ಜಿಲ್ಲೆ

ಪದವಿ, ಸ್ನಾತಕೋತ್ತರ ವಿದ್ಯಾರ್ಥಿವೇನತಕ್ಕೆ ಅರ್ಜಿ ಸಲ್ಲಿಸಲು ಅಡ್ಡಿ!; ಶೈಕ್ಷಣಿಕ ದತ್ತಾಂಶವಿಲ್ಲದೆ ಸಲ್ಲಿಕೆಯಾಗದ ಅರ್ಜಿ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ತುಮಕೂರು ವಿವಿ ವ್ಯಾಪ್ತಿಯಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಸರ್ಕಾರದಿಂದ ವಿದ್ಯಾರ್ಥಿವೇತನಕ್ಕೆ ತಾಂತ್ರಿಕ ತೊಂದರೆ ಎದುರಾಗಿದೆ.

ಈಗಾಗಲೇ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಸರ್ಕಾರದಿಂದ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಸಲ್ಲಿಸಲು ಜ.10 ಕೊನೆಯ ದಿನವಾಗಿದ್ದರೂ ವಿವಿ ದತ್ತಾಂಶದಲ್ಲಿ ಎಸ್‌ಎಸ್‌ಪಿ ಐಡಿ ನಮೋದಿಸದೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ.

ವಿವಿ ವ್ಯಾಪ್ತಿಯ ಎಲ್ಲಾ ಕಾಲೇಜುಗಳಲ್ಲಿ ಪ್ರವೇಶ ಪಡೆದಿರುವ ಸಾವಿರಾರು ವಿದ್ಯಾಥಿಗಳು SSP ನಲ್ಲಿ ಅಗತ್ಯ ದಾಖಲಾತಿಗೊಳೊಂದಿಗೆ ಅರ್ಜಿ ಸಲ್ಲಿಸಬೇಕಿದ್ದು ತುಮಕೂರು ವಿವಿ ವಿದ್ಯಾರ್ಥಿಗಳ ಐಡಿ ಸೃಜಿಸದಿರುವುದು ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿಲ್ಲದಂತಾಗಿದೆ.

ವಿದ್ಯಾರ್ಥಿಗಳು ಪ್ರವೇಶದ ಸಮಯದಲ್ಲಿ ಅಗತ್ಯ ದಾಖಲಾತಿಗಳನ್ನು ಪಡೆದು ವಿದ್ಯಾರ್ಥಿಗಳ ಕೋರ್ಸ್ ನೋಂದಣಿ ಮಾಡಿಕೊಂಡು ಶೈಕ್ಷಣಿಕ ದತ್ತಾಂಶದಲ್ಲಿ ವಿದ್ಯಾರ್ಥಿಗಳ ಎಸ್‌ಎಸ್‌ಪಿ ಐಡಿ ಸೃಜನೆಯಾದರಷ್ಟೇ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಮಾಹಿತಿ ಲಭ್ಯವಾಗಲಿದೆ.

ಪ್ರಸ್ತುತ ತುಮಕೂರು ವಿವಿ ನೋಂದಣಿ ತಡಮಾಡಿರುವ ಕಾರಣಕ್ಕೆ ಸಾವಿರಾರು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಅವಕಾಶದಿಂದಲೇ ವಂಚಿತರಾಗುತ್ತಿದ್ದಾರೆ. ಆದರೆ, ಆಯಾ ಕಾಲೇಜುಗಳಲ್ಲಿಯೇ ಯುಯುಎಂಎಸ್ ತಂತ್ರಾಂಶದಲ್ಲಿ ಮಾಹಿತಿ ಅಪ್‌ಲೋಡ್ ಆಗಿಲ್ಲದಿದ್ದರೂ ವಿವಿ ದತ್ತಾಂಶ ಎಂದು ಎಸ್‌ಎಸ್‌ಪಿ ತಂತ್ರಾಂಶದಲ್ಲಿ ತೋರಿಸಲಾಗುತ್ತಿದೆ ಎಂದು ವಿವಿ ಸ್ಪಷ್ಟನೆ ನೀಡಿದೆ.

ತುಮಕೂರು ವಿವಿ ಪದವಿ, ಸ್ನಾತಕೋತ್ತರ ಕಾಲೇಜು ಸೇರಿದಂತೆ ಜಿಲ್ಲೆಯಲ್ಲೆಡೆಯಿರುವ ಸರ್ಕಾರಿ ಪದವಿ ಕಾಲೇಜುಗಳಲ್ಲಿಯೂ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಎಸ್‌ಎಸ್‌ಪಿ ಹಾಗೂ ಯುಯುಎಂಎಸ್ ತಂತ್ರಾಂಶಗಳ ಮಾಹಿತಿ ಜೋಡಣೆ ಮಾಡಿ ಕೂಡಲೇ ಸಮಸ್ಯೆ ಭಗೆಹರಿಸಬೇಕು ಎಂಬ ಆಗ್ರಹವಿದೆ.

ಯುಯುಎಂಎಸ್ ಹಾಗೂ ಎಸ್‌ಎಸ್‌ಪಿ ತಂತ್ರಾಂಶ ಸಮಸ್ಯೆ:

ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ನೂರೆಂಟು ಅಡ್ಡಿ ಎದುರಾಗುತ್ತಿದೆ, ಸರ್ಕಾರದ ಎಸ್‌ಎಸ್‌ಪಿ ಆಪ್‌ನಲ್ಲಿ ವಿವಿ ದಾಖಲಾತಿ ದತ್ತಾಂಶ ಲಭ್ಯವಿಲ್ಲದ ಕಾರಣದಿಂದ ನಿಮ್ಮ ಅರ್ಜಿ ಸ್ವೀಕರಲು ಸಾಧ್ಯವಾಗುತ್ತಿಲ್ಲ ಎಂದು ಪ್ರತಿಕ್ರಿಯಸಲಾಗುತ್ತಿದೆ.


ಆದರೆ, ವಿವಿ ನಮ್ಮ ತಂತ್ರಾಂಶದಲ್ಲಿ ಯಾವುದೇ ಸಮಸ್ಯೆಯಿಲ್ಲ ಶೇ.90ರಷ್ಟು ವಿದ್ಯಾರ್ಥಿಗಳ ದಾಖಲಾತಿ ಅಂಗೀಕರಿಸಿ ಶೈಕ್ಷಣಿಕ ದತ್ತಾಂಶದಲ್ಲಿ ಅಳವಡಿಸಲಾಗಿದ್ದು ರಾಜ್ಯ ಮಟ್ಟದ ಯುಯುಎಂಎಸ್ ತಂತ್ರಾಂಶ ಹಾಗೂ ಎಸ್‌ಎಸ್‌ಪಿ ತಂತ್ರಾಂಶದ ದಾಖಲೆಗಳು ಜೋಡಣೆಯಾಗದೆ ಸಮಸ್ಯೆಯಾಗಿರಬಹುದು ಎಂದು ತುಮಕೂರು ವಿವಿ ಆಡಳಿತ ಸ್ಪಷ್ಟನೆ ನೀಡಿದೆ.

ಈ ಬಗ್ಗೆ ವಿವಿ ಆಡಳಿತಕ್ಕೆ ವಿದ್ಯಾರ್ಥಿಗಳು ಪದೇಪದೇ ಮನವಿ ಮಾಡಿಕೊಳ್ಳುತ್ತಿದ್ದರೂ ಆರಂಭವದಲ್ಲಿಯೇ ವಿಷಯದ ಗಂಭೀರತೆ ಅರ್ಥ ಮಾಡಿಕೊಳ್ಳದ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಸರಿಯಾಗಿ ಸ್ಪಂದಿಸದ ತಡ ಮಾಡಿದ್ದು ಸಮಸ್ಯೆ ಗಂಭೀರವಾಗಲು ಕಾರಣವಾಗಿದೆ.

ತುಮಕೂರು ವಿವಿ ತಂತ್ರಾಂಶದಲ್ಲಿ ತಾಂತ್ರಿಕ ದೋಷಗಳಿದ್ದರೆ ಕೂಡಲೇ ಭಗೆಹರಿಸಿ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಲು ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದೇನೆ. ಪ್ರಾಥಮಿಕ ಮಾಹಿತಿಯಂತೆ ವಿವಿ ಕಡೆಯಿಂದ ಯಾವುದೇ ಸಮಸ್ಯೆಯಿಲ್ಲ. ಯುಯುಎಂಎಸ್ ತಂತ್ರಾಂಶದ ಸಮಸ್ಯೆಯಿದ್ದರೂ ವಿವಿ ದತ್ತಾಂಶದ ಸಮಸ್ಯೆ ಎಂದು ತೋರಿಸುಸುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ.
ಪ್ರೊ.ಎಂ.ವೆಂಕಟೇಶ್ವರಲು
ಕುಲಪತಿ, ತುಮಕೂರು ವಿವಿ