ಜಿಲ್ಲೆ

ತುಮಕೂರು ವಿವಿಯಲ್ಲಿ ಗಾಂಧೀ ಸ್ಮರಣೆ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಮಹಾತ್ಮ ಗಾಂಧೀಜಿ ನೀಡಿದ ಒಂದು ಅಸಹಕಾರ ಚಳವಳಿ ಕರೆಗೆ ಇಡೀ ದೇಶ ಬದಲಾಯಿತು. ಲಾಲ್​ ಬಹುದ್ದೂರ್​ ಶಾಸ್ತ್ರೀಜಿ ನೀಡಿದ ಒಂದು ಹೊತ್ತಿನ ಉಪವಾಸದ ಕರೆ ದೇಶದಲ್ಲಿ ಹಸಿರು ಕ್ರಾಂತಿಗೆ ಬುನಾದಿಯಾಯಿತು. ಇಬ್ಬರು ನಾಯಕರ ಆದರ್ಶ ಬದುಕು ಎಲ್ಲಾ ಕಾಲಕ್ಕೂ ಅನುಕರಣೀಯ ಎಂದು ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಸ್ಮರಿಸಿದರು.

ತುಮಕೂರು ವಿವಿ ಗುರುವಾರ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಮತ್ತು ಲಾಲ್​ ಬಹದ್ದೂರ್​ ಶಾಸ್ತ್ರೀಯವರ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು ಗಾಂಧೀಜಿಯವರ ಸರಳತೆ ಇಡೀ ದೇಶಕ್ಕೆ ಮಾದರಿಯಾಯಿತು ಹಾಗೂ ಲಾಲ್​ ಬಹುದ್ದೂರ್​ ಶಾಸ್ತ್ರೀಜಿ ಅವರ ಪ್ರಾಮಾಣಿಕ ನಡೆ ಇಂದಿಗೂ ಅನುಕರಣೀಯವಾಗಿದೆ ಎಂದರು.

ಒಳ್ಳೆಯದು ಮಾಡುವುದಕ್ಕೆ ಅಧಿಕಾರ ಬೇಕಾಗಿಲ್ಲ. ಆದರ್ಶಪ್ರಾಯ ಬದುಕು ಇದ್ದರೆ ಸಾಕು. ಅದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟವರು ಈ ಇಬ್ಬರು ಮಹಾನ್​ ವ್ಯಕ್ತಿಗಳು. ಹಾಗಾಗಿ ಇಂದಿಗೆ ಮತ್ತು ಮುಂದೆಂದಿಗೂ ಈ ಮಹಾನ್​ ವ್ಯಕ್ತಿಗಳ ಬದುಕು ಪ್ರಸ್ತುತವಾಗಿದೆ ಎಂದರು.

ಬಡತನದಲ್ಲಿ ಹುಟ್ಟಿ ಬಡತನದಲ್ಲಿ ಜೀವನ ನಡೆಸಿದ ವ್ಯಕ್ತಿ ಶಾಸ್ತ್ರೀಜಿಯವರು. ಸುಸ್ಥಿರ ಅಭಿವೃದ್ಧಿಯೊಂದಿಗೆ ದೇಶ ಹೇಗೆ ಮುನ್ನಡೆಯಬೇಕು ಎಂಬ ಮಹದಾಸೆ ಇಟ್ಟುಕೊಂಡವರು. ಗಾಂಧೀಜಿಯವರ ಆದರ್ಶ ಬದುಕನ್ನು ನಮ್ಮ ದೇಶ ಮಾತ್ರವಲ್ಲದೆ ಇಡೀ ಜಗತ್ತು ಅನುಸರಿಸುತ್ತಾ ಗೌರವಿಸುತ್ತಾ ಬಂದಿದೆ ಎಂದರು.

ಕುಲಸಚಿವ ಪ್ರೊ.ಎಂ.ಕೊಟ್ರೇಶ್​ ಮಾತನಾಡಿ, ಗಾಂಧೀಜಿ ರಾಮ ರಾಜ್ಯದ ಕನಸು ಕಂಡವರು. ರಾಮ ರಾಜ್ಯವಾಗಬೇಕಾದರೆ ಮೊದಲು ಗ್ರಾಮ ರಾಜ್ಯವಾಗಬೇಕು ಎಂದಿದ್ದ ಅವರು ಅದರ ಸಾಕಾರಕ್ಕಾಗಿ ಸದಾ ಶ್ರಮಿಸಿದರು. ದೋಣಿಯಲ್ಲಿ ಹೋಗಲು ಹಣವಿಲ್ಲದೆ ಗಂಗಾ ನದಿಯಲ್ಲಿ ಈಜಿ ದಡ ಸೇರಿದವರು ಲಾಲ್​ ಬಹದ್ದೂರ್​ ಶಾಸ್ತ್ರಿಯವರು. ಅದೇ ಗಂಗಾ ನದಿಯ ದಡದಲ್ಲಿ ಬಡತನದ ತೀವ್ರತೆ ಅರಿತವರು ಎಂದರು.

ಹಿರಿಯ ಪ್ರಾಧ್ಯಾಪಕ ಪ್ರೊ.ಪಿ.ಪರಮಶಿವಯ್ಯ, ಕಲಾ ಕಾಲೇಜು ಪ್ರಾಚಾಯೆರ್ ಡಾ.ಜಿ.ದಾಕ್ಷಾಯಣಿ, ಕಾರ್ಯಕ್ರಮದ ಸಂಚಾಲಕ ಡಾ.ಎ.ಎಂ. ಮಂಜುನಾಥ್​ ಮತ್ತಿತರರು ಇದ್ದರು.