ತುಮಕೂರು: ಆರೋಗ್ಯವಂತ ಮಕ್ಕಳ `ವೆಲ್ ಬೇಬಿ ಸ್ಪರ್ಧೆ' ಯ ಸಂಭ್ರಮದಲ್ಲಿ ಬುಧವಾರ ಮಕ್ಕಳೊಂದಿಗೆ ಪೋಷಕರು ಮಿಂದೆದ್ದರು.
ಮಕ್ಕಳ ದಿನಾಚರಣೆ ಅಂಗವಾಗಿ `ನಿಮ್ಮ ಮಕ್ಕಳ ಆರೋಗ್ಯ ಕಾಳಜಿಗೆ ನಾವಿದ್ದೇವೆ' ಎಂಬ ಘೋಷವಾಕ್ಯದೊಂದಿಗೆ ಸಿದ್ದಗಂಗಾ ಆಸ್ಪತ್ರೆ ಸಹಯೋಗದಲ್ಲಿ ರಾಜ್ಯದ ನಂ.1 ದಿನಪತ್ರಿಕೆ ವಿಜಯವಾಣಿ ಆಯೋಜಿಸಿದ್ದ ವೆಲ್ ಬೇಬಿ ಸ್ಪರ್ಧೆಗೆ ಉತ್ತಮ ಸ್ಪಂದನೆ ದೊರೆಯಿತು.
ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಸ್ಪರ್ಧೆಗೆ ಚಾಲನೆ ನೀಡಿದರು, ತುಮಕೂರು ವಿಶ್ವವಿದ್ಯಾಲಯ ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿದರು,
ಸಿದ್ದಗಂಗಾ ವೈದ್ಯಕೀಯ ಮಹಾವಿದ್ಯಾಲಯದ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್.ಪರಮೇಶ್, ಪ್ರಾಚಾರ್ಯೆ ಡಾ.ಶಾಲಿನಿ ಎಂ., ವೈದ್ಯಕೀಯ ಅಧೀಕ್ಷಕ ಡಾ. ನಿರಂಜನ್ ಮೂರ್ತಿ, ಸಿಇಒ ಡಾ.ಸಂಜೀವ್ ಕುಮಾರ್ ಮತ್ತಿತರರ ಉಪಸ್ಥಿತರಿದ್ದರು.
ನಾಲ್ಕ ವಿಭಾಗಗಳಲ್ಲಿ 156ಕ್ಕು ಹೆಚ್ಚು ಮಕ್ಕಳು ನೋಂದಣಿ ಮಾಡಿಸಿಕೊಂಡಿದ್ದು ಆರೋಗ್ಯದ ಜತೆ ಮಕ್ಕಳಲ್ಲಿನ ಕೌಶಲ್ಯ, ಪ್ರತಿಭೆ, ಬುದ್ಧಿಮತ್ತೆ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವ ಮೂಲಕ ಸ್ಪರ್ಧೆಯ ವಿಜೇತರನ್ನು ಆಯ್ಕೆ ಮಾಡಿ, ಬಹುಮಾನ ಡಲಾಯಿತು.
ಯಕ್ಷಗಾನ ವೇಷಧಾರಿ ಮಗು ಜತೆಗೆ ವೀರಗಾಸೆಯ ಲಿಂಗವೀರರ ಹೆಜ್ಜೆ ಸಪ್ಪಳ ಸ್ಪರ್ಧೆಗೆ ಮೆರಗು ತಂದಿತ್ತು. ಇನ್ನೂ ಚೋಟಾ ಭೀಮ್, ಮುದ್ದುಕೃಷ್ಣ ವೇಷಭೂಷಣ ತೊಟ್ಟ ಮಕ್ಕಳ ಕಲರವ ಆಸ್ಪತ್ರೆ ಅಂಗಳದಲ್ಲಿ ವಿಶೇಷವಾಗಿತ್ತು. ಪೋಷಕರ ಸಂಭ್ರಮಕ್ಕು ಎಣೆಯಿರಲಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳಿಗೆಲ್ಲರಿಗೂ ಪ್ರಶಂಸಾ ಪತ್ರ ನೀಡಲಾಯಿತು.
ವೆಲ್ ಬೇಬಿ ಸ್ಪರ್ಧೆಗೆ ನೋಂದಣಿ ಮಾಡಿಸಿದ ಹುಟ್ಟಿನಿಂದ 5 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆ ಜತೆಗೆ ಮಕ್ಕಳನ್ನು ಕರೆತಂದಿದ್ದ ಪೋಷಕರಿಗೆ ನ್ಯೂಟ್ರಿಷಿಯನ್ ಕೌನ್ಸೆಲಿಂಗ್ ಅನ್ನು ಸಹ ಮಾಡಲಾಯಿತು. ಮಕ್ಕಳ ತಜ್ಞರಾದ ಡಾ.ಶ್ರಾವ್ಯ, ಡಾ.ಪ್ರಿಯಾಂಕ, ಡಾ.ಚೈತ್ರಾ, ಡಾ.ಸೌಮ್ಯ ಹಾಗೂ ಡಾ.ಸುಮನ್ ಪಾಟೀಲ್ ತಂಡ ಹೆಲ್ತ್ ಚೆಕ್ ಅಪ್ ಜತೆ ಕೌನ್ಸೆಲಿಂಗ್ ನಡೆಸಿತು.
ಮಕ್ಕಳ ದಿನಾಚರಣೆ ಅಂಗವಾಗಿ ಸಿದ್ದಗಂಗಾ ಆಸ್ಪತ್ರೆಯಲ್ಲಿ ಮಕ್ಕಳಿಗಾಗಿ ಉಚಿತ ಆರೋಗ್ಯ ತಪಾಸಣೆ ಹಾಗೂ ನ್ಯೂಟ್ರಿಷಿಯನ್ ಕೌನ್ಸೆಲಿಂಗ್ ನ.14ರವರೆಗೆ ಮುಂದುವರೆಯಲಿದೆ. ಪ್ರತಿನಿತ್ಯ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಈ ಉಚಿತ ತಪಾಸಣೆ ಸೇವೆ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ ದೂ: 0816-2602222 ಸಂಪರ್ಕಿಸಬಹುದು.