ತುಮಕೂರು: ತುಮಕೂರು ವಿಶ್ವವಿದ್ಯಾಲಯದ 16ನೇ ಘಟಿಕೋತ್ಸವವು ಆ.7 ರಂದು ನಡೆಯಲಿದೆ. ರಂಗಕರ್ಮಿ, ನಿರ್ದೇಶಕ, ನಟ ಟಿ.ಎಸ್.ನಾಗಾಭರಣ, ಸಮಾಜಸೇವಕ ಆರ್.ಎಲ್.ರಮೇಶ್‌ಬಾಬು ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ಗೆ ಭಾಜನರಾಗಿದ್ದು ವಿವಿ ಕುಲಾಧಿಪತಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ.
ರಾಜ್ಯಸಭಾ ಮಾಜಿ ಸದಸ್ಯೆ ಬಿ.ಜಯಶ್ರೀ, ಜಲಯೋಗ ಅಂತಾರಾಷ್ಟ್ರೀಯ ಕ್ರೀಡಾಪಟು ನಾಗಾನಂದ ಸ್ವಾಮಿ, ಪಾವಗಡದ ರಾಮಕೃಷ್ಣ ಆಶ್ರಮದ ಜಪನಾಂದ ಜೀ ಹೆಸರು ಸೇರಿ 6 ಸಾಧಕರನ್ನು ವಿವಿ ಸಿಂಡಿಕೇಟ್ ಸಭೆ ಶಿಫಾರಸು ಮಾಡಿದ್ದು ಅಂತಿಮವಾಗಿ ಟಿ.ಎನ್.ನಾಗಾಭರಣ, ರಮೇಶ್‌ಬಾಬು ಹೆಸರುಗಳನ್ನೇ ಗೌರವ ಡಾಕ್ಟರೇಟ್‌ಗೆ ಅಂತಿಮಗೊಳಿಸಿ ರಾಜ್ಯಪಾಲರ ಅಂಗಳಕ್ಕೆ ಕಳುಹಿಸಿದ್ದು ಅಧಿಕೃತ ಮುದ್ರೆ ಹೊತ್ತಿದ್ದಾರೆ. ಈ ಹಿಂದೆ ಜಪನಾಂದ ಸ್ವಾಮೀಜಿ ಅವರಿಗೆ ತುಮಕೂರು ವಿವಿಯ ಗೌರವ ಡಾಕ್ಟರೇಟ್ ದೊರೆತಿರುವ ಹಿನ್ನೆಲೆಯಲ್ಲಿ ಅವರ ಹೆಸರನ್ನು ಕೈಬಿಡಲಾಗಿದೆ.
ಅಕ್ಕಿಗಿರಣಿ ಮಾಲೀಕನಿಗೆ ಒಲಿದ ಗೌಡಾ : ಮೈಸೂರುಜಿಲ್ಲೆಯ ತಲಕಾಡು ಮೂಲದ ಚಿತ್ರ ನಿರ್ದೇಶಕ ಟಿ.ಎನ್.ನಾಗಾಭರಣ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತ್ಯಾಮಗೊಂಡ್ಲುವಿನ ಆರ್.ಎಲ್.ರಮೇಶ್‌ಬಾಬು ಸಮಾಜಸೇವಾ ಕ್ಷೇತ್ರದಿಂದ ಗೌರವ ಡಾಕ್ಟರೇಟ್‌ಗೆ ಭಾಜನರಾಗಿದ್ದಾರೆ.
10273 ಮಂದಿಗೆ ಪದವಿ : ಈ ಬಾರಿಯ ಘಟಿಕೋತ್ಸವದಲ್ಲಿ ಒಟ್ಟು 10273 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ. 5 ಅಭ್ಯರ್ಥಿಗಳು ಡಿ.ಲಿಟ್ ಪದವಿ, 78 ಅಭ್ಯರ್ಥಿಗಳು ಪಿ.ಎಚ್‌ಡಿ., ಪದವಿ ಹಾಗೂ 1517 ಅಭ್ಯರ್ಥಿಗಳು ಸ್ನಾತಕೋತ್ತರ, 8756 ಅಭ್ಯರ್ಥಿಗಳು ಸ್ನಾತಕ ಪದವಿ ಪಡೆಯಲಿದ್ದಾರೆ. ಒಟ್ಟು 80 ವಿದ್ಯಾರ್ಥಿಗಳು 99 ಚಿನ್ನದ ಪದಕಗಳನ್ನು ಹಾಗೂ ಹತ್ತು ನಗದು ಬಹುಮಾನಗಳನ್ನು ಈ ಬಾರಿಯ ಘಟಿಕೋತ್ಸವದಲ್ಲಿ ಪ್ರದಾನಮಾಡಲಿದೆ.
ವಿಶ್ವವಿದ್ಯಾನಿಲಯವು ಎಲ್ಲಾ ಸ್ನಾತಕೋತ್ತರ ಪದವಿಗಳಿಗೆ ತಲಾ ಐದು ರ‌್ಯಾಂಕುಗಳನ್ನು, ಬಿಎ/ಬಿಎಸ್‌ಡಬ್ಲ್ಯೂ/ಬಿಎಸ್‌ಸಿ/ಬಿಕಾಂ/ಬಿಬಿಎಂ/ಬಿಇಡಿ (ಸೆಮಿಸ್ಟರ್ ಪದ್ಧತಿ)ಗಳಿಗೆ ತಲಾ ಹತ್ತು ರ‌್ಯಾಂಕುಗಳನ್ನು, ಬಿಎಫ್‌ಎ, ಬಿವಿಎ ಹಾಗೂ ಬಿಎ ಇಂಟಗ್ರೇಟೆಡ್ ಕನ್ನಡ ಪಂಡಿತ್‌ಗೆ ತಲಾ ಒಂದು ರ‌್ಯಾಂಕುಗಳನ್ನು ಘೋಷಿಸಿದೆ.
ಜೆಎನ್‌ಯು ಕುಲಪತಿ ಘಟಿಕೋತ್ಸವ ಭಾಷಣ
ಸೋಮವಾರ ಬೆಳಗ್ಗೆ 11ಕ್ಕೆ ವಿವಿಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಸಭಾಂಗಣದಲ್ಲಿ ಘಟಿಕೋತ್ಸವ ನಡೆಯಲಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸುವರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಉಪಸ್ಥಿತರಿರುವರು. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಾಂತಿಶ್ರೀ ಧೂಳಿಪುಡಿ ಪಂಡಿತ್, ಘಟಿಕೋತ್ಸವ ಭಾಷಣ ನೆರವೇರಿಸುವರು. ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಕುಲಸಚಿವೆ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್ ಉಪಸ್ಥಿತರಿರುವರು.