ತುಮಕೂರು: ತುಮಕೂರು ವಿವಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸ್ನಾತಕೋತ್ತರ ವಿದ್ಯಾರ್ಥಿ ನಿಲಯದ ಅವ್ಯವಸ್ಥೆಗೆ ಬೇಸತ್ತ ವಿದ್ಯಾರ್ಥಿಗಳು ಶನಿವಾರ ರಾತ್ರಿ ವಿವಿ ಮುಖ್ಯಧ್ವಾರದ ಮುಂದೆ ಆಗಮಿಸಿ ದಿಢೀರ್ ಪ್ರತಿಭಟನೆ ನಡೆಸಿದರು.
ವಿವಿ ಆವರಣದಲ್ಲಿಯೇ ಇರುವ ವಿದ್ಯಾರ್ಥಿ ನಿಲಯದ 250 ವಿದ್ಯಾರ್ಥಿಗಳು ಶೌಚಾಲಯ ಹಾಗೂ ಊಟದ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ಪ್ರತಿಭಟನೆ ನಡೆದರೂ ಕಿವಿಗೊಡದ ವಿವಿ ಆಡಳಿತ ಮಂಡಳಿ ವರ್ತನೆಗೆ ಬೇಸತ್ತ ವಿದ್ಯಾರ್ಥಿಗಳು ನಗರದ ಶಿರಾ ಗೇಟ್‌ನಲ್ಲಿರುವ ಕುಲಪತಿಗಳ ನಿವಾಸಕ್ಕೆ ತೆರಳಲು ಮುಂದಾದರೂ ಸ್ಥಳೀಯ ಠಾಣೆ ಪೊಲೀಸರಿಗೆ ಮಾಹಿತಿಯೇ ಇರಲಿಲ್ಲ.
ನೂರಾರು ವಿದ್ಯಾರ್ಥಿಗಳು ರಾತ್ರಿ ಸಮಯದಲ್ಲಿ ರಸ್ತೆ ಮೇಲೆ ದಿಢೀರ್ ಪ್ರತಿಭಟನೆಗೆ ಮುಂದಾಗಿರುವ ವಿಷಯ ತಿಳಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್ ಸ್ಥಳಕ್ಕಾಗಮಿಸಿ ವಿದ್ಯಾರ್ಥಿಗಳ ಮನಒಲಿಸಿದರು.
ಹಾಸ್ಟೆಲ್ ನಿರ್ವಹಣೆ ಹೊತ್ತಿರುವ ಡಾ.ಚಿಕ್ಕಣ್ಣ ಅವರು ಜವಬ್ಧಾರಿಯನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ, ಬೆಳಗಿನ ನಿತ್ಯಕರ್ಮಕ್ಕೆ ಕೇವಲ 10 ಶೌಚಾಗೃಹಗಳಿದ್ದೂ ಶೌಚಾಗೃಹ ಇಡೀ ಹಾಸ್ಟೆಲ್ ವ್ಯವಸ್ಥೆಗೆ ಕನ್ನಡಿಹಿಡಿದಂತಿದೆ ಎಂದು ವಿದ್ಯಾರ್ಥಿಗಳು ದೂರಿದರು.
ಟಾಯ್ಲೆಟ್ ಪಿಟ್‌ಗಳು ಕಟ್ಟಿಕೊಂಡು ಉಕ್ಕುತ್ತಿದ್ದು ಮೂಗುಮುಚ್ಚಿಕೊಂಡು ದಿನ ದೂಡುವ ಪರಿಸ್ಥಿತಿ ವಿದ್ಯಾರ್ಥಿಗಳದ್ದಾಗಿದೆ. ಶೌಚಾಗೃಹಗಳು ನಿರ್ವಹಣೆ ಇಲ್ಲದೆ ರೋಗ ಹರಡುವ ತಾಣಗಳಾಗಿ ಮಾರ್ಪಟ್ಟಿವೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.