ಓದುತ್ತಿರುವ ಸರ್ಕಾರಿ ಶಾಲೆಗೆ ಕಾಂಪೌಂಷಡ್ ನಿರ್ಮಿಸುವಂತೆ ಆಗ್ರಹಿಸಿ ಆರು ತಿಂಗಳಿನಿಂದ ಶಾಲೆಗೆ ತೆರಳದೆ ಪ್ರತಿಭಟನೆ ನಡೆಸುತ್ತಿದ್ದ ತುಮಕೂರು ತಾಲೂಕು ಬೆಳಧರದ ಸೀಮ್ರಾಸನೋಬರ್ ಶಾಲೆಗೆ ಕರೆದುಕೊಂಡು ಬಂದ ನ್ಯಾ.ಸೂರಿನ್ನಿಸಾ, ನಹಿದಾ ಜಮ್ಜಮ್, ರಾಜೇಶ್ವರಿ ಮತ್ತಿತರರು.
- ಶಾಲೆ ಭಹಿಷ್ಕರಿಸಿ ಕಾಂಪೌಂಡ್ಗೆ ಆಗ್ರಹ
- ಮಕ್ಕಳ ಶಿಕ್ಷಣ ಹಕ್ಕು ಉಳಿಸಲು ತಡಮಾಡಿದ ಅಧಿಕಾರಿಗಳು
- ಡಾ.ಜಿ.ಪರಮೇಶ್ವರ ಸ್ವಕ್ಷೇತ್ರದ ಶಾಲೆಯಲ್ಲಿ ಕಲಿಕೆಗೆ ಅಡ್ಡಿ
ತುಮಕೂರು: ಸರ್ಕಾರಿ ಶಾಲೆಗೆ ಕಾಂಪೌಂಡ್ಗೆ ಆಗ್ರಹಿಸಿ ಶಾಲೆಯಿಂದ ಹೊರಗುಳಿದು ಪ್ರತಿಭಟನೆ ನಡೆಸುತ್ತಿದ್ದ 4ನೇ ತರಗತಿ ವಿದ್ಯಾರ್ಥಿನಿ ಸೀಮ್ರಾಸನೋಬರ್ ಮನವೊಲಿಸಲು ಅಧಿಕಾರಿಗಳು ಆರು ತಿಂಗಳ ನಂತರ ಯಶಸ್ವಿಯಾದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಪ್ರತಿನಿಧಿಸುವ ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋರಾ ತಾಲೂಕು ಬೆಳಧರ ಸರ್ಕಾರಿ ಪ್ರಾಥಮಿಕ ಶಾಲೆಯ ಬಾಲಕಿ ಸೀಮ್ರಾಸನೋಬರ್ ಶಾಲೆಗೆ ಕಾಂಪೌಂಡ್ ನಿರ್ಮಿಸುವಂತೆ ಹೋರಾಟ ನಡೆಸುತ್ತಿದ್ದು, ಅಧಿಕಾರಿಗಳ ತಾತ್ಸಾರಕ್ಕೆ ಬೇಸತ್ತು ಶಾಲೆಯಿಂದ ಹೊರಗುಳಿದು ಸರ್ಕಾರದ ಗಮನ ಸೆಳೆದಿದ್ದರು.
ಕಳೆದ ಆರು ತಿಂಗಳಿನಿಂದ ಬಾಲಕಿ ಶಾಲೆಗೆ ತೆರಳದೇ ಪ್ರತಿಭಟನೆ ನಡೆಸುತ್ತಿದ್ದರೂ ಕಿವಿಗೊಡದ ಅಧಿಕಾರಿಗಳನ್ನು ಜತೆಯಲ್ಲಿ ಕರೆದುಕೊಂಡ ಬಂದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ನೂರುನ್ನೀಸಾ ಹಾಗೂ ತುಮಕೂರು ವಿಭಾಗಾಧಿಕಾರಿ ಸಹಿದಾ ಜಮ್ಜಮ್ ಸೋಮವಾರ ಬಾಲಕಿಯ ಮನವೊಲಿಸಿ ಶಾಲೆಗೆ ಕರೆತಂದರು.
ನ್ಯಾ.ನೂರುನ್ನೀಸಾ ಮಾತನಾಡಿ, ಶಾಲೆಗೆ ಮತ್ತು ಮಕ್ಕಳಿಗೆ ತೊಂದರೆ ಆಗಬಾರದು ಎನ್ನುವ ಹಿತದೃಷ್ಟಿಯಿಂದ ಶಾಲೆಯಲ್ಲಿ ಸಮಸ್ಯೆ ಹಾಗೂ ಬಾಲಕಿ ನೀಡಿದ ಮನವಿಗೆ ಸ್ಪಂದಿಸಿ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಗಮನಕ್ಕೆ ತಂದಿದ್ದೇವೆ. ಅದರ ನಿಮಿತ್ತ ಜಿಪಂಗೆ ಸ್ಪಷ್ಟ ಆದೇಶ ಬಂದಿರುತ್ತದೆ. ಶೀಘ್ರದಲ್ಲಿಯೇ ಈ ಶಾಲೆಗೆ ಕಾಂಪೌಂಡ್ ನಿರ್ಮಾಣವಾಗಲಿದೆ ಎಂದರು.
ಉಪವಿಭಾಗಾಧಿಕಾರಿ ನಾಹೀದಾ ಜಮ್ಜಮ್ ಮಾತನಾಡಿ, ಮಕ್ಕಳು ಓದುವುದರ ಕಡೆ ಆಸಕ್ತಿ ತೋರಿಸಬೇಕು, ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ವಿದ್ಯಾಭ್ಯಾಸ ಬಹಳ ಮುಖ್ಯವಾಗಿರುತ್ತದೆ. ಪಾಲಕರು ಯಾವುದೇ ಸಮಸ್ಯೆ ಇದ್ದರೂ ನಮ್ಮ ಗಮನಕ್ಕೆ ತಂದರೆ ಬಗೆಹರಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ತಹಸೀಲ್ದಾರ್ ರಾಜೇಶ್ವರಿ, ಎಸ್ಡಿಎಂಸಿ ಅಧ್ಯಕ್ಷ ರಫೀಕ್, ರಾಜಸ್ವ ನಿರೀಕ್ಷಕ ಅರುಣ್ ಕುಮಾರ್, ಗ್ರಾಮ ಲೆಕ್ಕಾಧಿಕಾರಿ ಅನಿಲ್, ಕಾಳಜಿ ಪೌಂಡೇಷನ್ನ ಶಿವಕುಮಾರ್, ಎಂ.ಎಸ್.ಗಣೇಶ್, ಪದ್ಮನಾಭ್, ರಫಿಪಾಷಾ, ಭೀಮ್ ಆರ್ಮಿ ಜಿಲಾಧ್ಯಕ್ಷ ಶ್ರೀನಿವಾಸ್, ಮಹಾಲಿಂಗಯ್ಯ, ಡಮರುಗ ಸಂಪನ್ಮೂಲ ಕೇಂದ್ರ ನಿರ್ದೇಶಕ ಡಮರುಗ ಉಮೇಶ್ ಮತ್ತಿತರರು ಇದ್ದರು.
ಬೆಳೆಧರ ಪ್ರಾಥಮಿಕ ಶಾಲೆಗೆ ಕೌಂಪೌಂಡ್ ಬೇಕೆಂದು ಮಗು ಸೀಮಾ ಜಿಲ್ಲಾಧಿಕಾರಿಯಿಂದ ಪ್ರಧಾನ ಮಂತ್ರಿವರೆಗೂ ಮನವಿ ಮಾಡಿದ್ದಾಗಿದೆ. ಕಾನೂನು ಸೇವಾ ಪಾಧಿಕಾರಕ್ಕೂ ಮನವಿ ಸಲ್ಲಿಸಿದ್ದೇವೆ. ಶಿಕ್ಷಣ ಇಲಾಖೆ ತಾತ್ಸಾರದಿಂದ ನ್ಯಾಯಯುತ ಬೇಡಿಕೆ ಬಗೆಹರಿಸಲಾದಷ್ಟು ಕಗ್ಗಂಟಾಗಿರುವುದು ಶೋಚನೀಯ. ಈಗಲಾದರೂ ಬಾಲಕಿಯ ಅಳಲಿಗೆ ಸ್ಪಂದಿಸಿ ಮಕ್ಕಳ ವಿದ್ಯಾಭ್ಯಾಸ, ಭದ್ರತೆ ಹಾಗೂ ಆಟೋಪಚಾರಕ್ಕೆ ಸ್ಪಂದಿಸುವ ಕಾರ್ಯ ತಕ್ಷಣ ಮಾಡಬೇಕು.
ಗಣೇಶ್ ಮಾರನಹಳ್ಳಿ, ಕಾಳಜಿ ಪೌಂಡೇಷನ್, ತುಮಕೂರು