ತುಮಕೂರು: ಜಿಲ್ಲೆಯಲ್ಲಿ ಬರದ ನಡುವೆಯೇ ಜನರನ್ನು ಸಾಲ ವಸೂಲಾತಿಗೆ ಪೀಡುತ್ತಿರುವ ಬ್ಯಾಂಕ್, ಮೈಕ್ರೋ ಫೈನಾನ್ಸ್, ಖಾಸಗಿ ಲೇವಾದೇವಿದಾರರು ಹಾಗೂ ಸಾಲದಾತರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಬರಪರಿಸ್ಥಿತಿಯಿಂದ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿ ಕಂಗಾಲಾಗಿರುವ ಹಿನ್ನೆಲೆಯಲ್ಲಿ ಮುಂದಿನ 2 ತಿಂಗಳು ಯಾವುದೇ ರೈತರಿಂದ ಸಾಲವಸೂಲಾತಿ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ರಾತ್ರಿ ರೈತರ ಆತ್ಮಹತ್ಯೆಗೆ ಸಂಬAಧಿಸಿದAತೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಜಿಲ್ಲಾಧಿಕಾರಿ ಸಾಲವಸೂಲಾತಿಗೆ ಕಿರುಕುಳ ನೀಡುತ್ತಿರುವ ಪ್ರಕರಣ ಹೆಚ್ಚಾಗುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೈತರು ಸಾಲದ ಸಂಕಷ್ಟದಿAದ ಹೊರಬರಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣ ವರದಿಯಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಸಾಲ ಮರುಪಾವತಿಗೆ ಬ್ಯಾಂಕು, ಮೈಕ್ರೋ ಫೈನಾನ್ಸ್ ಕಂಪನಿಗಳು ರೈತರಿಗೆ ಕಿರುಕುಳ ನೀಡಬಾರದು. ಸಾಲ ವಸೂಲಿಗಾಗಿ ರೈತರಿಗೆ ತೊಂದರೆ ಕೊಡುವುದು ಕಂಡು ಬಂದರೆ ಅಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದರು.
ಕಳೆದ 3 ದಿನಗಳಲ್ಲಿ ಜಿಲ್ಲೆಯ ತಿಪಟೂರು ತಾಲೂಕಿನ ಮಹಿಳೆ ಹಾಗೂ ಕೊರಟಗೆರೆ ತಾಲೂಕಿನ ಒಬ್ಬ ರೈತ ಸೇರಿದಂತೆ ಇಬ್ಬರು ಮೈಕ್ರೋ ಫೈನಾನ್ಸ್ ಕಂಪನಿಗಳಿAದ ಸಾಲ ಪಡೆದು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ವರದಿಯಾಗಿದೆ.
ಯಾವುದೇ ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ಪಡೆದವರಿಂದ ವಸೂಲಾತಿಗಾಗಿ ಮನೆಗೆ ಭೇಟಿ ನೀಡಿ ಮಾನಸಿಕ ನಿಂದನೆ ಮಾಡಿದರೆ ಅಂಥವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಎಂದರು.
ಇAಥ ಪ್ರಕರಣಗಳು ಕಂಡು ಬಂದರೆ ಕೂಡಲೇ ಪೊಲೀಸ್ ಸಹಾಯವಾಣಿ ಸಂಖ್ಯೆ 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದರೆ ಪೊಲೀಸ್ ಅಧಿಕಾರಿಗಳು ನೆರವಿಗೆ ಬರುತ್ತಾರೆ ಎಂದು ಭರವಸೆ ನೀಡಿದರು