ಜಿಲ್ಲೆ

ಶಿರಾದಲ್ಲಿ ಅಂತರಾಷ್ಟೀಯ ಕ್ರಿಕೆಟ್ ಕ್ರೀಡಾಂಗಣ; 25 ಎಕೆರೆ ಭೂಮಿ ಗುರುತು; ಕೆಎಸ್‌ಸಿಎ ಅಧ್ಯಕ್ಷ ಭೇಟಿ

ಸೋರಲಮಾವು ಶ್ರೀಹರ್ಷ
ತುಮಕೂರು: ಗ್ರಾಮೀಣ ಪ್ರದೇಶದ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ತುಮಕೂರಿನಲ್ಲಿಯೂ ಅಂತರಾಷ್ಟ್ರೀಯ ಗುಣಮಟ್ಟದ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಬೇಕೆಂಬ ಬಹುದಿನದ ಕನಸು ಈಡೇಡುವ ಕಾಲ ಸನ್ನಿಹಿತವಾಗುತ್ತಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಎ.ರಘುರಾಮ್‌ಭಟ್ ನೇತೃತ್ವ ತಂಡ ಮಂಗಳವಾರ ಶಿರಾ ತಾಲೂಕಿನ ತುಮಕೂರು ವಿವಿ ಪಿಜಿ ಸೆಂಟರ್ ಸಮೀಪದಲ್ಲಿರು ಸರ್ಕಾರಿ ಜಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಸ್ಥಳೀಯ ಶಾಸಕರೂ ಆದ, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಕೂಡ ಇದೇ ಸಂದರ್ಭದಲ್ಲಿ ಹಾಜರಿದ್ದು ಕ್ರೀಡಾಂಗಣ ನಿರ್ಮಾಣಕ್ಕೆ ಅಗತ್ಯವಾಗಿರುವ ಮೂಲಸೌಕರ್ಯ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

ತುಮಕೂರಿಗೆ ಹತ್ತಿರದಲ್ಲಿಯೇ ಇರುವ, ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣಕ್ಕೆ ಸಮೀಪವಾಗುವ ಶಿರಾ, ತುಮಕೂರು ತಾಲೂಕಿನ ಸೋರೆಕುಂಟೆ ಹಾಗೂ ಹಿರೇಹಳ್ಳಿಯಲ್ಲಿಯೂ ಕ್ರೀಡಾಂಗಣ ನಿರ್ಮಿಸುವ ಜಾಗ ಗುರುತಿಸಲಾಗಿದ್ದು ಹೊಸ ಪ್ರಸ್ತಾಪ ಸಿದ್ಧವಾಗಿದೆ.

ತುಮಕೂರಿನಲ್ಲಿನ ಕ್ರಿಕೆಟ್ ಕಾರ್ಯಚಟುವಟಿಕೆಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಕೆಎಸ್‌ಸಿಎ ಬೆಂಗಳೂರಿನ ಕ್ರೀಡಾಂಗಣದ ಮೇಲಿನ ಒತ್ತಡ ಕಡಿಮೆ ಮಾಡಲು ಸಮೀಪದ ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಿಸಲು ಒಲವು ತೋರಿದೆ.

ಬಹು ವರ್ಷದ ಹಿಂದೆಯೇ ತುಮಕೂರು ನಗರದ ಗಾರೆನರಸಯ್ಯನಕಟ್ಟೆ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಿಸಲು ಮುಂದಾಗಿದ್ದ ಕೆಎಸ್‌ಸಿಎ ಪರಿಸರವಾದಿಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಪ್ರಸ್ತಾಪವನ್ನು ಕೈಬಿಟ್ಟಿತ್ತು.

ಕ್ರೀಡಾಂಗಣವನ್ನು ಸ್ವಂತ ಕ್ಷೇತ್ರಗಳಲ್ಲಿ ನಿರ್ಮಿಸಲು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಹಾಗೂ ಟಿ.ಬಿ.ಜಯಚಂದ್ರ ನಡುವೆ ಪೈಪೋಟಿಯಿದೆ. ತುಮಕೂರಿನ ಹಿರೇಹಳ್ಳಿ ಅಥವಾ ಸೋರೆಕುಂಟೆ ಬಳಿ ನಿರ್ಮಿಸಲು ಡಾ.ಪರಮೇಶ್ವರ್ ಆಸಕ್ತಿ ತೋರಿದ್ದಾರೆ.


ಇದೇ ಸಂದರ್ಭದಲ್ಲಿ ಶಿರಾದಲ್ಲಿ ಕ್ರೀಡಾಂಗಣ ನಿರ್ಮಿಸಲು ಟಿ.ಬಿ.ಜಯಚಂದ್ರ ಕೂಡ ವಿಶೇಷ ಆಸಕ್ತಿ ವಹಿಸಿದ್ದು ಈ ಆರೋಗ್ಯಕರ ಪೈಪೋಟಿಯಲ್ಲಿ ಯಾರು ಯಶಸ್ಸು ಕಾಣಲಿದ್ದಾರೆ ಎಂಬ ಕುತೂಹಲವಿದೆ.


ಜಿಲ್ಲೆಯಲ್ಲಿ ಎಲ್ಲಿಯೇ ಕ್ರೀಡಾಂಗಣ ನಿರ್ಮಾಣವಾದರೂ ಕ್ರೀಡಾಪಟುಗಳಿಗೆ, ಕ್ರಿಕೆಟ್ ಪ್ರಿಯರಿಗೆ ಅಂತರಾಷ್ಟ್ರೀಯ ಗುಣಮಟ್ಟದ ಪಂದ್ಯಗಳ ವೀಕ್ಷಣೆ, ತರಬೇತಿಗೆ ಅವಕಾಶವಾಗಲಿದೆ.