ಜಿಲ್ಲೆ

ಚಿರತೆ ಬಾಲವಿಡಿದು ಬೋನಿಗೆಸೆದ ಯುವಕ

ತಿಪಟೂರು: ತಾಲೂಕಿನ ರಂಗಾಪುರ ಭಾಗದಲ್ಲಿ ಹಲವು ತಿಂಗಳುಗಳಿಂದ ಕಾಣಿಸಿಕೊಂಡು ಸ್ಥಳಿಯರಲ್ಲಿ ಭಯ ಮೂಡಿಸಿದ್ದ 5 ವರ್ಷ ಪ್ರಾಯದ ಗಂಡು ಚಿರತೆಯ ಬಾಲವಿಡಿದು ಬೋನಿಗೆ ಎಳೆದು ಹಾಕಿದ್ದ ಗ್ರಾಮದ ಆನಂದ್​ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಪುರಲೇಹಳ್ಳಿ ರಸ್ತೆಯ ಕುಮಾರ್​ ಎಂಬುವರ ತೋಟದಲ್ಲಿ ಸೋಮವಾರ ಬೆಳಗ್ಗೆ ಕಾಣಿಸಿಕೊಂಡಿದ್ದ ನಿತ್ರಾಣಗೊಂಡಿದ್ದ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ದಂಡು, ದಾಳಿಯೊಂದಿಗೆ ಸಕಲ ಸಲಕರಣೆಯೊಂದಿಗೆ ಬಂದಿದ್ದರೂ ಅದನ್ನು ಹಿಡಿಯಲಾಗದೆ ಕೈಚೆಲ್ಲಿ ಓಡಿಹೋಗುತ್ತಿದ್ದರೂ ಅಸಹಾಯಕರಾದರು.

ಕೈಗೆ ಸಿಕ್ಕಿದ ಚಿರತೆಯನ್ನು ಬೆಲೆ ಬೀಸಿ ಹಿಡಿಯಲಾರದೆ ಕೈಬಿಟ್ಟ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳ ಕಾರ್ಯವೈಖರಿಗೆ ಸಿಟ್ಟಾದ ಸ್ಥಳಿಯರೇ ಗುಂಪುಕಟ್ಟಿಕೊಂಡು ಚಿರತೆಯ ಹಿಂದೋಡಿದರು. ನಿತ್ರಾಣಗೊಂಡಿದ್ದ ಚಿರತೆ ಎಂದಿನ ವೇಗದಲ್ಲಿ ಓಡಲಾರದೆ ನಿಧಾನವಾಗಿ ಹೋಗುತ್ತಿದ್ದರಿಂದ ಯುವಕರೇ ಹಿಡಿದು ಬೋನಿಗಟ್ಟಲು ಸಾಧ್ಯವಾಗಿದೆ.

ಚಿರತೆಯನ್ನು ಹಿಡಿಯುವ ಪಣದಿಂದ ಹಿಮ್ಮೆಟ್ಟಿಸುತ್ತಿದ್ದ ಸ್ಥಳಿಯ ಯುವಕರ ಗುಂಪಿನಲ್ಲಿದ್ದ ಆನಂದ್​ ಎಂಬುವವರು ಧೈರ್ಯದಿಂದ ಚಿರತೆಯ ಬಾಲವನ್ನು ಹಿಡಿದು ಎಳೆದು ಚಿರತೆ ಮುಂದೆ ಹೋಗದಂತೆ ತಡೆದಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಸಿಬ್ಬಂದಿ ಬಲೆಯನ್ನು ಬೀಸಿ ಚಿರತೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದರು.