ತುಮಕೂರು: ಹೆತ್ತೇನಹಳ್ಳಿ ಗ್ರಾಪಂ ಕೈದಾಳ ಗ್ರಾಮದ ಶ್ರೀಚೆನ್ನಕೇಶವ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ "ಸ್ವಚ್ಛತಾ ಹೀ ಸೇವಾ-2025 ಅಭಿಯಾನ'ಕ್ಕೆ ಜಿಪಂ ಸಿಇಒ ಜಿ.ಪ್ರಭು ಚಾಲನೆ ನೀಡಿದರು.
ನಾಗರಿಕತೆಗಳ ಕಾಲದಿಂದಲೂ ನಮ್ಮ ದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಹಸಿ ಕಸ, ಒಣ ಕಸ ವಿಂಗಡಣೆ ಮಾಡಿ ಸ್ವಚ್ಛತಾ ವಾಹಿನಿಗೆ ನೀಡುವ ಮೂಲಕ ಸ್ವಚ್ಛತೆ ಕಾಪಾಡಿಕೊಳ್ಳುವ ಕುರಿತು ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದರು.
ಸ್ವಚ್ಛ ಪರಿಸರವನ್ನು ನಿರ್ಮಿಸುವ ನಿಟ್ಟಿನಲ್ಲಿ ಅನೈರ್ಮಲ್ಯ ನಿವಾರಣೆಗಾಗಿ ಸರ್ಕಾರದಿಂದ ಸುಮಾರು 4.5 ಲಕ್ಷ ಕೋಟಿ ರೂ. ಗಳನ್ನು ಖರ್ಚು ಮಾಡಲಾಗುತ್ತಿದೆ. ಪ್ರತಿ ಹಳ್ಳಿಗಳಲ್ಲಿ ಸ್ವಚ್ಛತಾಗಾರರು, ಸ್ವಸಹಾಯ ಸಂಘದ ಮಹಿಳೆಯರು ಸ್ವಚ್ಛತೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಸ್ವಚ್ಛತಾ ಕಾರ್ಯವನ್ನು ನಿರ್ವಹಿಸುವ ಪೌರಕಾರ್ಮಿಕರ ಸೇವೆ ನಿಜವಾದ ದೇಶ ಸೇವೆ. ಪ್ರತಿಯೊಬ್ಬರೂ ತಮ್ಮ ಸುತ್ತ ಮುತ್ತಲಿನ ವಾತಾವರಣವನ್ನು ಸುಂದರವಾಗಿ, ಸ್ವಚ್ಛವಾಗಿಟ್ಟುಕೊಂಡರೆ ನಮ್ಮ ದೇಶವೂ ಸುಂದರವಾಗಿರುತ್ತದೆ ಎಂದರು.
ಸ್ವಚ್ಛತೆ ನಿರ್ವಹಣೆಯಲ್ಲಿ ಕಳೆದ ಬಾರಿ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಗ್ರಾಪಂ ಮಾದರಿ ಗ್ರಾಮ ಪಂಚಾಯಿತಿ ಪ್ರಶಸ್ತಿಗೆ ಭಾಜನವಾಗಿದೆ. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷಿ$್ಮನಾರಾಯಣ ಸ್ವಾಮಿ ಸ್ವಚ್ಛತೆಯ ಪ್ರತಿಜ್ಞಾ ವಿಧಿ ಬೋಧಿಸಿದರು.
ಜಿಪಂ ಮುಖ್ಯ ಯೋಜನಾಧಿಕಾರಿ ಸಣ್ಣಮಸಿಯಪ್ಪ, ಸಹಾಯಕ ನಿರ್ದೇಶಕ ಎಸ್.ಎಸ್.ಮಂಜುನಾಥ, ಗ್ರಾಪಂ ಅಧ್ಯೆ ಧನಲಕ್ಷ್ಮಿ ಹಾಗೂ ಮಾಜಿ ಉಪಾಧ್ಯಕ್ಷ ಉಮಾಶಂಕರ್, ಚುನಾಯಿತ ಸದಸ್ಯರು 41 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.