ಮಧುಗಿರಿ: ಸಂಸಾರದಲ್ಲಿ ನಿರಂತರವಾಗಿ ಗಲಾಟೆ ಮಾಡುತ್ತಿದ್ದ ಗಂಡನ ಮೇಲೆ ಪೆಟ್ರೋಲ್ ಸುರಿದು ಹತ್ಯೆ ಮಾಡಿದ್ದ ಪತ್ನಿಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಲ್ಲಿನ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಯಾದವ ಕರಕೇರ ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ಗುರುವಾರ ತೀರ್ಪು ನೀಡಿದ್ದಾರೆ.
ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿ ಗ್ರಾಮದ ಮುತ್ಯಾಲಮ್ಮ(32) ಸಂತ ಗಂಡನನ್ನು ಹತ್ಯೆ ಮಾಡಿ ಜೀವಾವಧಿ ಶಿಕ್ಷೆಗೊಳಗಾದವರು.
ಪತಿ ಗಂಗಾಧರ ಸಂಸಾರದ ವಿಚಾರದಲ್ಲಿ ಪ್ರತಿದಿನ ತನ್ನ ಪತ್ನಿ ಮುತ್ಯಾಲಮ್ಮಳನ್ನು ಹೊಡೆಯುವುದು, ಬೈಯ್ಯುವುದು ಇತ್ಯಾದಿಯಾಗಿ ಹಿಂಸೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ 2020, ಜನವರಿ 16 ರಂದು ರಂದು ಸಂಜೆ 6 ಗಂಟೆ ಸಮಯದಲ್ಲಿ ವೆಂಕಟಮ್ಮನಹಳ್ಳಿ ಗ್ರಾಮದಲ್ಲಿ ಗಂಗಾಧರ ಕುಡಿದು ಬಂದು ಆತನ ಮನೆಯಲ್ಲಿ ಚಾಪೆಯ ಮೇಲೆ ಮಲಗಿದ್ದಾಗ ಮುತ್ಯಾಲಮ್ಮ ತನ್ನ ಪತಿ ಮಲಗಿದ್ದ ಚಾಪೆಯ ಮೇಲೆ ಮತ್ತು ಕೈಕಾಲುಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರಿಂದ ಗಂಗಾಧರವರಿಗೆ ತೀವ್ರ ಸ್ವರೂಪದ ಗಾಯಗಳಾಗಿ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಫಲಕಾರಿಯಾಗದೇ 2020 ಜನವರಿ 20 ರಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದನು.
ಮುತ್ಯಾಲಮ್ಮ ತನ್ನ ಗಂಡನಾದ ಗಂಗಾಧರನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವುದು ತನಿಖೆಯಿಂದ ದೃಡಪಟ್ಟ ಹಿನ್ನೆಲೆಯಲ್ಲಿ ತನಿಖಾಧಿಕಾರಿ ಸಿಪಿಐ ಜಿ.ಟಿ. ಶ್ರೀಶೈಲಮೂರ್ತಿ ರವರು ನ್ಯಾಯಾಲಯಕ್ಕೆ ದೋಷಾರೋಪನ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿ ಮುತ್ಯಾಲಮ್ಮರವರನ್ನು ದೋಷಿ ಎಂದು ಪರಿಗಣಿಸಿ ತೀರ್ಪು ನೀಡಿರುತ್ತಾರೆ. ಸರ್ಕಾರದ ಪರವಾಗಿ ಅಭಿಯೋಜಕ ಬಿ.ಎಂ. ನಿರಂಜನಮೂರ್ತಿ ವಾದ ಮಂಡಿಸಿದ್ದರು.