ. ಆದರೂ ಜನಾದೇಶಕ್ಕೆ ಎಲ್ಲರೂ ತಲೆ ಬಾಗಲೇಬೇಕು ಎಂದರು.
ಪ್ರಧಾನಿ ಮೋದಿ ಬಂಗಾರ ಖರೀದಿಸಬೇಡಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜಣ್ಣ, ಅವರು ಭೂಮಿಯ ಮೇಲಿಲ್ಲ ಆಕಾಶದಲ್ಲಿದ್ದಾರೆ. ಆಕಾಶದಿಂದ ಮಾತನಾಡುವ ಗಾಳಿ ಮಾತುಗಳಿಗೆ ಅರ್ಥವಿಲ್ಲ. ಮೊದಲು ಅವರು ಆಕಾಶದಿಂದ ಕೆಳಗಿಳಿದು ನಂತರ ಮಾತನಾಡಲಿ ಎಂದರು.
ಈ ಹಿಂದೆ ಇಂದಿರಾ ಗಾಂಧಿ ಗೋಲ್ಡ್​ ಖರೀದಿಸಬೇಡಿ ಎಂದು ನೀಡಿರುವ ಹೇಳಿಕೆಯನ್ನು ಬಿಜೆಪಿಯವರು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಮಾಡುತ್ತಿದ್ದಾರೆ. ಆಗ ಅವರು ಹೇಳಿಕೆ ನೀಡಿದ್ದ ಸಂದರ್ಭದಲ್ಲಿ ದೇಶದ ಪರಿಸ್ಥಿತಿಯೇ ಬೇರೆ ಇತ್ತು. ಅಂದು ಹೊಟ್ಟೆಗೆ ಅನ್ನವೇ ಇರಲಿಲ್ಲ. ಜನ ನೆಮ್ಮದಿಯಿಂದ ಜೀವನ ನಡೆಸಲಿ ಎಂಬ ಉದ್ದೇಶಕ್ಕೆ ಹೇಳಿರಬಹುದು. ಅಂದಿನ ಕಾಲಕ್ಕೆ ಅದು ಸರಿ ಇರಬಹುದು. ಆದರೆ ಈಗ ಅಂತಹ ಪರಿಸ್ಥಿತಿ ಇಲ್ಲ. ಈಗ ಯಾರೊಬ್ಬರಿಗೂ ಊಟಕ್ಕೆ ಕೊರತೆಯಾಗುವ ಪರಿಸ್ಥಿತಿ ಇಲ್ಲ. ಇಂದಿನ ಪರಿಸ್ಥಿತಿಗೆ ಅವರ ಹೇಳಿಕೆ ತಾಳೆಯಾಗುವುದಿಲ್ಲ ಎಂದರು.
ತಮಿಳುನಾಡಿನ ನೂತನ ಸಿಎಂ ವಿಜಯ್​ ಅವರಿಗೆ ರಾಹುಲ್​ ಗಾಂಧಿ ಅಭಿನಂದನೆ ಸಲ್ಲಿಸಿದ್ದು, ಅವರು ಅಭಿನಂದನೆ ಸಲ್ಲಿಸಿದರೆ ದೇಶದ ಎಲ್ಲ ಕಾಂಗ್ರೆಸ್​ ನಾಯಕರು ಅಭಿನಂದನೆ ಸಲ್ಲಿಸಿದಂತೆ. ಆದರೆ ವಿಜಯ್​ ದಾರಿ ಮುಳ್ಳಿನ ಮೇಲಿನ ನಡಿಗೆಯಂತೆ. ಕೆಲ ಕಾರಣಗಳನ್ನು ನೀಡಿ 700 ಮದ್ಯದಂಗಡಿ ಮುಚ್ಚುವ ತೀರ್ಮಾನ ಕೈಗೊಂಡಿದ್ದು, ರಾಜ್ಯಕ್ಕೆ ಆದಾಯ ತರುವ ದಾರಿಗಳನ್ನೆಲ್ಲ ಮುಚ್ಚಿಕೊಂಡು ಹೋದರೆ ಫ್ರೀಬೇಸ್​ಗಳಿಗೆ ಹಣ ಹೊಂದಿಸುವ ದಾರಿ ಹೇಗೆ? ಇದು ಅವರಿಗೆ ಅನುಭವದ ಕೊರತೆ ಇದೆ ಎಂಬುದನ್ನು ತೋರಿಸುತ್ತದೆ ಎಂದರು.
ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ: ಮೇ 20ರಂದು ತುಮಕೂರಿನಲ್ಲಿ ನಡೆಯಲಿರುವ ಸಾಧನಾ ಸಮಾವೇಶ ಯಶಸ್ವಿಗೊಳಿಸಲು ಮಧುಗಿರಿ ತಾಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ಆಡಳಿತಾಧಿಕಾರಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಕಾರ್ಯಕ್ರಮದಲ್ಲಿ ಆಯ್ದ ಫಲಾನುಭವಿಗಳಿಗೆ ಸಿಎಂ ಸವಲತ್ತು ವಿತರಿಸಲಿದ್ದು, ಉಳಿದ ಫಲಾನುಭವಿಗಳಿಗೆ ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಸವಲತ್ತು ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಕಾರ್ಯಕ್ರಮಕ್ಕೆ ಗ್ರಾಮಗಳಿಂದ ಆಗಮಿಸುವ ಫಲಾನುಭವಿಗಳಿಗೆ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು, ಪ್ರತಿಯೊಬ್ಬರಿಗೂ ಸೂಕ್ತ ಊಟ ಹಾಗೂ ಮೂಲ ಸೌಲಭ್ಯಗಳ ವ್ಯವಸ್ಥೆ ಕಲ್ಪಿಸಬೇಕು ಎಂದು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಆಧಿಕಾರಿಗಳಿಗೆ ಕೆ.ಎನ್​.ರಾಜಣ್ಣ ಸೂಚನೆ ನೀಡಿದರು.