5 goals are important for the upliftment of society 
ತುಮಕೂರು

ಸಮಾಜದ ಉನ್ನತಿಗೆ 5 ಧ್ಯೇಯ ಮುಖ್ಯ

ಬರಗೂರು: ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂಬ ನಿಟ್ಟಿನಲ್ಲಿ ಶಿಕ್ಷಣ, ಉದ್ಯೋಗ, ಸಂಘಟನೆ, ಹೋರಾಟ, ಆಧ್ಯಾತ್ಮ ಮತ್ತು ಸಮಾಜಸೇವೆ ಎಂಬ 5 ಧ್ಯೇಯ ಮಂತ್ರಗಳನ್ನು ಇಟ್ಟುಕೊಂಡು ಸಮಾಜವನ್ನು ಉನ್ನತಿಗೆ ತಲುಪಿಸಬೇಕು ಎಂದು ವನಕಲ್ಲು ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಬಸವ ರಮಾನಂದ ಸ್ವಾಮೀಜಿ ಹೇಳಿದರು.
ಶಿರಾ ತಾಲೂಕು ಬರಗೂರಿನ ಸಿದ್ದನಕುಂಟೆ ಶ್ರೀ ಸಿದ್ದೇಶ್ವರಸ್ವಾಮಿ ಮತ್ತು ಶ್ರೀ ಕಾಲಭೈರವೇಶ್ವರಸ್ವಾಮಿ ಮರುಪ್ರತಿಷ್ಠ್ಠಾಪನ, ನೂತನ ಸ್ಥಿರಬಿಂಬ ಹಾಗೂ ದೇವಾಲಯ ಲೋಕಾರ್ಪಣಾ ಮಹೋತ್ಸವದಲ್ಲಿ ಮಾತನಾಡಿ, ಕಾಡುಗೊಲ್ಲ ಜನಾಂಗ ಉನ್ನತಿಗಾಗಿ ಎಮ್ಮೆರಹಳ್ಳಿ ಗೋಮಾಳ ಜಾಗದಲ್ಲಿ ಕೌಶಲ ಅಭಿವೃದ್ಧಿಗೆ ಸ್ಥಳಾವಕಾಶ ನೀಡಬೇಕು. ಕಂದಾಯ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದರು.
ಚಿತ್ರದುರ್ಗದ ಶ್ರೀಕೃಷ್ಣ ಯಾದವ ಮಹಾಸಂಸ್ಥಾನ ಮಠದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಮಾತನಾಡಿ, ಕಾಡುಗೊಲ್ಲ ಸಮುದಾಯಕ್ಕೆ ಇತಿಹಾಸವಿದೆ. ಆದರೆ ದಾಖಲೆಗಳನ್ನು ಕಾಪಾಡಿಕೊಳ್ಳಲು ಎಡವಿದ್ದೇವೆ. ಸಿದ್ದನಕುಂಟೆ ಸಿದ್ದೇಶ್ವರ ಸ್ವಾಮಿಯ ಇತಿಹಾಸವನ್ನು ಮರುಕಳಿಸಿ ನಿರ್ಮಿಸುವ ಕಾರ್ಯ ಮಾಡಿದ್ದಾರೆ. ಸುಮಾರು 400 ವರ್ಷಗಳ ಇತಿಹಾಸ ಈ ದೇವಸ್ಥಾನಕ್ಕೆ ಇದೆ ಎಂದರು.
ವಿಧಾನ ಪರಿಷತ್​ ಸದಸ್ಯ ಚಿದಾನಂದ್​ ಎಂ.ಗೌಡ ಮಾತನಾಡಿ, ಇಂದಿಗೂ ಕಾಡುಗೊಲ್ಲ ಸಮಾಜದ ಜನರು ಕುರಿ, ಮೇಕೆ ಕಾಯುತ್ತಿದ್ದು, ಹಳೇ ಗುಡಿಸಲಲ್ಲಿ ವಾಸವಾಗಿದ್ದಾರೆ. ಕಾಡುಗೊಲ್ಲ ಸಮುದಾಯಕ್ಕೆ ಏನು ಕೊಡುಗೆ ನೀಡಿದ್ದೇವೆ ಎಂಬುದನ್ನು ನಾವೇ ಪ್ರಶ್ನೆ ಮಾಡಿಕೊಳ್ಳುವಂತಾಗಿದೆ. ಗ್ರಾಮದಲ್ಲಿ ದೇವಸ್ಥಾನದ ಗಂಟೆ ಶಬ್ದ ಎಷ್ಟು ಮುಖ್ಯವೋ, ಶಾಲಾ ಗಂಟೆ ಶಬ್ದ ಕೂಡ ಅಷ್ಟೇ ಮುಖ್ಯ ಎಂದರು.
ಆಂಧ್ರಪ್ರದೇಶದ ವಿಧಾನ ಪರಿಷತ್​ ಮಾಜಿ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ, 400 ವರ್ಷಗಳ ಇತಿಹಾಸವುಳ್ಳ ಶ್ರೀ ಸಿದ್ದೇಶ್ವರಸ್ವಾಮಿ ದೇವಸ್ಥಾನಕ್ಕೆ ನಮ್ಮ ಪೂರ್ವಜರು ಆಂಧ್ರಪ್ರದೇಶದಿಂದ ಅರೆಬಿತ್ತಲೆ ಸೇವೆಯೊಂದಿಗೆ ಆಗಮಿಸುತ್ತಿದ್ದನ್ನು ಕಂಡಿದ್ದೇನೆ. ಸುಮಾರು ವರ್ಷಗಳ ನಂತರ ದೇವಸ್ಥಾನ ಮರು ನಿಮಾರ್ಣಗೊಂಡಿರುವುದು ಇತಿಹಾಸ ಮರು ಸೃಷ್ಟಿಸಿದಂತಾಗಿದೆ. ಈ ಜಾಗದಲ್ಲಿ ಸಮುದಾಯ ಭವನ ನಿರ್ಮಿಸಿ, ಮದುವೆ, ಸಭೆ, ಸಮಾರಂಭ ನಡೆಸಲು ಮುಂದಾಗಿರುವುದು ಸಂತಸದ ಸಂಗತಿ ಎಂದರು.
ಶ್ರೀ ಸಿದ್ದನಕುಂಟೆ ಶ್ರೀ ಸಿದ್ದೇಶ್ವರಸ್ವಾಮಿ ಹಾಗೂ ಶ್ರೀಕಾಲಭೈರವೇಶ್ವರಸ್ವಾಮಿ ನೂತನ ದೇವಾಲಯ ಲೋಕಾರ್ಪಣೆಗೆ ಕಾಮನಹಟ್ಟಿ, ಕೊಮರೇನಹಳ್ಳಿ, ರೊಳ್ಳೆ, ಗುಂಡಮಲೆ, ಚಂಗಾವರ ಕಣತಿಯ ಸಾವಿರಾರು ಭಕ್ತರು ಆಗಮಿಸಿದ್ದರು.
ಲೋಕೋಪಯೋಗಿ ಇಲಾಖೆ ಸೂಪರ್ಡೆಂಟ್​ ಇಂಜಿನಿಯರ್​ ಬಿ.ತಿಮ್ಮರಾಯಪ್ಪ, ಜಿಲ್ಲಾ ಕಾಡುಗೊಲ್ಲ ಸಂಘದ ಅಧ್ಯಕ್ಷ ಚಂಗಾವರ ಕರಿಯಪ್ಪ, ಶಿರಾ ತಾಲೂಕು ಕಾಡುಗೊಲ್ಲ ಸಂಘದ ಕಾರ್ಯದರ್ಶಿ ಚಂದ್ರಣ್ಣ, ಎಪಿಎಂಸಿ ಮಾಜಿ ಸದಸ್ಯ ಬಿ.ಸಿದ್ದಪ್ಪ, ಮುಖಂಡರಾದ ಷಟ್ಕನಹಳ್ಳಿ ತಿಮ್ಮರಾಯಪ್ಪ, ಮದ್ದನಕುಂಟಪ್ಪ, ಎಲ್ಪೇನಹಳ್ಳಿ ಶ್ರೀನಿವಾಸ್​, ರೇಣುಕೇಶ್​, ತಿಮ್ಮರಾಯಪ್ಪ, ಹಾರೋಗೆರೆ ಮಾರಣ್ಣ ಇತರರು ಇದ್ದರು.