Rainy weather 
ಜಿಲ್ಲೆ

ಜಿಲ್ಲೆಯಲ್ಲಿ ಮೇ.20ರ ವರೆಗೂ ಯೆಲ್ಲೋ ಅರ್ಲಟ್​

ತುಮಕೂರು: ಜಿಲ್ಲೆಯಲ್ಲಿ ಮೇ.20ರವರೆಗೆ ಗುಡುಗು-, ಸಿಡಿಲು ಸಹಿತ ಭಾರಿ ಪ್ರಮಾಣದ ಗಾಳಿ-, ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೊ ಅರ್ಲಟ್​ ಘೋಷಿಸಲಾಗಿದೆ. ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು ಎಂದು ಜಿಲ್ಲಾಧಿಕಾರಿಯೂ ಆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಶುಭಕಲ್ಯಾಣ್​ ಸೂಚಿಸಿದ್ದಾರೆ.

ಪೂರ್ವ ಮುಂಗಾರು ಹಂಗಾಮಿನಲ್ಲಿ ಈವರೆಗೂ ಶೇ.134ರಷ್ಟು ಅಧಿಕ ಮಳೆಯಾಗಿದ್ದು, ಪ್ರವಾಹ, ಭಾರಿ ಮಳೆಯಿಂದ ಯಾವುದೇ ಜನ-ಜಾನುವಾರುಗಳ ಜೀವ ಹಾನಿಯಾಗದಂತೆ ಮುಂಜಾಗ್ರತೆ ವಹಿಸಬೇಕಿದೆ.

ಜಿಲ್ಲೆಯಲ್ಲಿ ಸಿಡಿಲು ಸಹಿತ ಮಳೆಯಾಗುವುದರಿಂದ ಸಿಡಿಲು ಬಡಿಯುವ ಪ್ರದೇಶದ ಬಗ್ಗೆ ರಾಜ್ಯದಿಂದ ಮುಂಚಿತವಾಗಿ ಸಾರ್ವಜನಿಕರಿಗೆ ಎಸ್​ಎಂಎಸ್​ ಅರ್ಲಟ್​ ರವಾನಿಸಲಾಗುತ್ತಿದೆ. ಸಾರ್ವಜನಿಕರು ಪ್ರತಿಕೂಲ ಹವಾಮಾನ ಸಮಯದಲ್ಲಿ ಹೆಚ್ಚು ಎಚ್ಚರದಿಂದಿರಬೇಕು ಎಂದು ಸೂಚಿಸಲಾಗಿದೆ.

ಕೆರೆ-ಕಟ್ಟೆಗಳ ಏರಿ, ಬಂಡ್​,ಕೋಡಿಗಳಲ್ಲಿ ನೀರು ಸೋರಿಕೆ ಕಂಡು ಬಂದಲ್ಲಿ, ರಸ್ತೆಗಳ ಮೇಲೆ ಅಪಾಯಕಾರಿ ಮಟ್ಟದಲ್ಲಿ ನೀರು ಹರಿಯುತ್ತಿದ್ದಲ್ಲಿ, ನಿಂತಿದ್ದಲ್ಲಿ, ಮರ ಬಿದ್ದು ವಾಹನ ಸಂಚಾರ ಸ್ಥಗಿತವಾಗಿದ್ದಲ್ಲಿ, ವಿದ್ಯುತ್​ ಲೈನ್​, ಕಂಬ ಬಿದ್ದಿದ್ದಲ್ಲಿ, ಮನೆಯೊಳಗಡೆ ನೀರು ನುಗ್ಗಿದಲ್ಲಿ, ಮನೆ ಗೋಡೆ, ಮೇಲ್ಛಾವಣಿ ಬಿದ್ದಿದ್ದಲ್ಲಿ, ಬೆಳೆ ನಷ್ಟ ಇತರೆ ತುರ್ತು ಪರಿಸ್ಥಿತಿಯಲ್ಲಿ ಸಹಾಯವಾಣಿ 7304975519, 0816- 2213400, 155304; ಬೆಸ್ಕಾಂ: 1912, 8277884019 ಸಂಪರ್ಕಿಸಿ.