ಕೆಪಿಎಸ್​ಸಿ ಹಗರಣದಲ್ಲಿ ಬಂಧಿತನಾಗಿರುವ ಬಸವರಾಜ ಕನ್ನಾಳೆಯನ್ನು ತುಮಕೂರು ವಿವಿ ಸಿಂಡಿಕೇಟ್​ ಸದಸ್ಯ ಸ್ಥಾನದಿಂದ ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸಿದರು. 
ತುಮಕೂರು

ಕೆಪಿಎಸ್​ಸಿ ಹಗರಣದ ಆರೋಪಿ ಬಸವರಾಜ ಕನ್ನಾಳೆ ವಜಾಕ್ಕೆ ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ತುಮಕೂರು ವಿವಿ ಕಚೇರಿ ಮುಂಭಾಗ ಪ್ರತಿಭಟನೆ
  • ಕನ್ನಾಳೆ ಭಾವಚಿತ್ರಕ್ಕೆ ಬೆಂಕಿಯಿಟ್ಟು ವಿದ್ಯಾರ್ಥಿಗಳ ಆಕ್ರೋಶ
  • ಎಬಿವಿಪಿ ನೇತೃತ್ವದಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಕೆ
  • ವಿವಿಯಲ್ಲಿ ರಾಜ್ಯಪಾಲರ ನಾಮಿನಿ ಸಿಂಡಿಕೇಟ್​ ಸದಸ್ಯ ಕನ್ನಾಳೆ
ತುಮಕೂರು: ಕೆಪಿಎಸ್​ಸಿ ನೇಮಕಾತಿ ಹಗರಣದಲ್ಲಿ ಬಂಧನವಾಗಿರುವ ಆರೋಪಿ ಬದವರಾಜ ಕನ್ನಾಳೆ ತುಮಕೂರು ವಿವಿ ಸಿಂಡಿಕೇಟ್​ ಸದಸ್ಯ ಸ್ಥಾನದಿಂದ ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿ ನೂರಾರು ವಿದ್ಯಾರ್ಥಿಗಳು ತುಮಕೂರು ವಿವಿ ಕುಲಪತಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.
ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಕನ್ನಾಳೆ ಭಾವಚಿತ್ರಕ್ಕೆ ಬೆಂಕಿಯಿಟ್ಟು ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿ ನೇಮಕಾತಿ ಹಗರಣ ನಡೆಸಿರುವ ಆರೋಪಿಯನ್ನು ವಿಶ್ವವಿದ್ಯಾಲಯದಲ್ಲಿ ಇಟ್ಟುಕೊಳ್ಳಬಾರದು ಕೂಡಲೇ ರಾಜ್ಯಪಾಲರು ಆತನನ್ನು ಸ್ಥಾನದಿಂದ ವಜಾಗೊಳಿಸಿ, ಆತನ ವ್ಯವಹಾರಗಳ ಬಗ್ಗೆ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.
ಎಬಿವಿಪಿ ವಿಭಾಗ ಸಂಚಾಲಕ ಎಚ್​.ಆರ್​.ಗುರುಪ್ರಸಾದ್​ ಮಾತನಾಡಿ, ಬಸವರಾಜ್​ ಕನ್ನಾಳೆಯನ್ನು ಕೂಡಲೇ ಸಿಂಡಿಕೇಟ್​ ಸದಸ್ಯತ್ವದಿಂದ ವಜಾಗೊಳಿಸಬೇಕು, ಕೆಪಿಎಸ್​ಸಿ ನೇಮಕಾತಿ ಅಕ್ರಮ ಪ್ರಕರಣದ ಜತೆಗೆ ತುಮಕೂರು ವಿವಿಯಲ್ಲಿಯೂ ನಡೆದಿರಬಹುದಾದ ಅಕ್ರಮಗಳ ಬಗ್ಗೆ ಸಮಗ್ರ ತನಿಖೆಯ ಹೊಣೆಯನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಬಸವರಾಜ್​ ಕನ್ನಾಳೆ ಕಳೆದ ಒಂದು ವರ್ಷದಿಂದಲೂ ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್​ ಸದಸ್ಯನಾಗಿದ್ದು ಈ ಅವಧಿಯಲ್ಲಿ ನಡೆದಿರುವ ಸಾಧ್ಯತೆಯಿರುವ ಅಕ್ರಮಗಳು ಮತ್ತು ಅವ್ಯವಹಾರಗಳ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು, ಕೂಡಲೇ ತುಮಕೂರು ವಿವಿ ಸಿಂಡಿಕೇಟ್​ ವಿಶೇಷ ಸಭೆ ನಡೆಸಿ ಕನ್ನಾಳೆ ವಜಾಗೊಳಿಸಲು ರ್ನಿಣಯ ತೆಗೆದುಕೊಂಡು ರಾಜ್ಯಪಾಲರಿಗೆ ಕಳುಹಿಸಿಕೊಡಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿಗಳ ಮನವಿ ಸ್ವೀಕರಿಸಿದ ತುಮಕೂರು ವಿವಿ ಪ್ರಭಾರ ಕುಲಪತಿ ಡಾ.ನಾಗಭೂಷಣ ಮಾತನಾಡಿ, ಬಸವರಾಜ ಕನ್ನಾಳೆ ಬಂಧನವಾಗಿರುವ ಬಗ್ಗೆ ವಿವಿ ಗಮನಕ್ಕೆ ಬಂದಿದ್ದು ಶ್ರೀದಲ್ಲಿಯೇ ಸಿಂಡಿಕೇಟ್​ ಸದಸ್ಯರ ಸಭೆ ಕರೆದು ಈ ಬಗ್ಗೆ ಚರ್ಚಿಸಿ ತೀಮಾರ್ನ ಕೈಗೊಂಡು ರಾಜ್ಯಪಾಲರಿಗೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದರು.
ಎಬಿವಿಪಿ ಜಿಲ್ಲಾ ವಿದ್ಯಾರ್ಥಿನಿ ಪ್ರಮುಖ್​ ಯಮುನಾ, ತುಮಕೂರು ನಗರ ಸಂಘಟನಾ ಕಾರ್ಯದರ್ಶಿ ಕೆ.ಸಮನ್ವಿತ್​, ಕಾರ್ಯಕರ್ತರಾದ ಜೆ.ಬಿ.ರಂಗನಾಥ್​, ಅಪ್ಪು, ಗಣಪತಿ, ಚಿರಂಜೀವಿ, ಪ್ರಶಾಂತ್​, ಶರಣ್​, ಮನೋಜ್​, ಅಭಿಷೇಕ್​ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
.