ತುಮಕೂರು: ತಾಲೂಕಿನಲ್ಲಿ ಸಂಭವಿಸಿದ ಪ್ರತ್ಯೇಕ ಘಟನೆಗಳಲ್ಲಿ ಬುಧವಾರ ಸಂಜೆ ಯಿಂದ ನಾಲ್ವರು ಶಾಲಾ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಶಾಲಾ ಆವರಣದಲ್ಲಿ ಆಟವಾಡುತ್ತಿರುವಾಗಲೇ ವಿದ್ಯಾರ್ಥಿಯೋರ್ವ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಬುಧವಾರ ಸಂಜೆ ತಾಲೂಕಿನ ಸಿರಿವರದಲ್ಲಿ ನಡೆದಿದೆ.
ತಾಲೂಕಿನ ಸಿರಿವರ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಧನು (14) ಶಾಲಾ ಅವಧಿ ಮುಗಿದ ಬಳಿಕ ಸಂಜೆ 4.50ರಲ್ಲಿ ಶಾಲೆಯ ಆವರಣದಲ್ಲಿ ಆಟವಾಡುತ್ತಿದ್ದಾಗ ಕುಸಿದುಬಿದ್ದಿದ್ದು ತಕ್ಷಣವೇ ಸಮೀಪದ ಆರೋಗ್ಯಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಆ್ಯಂಬುಲೆನ್ಸ್ನಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆತರಲಾಯಿತಾದರೂ ಆತ ಬದುಕುಳಿಯಲಿಲ್ಲ.
ಗೋವಿಂದರಾಜಪುರದ ಧನು 9ನೇ ತರಗತಿ ಓದುತ್ತಿದ್ದು ಶಾಲೆ ಬಿಟ್ಟ ಬಳಿಕ ಸಹಪಾಠಿಗಳ ಜತೆ ಆಟವಾಡುತ್ತಿದ್ದಾಗ ಕುಸಿದುಬಿದ್ದಿದ್ದಾನೆ. ಗುರುವಾರ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಮೃತ ಬಾಲಕನ ದೇಹವನ್ನು ಹಸ್ತಾಂತರಿಸಿದ್ದು ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಿಸಲಾಯಿತು. ಹೃದಯಾಘಾತ ಸಂಭವಿಸಿರಬಹುದು ಎನ್ನಲಾಗಿದೆ. 13 ವರ್ಷದ ಹಿಂದೆ ಧನು ತಂದೆ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದರು.
ಒಬ್ಬನೇ ಮಗ: ಮೃತ ಧನು ತಾಯಿ ಸಿದ್ದಗಂಗಮ್ಮ-ಲೇಟ್ ಹುಚ್ಚೇಗೌಡಗೆ ಒಬ್ಬನೇ ಮಗ. ಎದೆಮಟ್ಟಕ್ಕೆ ಬೆಳೆದುನಿಂತಿದ್ದ ಮಗನನ್ನು ಕಳೆದುಕೊಂಡ ತಾಯಿ ಸಿದ್ದಗಂಗಮ್ಮ ಆಕ್ರಂದನ ಮುಗಿಲುಮುಟ್ಟಿತ್ತು. ಬಿಇಒ, ಡಿಡಿಪಿಐ ಸೇರಿದಂತೆ ಶಾಲೆಯ ಶಿಕ್ಷಕ ವೃಂದ ಆಸ್ಪತ್ರೆಗೆ ತೆರಳಿತ್ತು. ಹೆಬ್ಬೂರು ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಹಾವು ಕಚ್ಚಿಸಾವು: ಇನ್ನೂ ಹಿರೇಹಳ್ಳಿ ಕ್ಲಸ್ಟರ್ ವ್ಯಾಪ್ತಿಯ ಡಿ.ಟಿ.ಪಾಳ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ತೋರಣಲಕ್ಷಿö್ಮÃ (12) ಬುಧವಾರ ಸಂಜೆ ಮನೆ ಬಳಿ ಆಟವಾಡುತ್ತಿದ್ದಾಗ ಹಾವು ಕಚ್ಚಿ ಸಾವನ್ನಪ್ಪಿದ್ದಾಳೆ.
ಸಾತಘಟ್ಟದಲ್ಲಿ ಮನೆ ಬಳಿಯ ಕಟ್ಟೆಗೆ ಬಿದ್ದು ಸಹೋದರ ಸಂಬAಧಿಗಳಿಬ್ಬರು ಈಜಾಡಲು ತೆರಳಿದ್ದಾಗ ಸಾವನ್ನಪ್ಪಿದ್ದಾರೆ. ಸಾತಘಟ್ಟದ ಜಬೀವುಲ್ಲಾಖಾನ್ ಎಂಬುವರ ಪುತ್ರ ಸರ್ಕಾರಿ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿ ಜುನೇದ್ ಖಾನ್ (9) ಹಾಗೂ ಸಾದಿಕ್ ಪಾಷ ಎಂಬುವರ ಪುತ್ರ ಮಹಮ್ಮದ್ ಶಿÁನ್ (12) ಬುಧವಾರ ಸಂಜೆ 4 ಗಂಟೆ ವೇಳೆಗೆ ಈಜಾಡಲು ತೆರಳಿದ್ದಾಗ ಈ ದುರ್ಘಟನೆ ನಡೆದಿದೆ.
ಮಹಮ್ಮದ್ ಶಿÁನ್ ಮಧುಗಿರಿ ತಾಲೂಕು ಶ್ರಾವಂಡನಹಳ್ಳಿಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಓದುತ್ತಿದ್ದ ಎನ್ನಲಾಗಿದೆ. ರಾತ್ರಿ 9 ಗಂಟೆ ಸುಮಾರಿಗೆ ಮೃತದೇಹಗಳನ್ನು ಹೊರತೆಗೆದಿದ್ದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕ್ಯಾತಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.