ಜಿಲ್ಲೆ

ಡಿಕೆಶಿ ಲಿಂಕ್​ ಕೆನಾಲ್​ ಕುರಿತ ಪ್ರಶ್ನೆ ಕೇಳಿಸಿಕೊಳ್ಳಲೇ ಇಲ್ಲ... ಶಾಸಕರೂ ತುಟಿಬಿಚ್ಚಲಿಲ್ಲ...

ತುಮಕೂರು: ಜಿಲ್ಲೆಯೆಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿರುವ ಮಾಗಡಿ, ರಾಮನಗಕ್ಕೆ ನೀರು ಕೊಂಡೊಯ್ಯುವ ಹೇಮಾವತಿ ಲಿಂಕ್​ ಕೆನಾಲ್​ ಯೋಜನೆ ಬಗ್ಗೆ ಪತ್ರಕರ್ತರು ಪದೇಪದೇ ಪ್ರಶ್ನೆಗಳನ್ನು ಕೇಳಿದರೂ ಅದನ್ನು ಕೇಳಿಸಿಕೊಂಡರೂ ಕೇಳಿಸದಂತೆ ಡಿ.ಕೆ.ಶಿವಕುಮಾರ್​ ಜಾಣಕಿವುಡು ಪ್ರದರ್ಶಿಸಿದರು.

ಗುಬ್ಬಿ ತಾಲೂಕಿನಲ್ಲಿಯೇ ನಡೆದ ಕಾರ್ಯಕ್ರಮ ವೇದಿಕೆಯಲ್ಲಿ ಅವಕಾಶವಿದ್ದರೂ ಶಾಸಕರೂ ಈ ಬಗ್ಗೆ ಸೊಲ್ಲೆತ್ತದರಿಂದ ಡಿಕೆ ಉತ್ಸಾಹ ಇಮ್ಮಡಿಗೊಂಡಿತ್ತು.

ಆದರೂ, ಪತ್ರಕರ್ತರು ಪಟ್ಟುಬಿಡದೇ ಪದೇಪದೇ ಅದೇ ಪ್ರಶ್ನೆಯನ್ನು ಕೇಳಿದ್ದರಿಂದ ಅನಿವಾರ್ಯವಾಗಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್​, "ಯಾವ ಪುಲಿನೂ ಇಲ್ಲ, ದರಿನೂ ಇಲ್ಲ. ಸರ್ವರಿಗೂ ಸಮಬಾಳು, ಸಮಪಾಲು' ಎಂದರು.

ಡಿ.ಕೆ.ಶಿವಕುಮಾರ್​ ಜತೆ ವೇದಿಕೆ ಹಂಚಿಕೊಂಡ ಸ್ಥಳಿಯ ಶಾಸಕ ಎಸ್​.ಆರ್​.ಶ್ರೀನಿವಾಸ್​ ಅಪ್ಪಿತಪ್ಪಿಯೂ ಲಿಂಕ್​ ಕೆನಾಲ್​ ಯೋಜನೆ ಬಗ್ಗೆ ತುಟಿಬಿಚ್ಚಲಿಲ್ಲ, ಇನ್ನೂ ಹಿರಿಯ ಶಾಸಕ ಟಿ.ಬಿ.ಜಯಚಂದ್ರ ಲಿಂಕ್​ ಕೆನಾಲ್​ ಯೋಜನೆಗೆ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದು ಜಿಲ್ಲೆಯ ಜನರಿಗೆ ಅಚ್ಚರಿಯ ಜತೆಗೆ ಅಘಾತವನ್ನು ತಂದಿತು.

ವೇದಿಕೆಯಲ್ಲಿ ಮಾತನಾಡಿದ ಟಿ.ಬಿ.ಜಯಚಂದ್ರ, ಹೇಮಾವತಿ ನಾಲೆಯಿಂದ ಜಿಲ್ಲೆಯ ಪಾಲಿನ 24 ಟಿಎಂಸಿ ನೀರು ಈವರೆಗೂ ಎಂದೂ ಹರಿದಿಲ್ಲ ಈ ನೀರು ಜಿಲ್ಲೆಗೆ ಹರಿದರೆ ಕುಣಿಗಲ್​, ಮಾಗಡಿ ಮಾತ್ರವಲ್ಲ ಮುಂದಿನ ಭಾಗಕ್ಕೂ ನೀರು ತೆಗೆದುಕೊಂಡು ಹೋಗಬಹುದು ಎಂದು ಡಿ.ಕೆ.ಶಿವಕುಮಾರ್​ ಅವರನ್ನು ಮೆಚ್ಚಿಸುವ ಮಾತುಗಳನ್ನಾಡಿದರು.