ಜಿಲ್ಲೆ

ತುಮಕೂರು ವಿವಿ ಸಿಂಡಿಕೇಟ್​ಗೆ ಸದಸ್ಯರ ನಾಮನಿರ್ದೇಶನ

ತುಮಕೂರು: ಕಳೆದ ಒಂದುವರೆ ವರ್ಷದಿಂದ ಖಾಲಿ ಉಳಿದಿದ್ದ ತುಮಕೂರು ವಿವಿ ಸಿಂಡಿಕೇಟ್​ ಸದಸ್ಯರ ನೇಮಕಾತಿಗೆ ಹಿಡಿದಿದ್ದ ಗ್ರಹಣ ಬಿಟ್ಟಿದ್ದು ಆರು ಸದಸ್ಯರನ್ನು ನಾಮನಿರ್ದೇಶಕಗೊಳಿಸಿ ಸರ್ಕಾರ ಬುಧವಾರ ಆದೇಶಿಸಿದೆ.

ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳಿಗೆ ಸರ್ಕಾರದಿಂದ ಸಿಂಡಿಕೇಟ್​ ಸದಸ್ಯರ ನಾಮನಿರ್ದೇಶನವಾಗಿದ್ದರೂ ತುಮಕೂರು ವಿವಿಗೆ ಮಾತ್ರ ನೇಮಕಾತಿ ಮಾಡುವುದಕ್ಕೆ ತಡಮಾಡಿತ್ತು. ಸಿಂಡಿಕೇಟ್​ ಸದಸ್ಯರ ಅನುಪಸ್ಥಿತಿಯಲ್ಲಿ ತುಮಕೂರು ವಿವಿ ಸಾಕಷ್ಟು ಮಹತ್ವದ ತಿರ್ಮಾನಗಳನ್ನು ತೆಗೆದುಕೊಂಡಿದ್ದು ಸಾರ್ವಜನಿಕ ಅಭಿಪ್ರಾಯಗಳಿಗೆ ದನಿ ಸಿಕ್ಕಂತಾಗಿದೆ.

ಮಹಿಳಾ ಕೋಟಾದಲ್ಲಿ ತುಮಕೂರು ತಾಲೂಕು ಕೆಸರುಮಡು ಗ್ರಾಮದ ಬಿಎ, ಎಲ್​ಎಲ್​ವಿ ಪದವೀಧರೆ ಆರ್​.ಪ್ರಿಯದರ್ಶಿ, ಪರಿಶಿಷ್ಟ ಜಾತಿ ಕೋಟಾದಲ್ಲಿ ನಂಜನಗೂರು ತಾಲೂಕು ಹೊಸಕೋಟೆಯ ಎಚ್​.ಎಸ್​.ಅಶೋಕ್​, ಅಲ್ಪಸಂಖ್ಯಾತ ಕೋಟಾದಲ್ಲಿ ವೈದ್ಯೆ, ಕಾಂಗ್ರೆಸ್​ ಕಾರ್ಯಕರ್ತೆ ರಾನಬೇಗಂ, ಒಬಿಸಿ ಕೋಟಾದಲ್ಲಿ ಮಧುಗಿರಿ ತಾಲೂಕು ಎಂ.ಗೊಲ್ಲರಹಟ್ಟಿಯ ಡಾ.ಎಂ.ಜಿ.ಶಿವಣ್ಣ, ಸಾಮಾನ್ಯ ವಿಭಾಗದಿಂದ ದಾವಣಗೆರೆಯ ಸಮಾಜಿಕ ಕಾರ್ಯಕರ್ತ ಡಾ.ಎಚ್​.ಆರ್​.ಮನೂಜ್​, ಬೆಂಗಳೂರು ಜಯನಗರದ ವೈದ್ಯ ಡಾ.ಎಂ.ಎಸ್​.ಪ್ರಕಾಶ ಅವರನ್ನು ನೇಮಿಸಿ ಆದೇಶಿಸಿ ವಿವಿಗೆ ಸಾಮಾಜಿಕ ಮೀಸಲಾತಿ ಪ್ರಮಾಣಪತ್ರ ನೀಡಬೇಕಿದೆ.

ವಿವಿಗೆ ಸಿಂಡಿಕೇಟ್​ ಸದಸ್ಯರ ನೇಮಕಾತಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಬೆಂಬಲಿಗರಿಗೆ ಸಿಂಗಪಾಲು ಸಿಕ್ಕಿದ್ದು ಸಹಕಾರ ಸಚಿವ ಕೆ.ಎನ್​.ರಾಜಣ್ಣ ಅವರು ಶಿಾರಸು ಮಾಡಿದ್ದ ಮಧುಗಿರಿ ತಾಲೂಕಿನ ಒಬ್ಬರಿಗೆ ಅವಕಾಶವಾಗಿದೆ ಎನ್ನಲಾಗಿದೆ. ಪರಿಶಿಷ್ಟ ಸಮುದಾಯಕ್ಕೆ ಜಿಲ್ಲೆಯಲ್ಲಿ ಪ್ರಾತಿನಿಧ್ಯ ನೀಡದೆ ಮೈಸೂರಿನವರಿಗೆ ಪ್ರಾತಿನಿತ್ಯ ನೀಡಿರುವುದು ಪರಮೇಶ್ವರ್​ ರಾಜಕೀಯ ಪ್ಲಾನ್​ ಎಂದೇ ವಿಶ್ಲೇಷಿಸಲಾಗುತ್ತಿದೆ.

ತುಮಕೂರು ವಿವಿಗೆ ಆರು ಸದಸ್ಯರನ್ನು ಸಾಮಾಜಿಕ ನ್ಯಾಯದಲ್ಲಿ ನೇಮಕ ಮಾಡಲು ಅವಕಾಶವಿದ್ದು ಶಿಕ್ಷಣ ಕ್ಷೇತ್ರದಲ್ಲಿ ಅನುಭವವಿರುವ ಕಾಂಗ್ರೆಸ್​ ಸಂಟನೆಗೆ ಅನುಕೂಲವಾಗುವ ಶಿಕ್ಷಣ ತಜ್ಞರನ್ನು ನೇಮಕಾತಿಗೆ ಈಗಾಗಲೇ ಶಿಾರಸು ಮಾಡಲಾಗಿದೆ ಎನ್ನಲಾಗಿತ್ತು ಆದರೆ, ಪ್ರಸ್ತುತ ನೇಮಕಾತಿಯಾಗಿರುವ ಆರು ಜನರು ಉನ್ನತ ಮಟ್ಟದ ವಿದ್ಯಾಭ್ಯಾಸ ಮಾಡಿದ್ದಾರೆಯಾದರೂ ಶೈಕ್ಷಣಿಕ ವಲಯದ ಅನುಭವನದ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.

ನಾಮನಿರ್ದೇಶಿತ ಸದಸ್ಯರು ತುಮಕೂರು ವಿವಿ ಸಂಯೋಜಿತ ಕಾಲೇಜುಗಳಲ್ಲಿ ಯಾವುದೇ ಸ್ಥಾನಮಾನ ಹೊಂದಿರಬಾರದು ಎಂಬ ನಿಯಮವಿದೆ ಜತೆಗೆ ಸಾಮಾಜಿಕ ಮೀಸಲಾತಿ ಮತ್ತು ಪಡೆದಿರುವ ಸ್ನಾತಕ, ಸ್ನಾತಕೋತ್ತರ ಪದವಿಗಳ ನೈಜತೆ ಬಗ್ಗೆ ಒಂದು ತಿಂಗಳ ಒಳಗಾಗಿ ಸಕ್ಷಮ ಪ್ರಾಧಿಕಾರದಿಂದ ದೃಢೀಕರಣ ಒಡೆದು ಪೂರಕ ದಾಖಲೆಗಳನ್ನು ವಿವಿಗೆ ನೀಡಬೇಕಿದೆ.