ಜಿಲ್ಲೆ

ಅಧಿಕಾರಿಗಳು ಸಭೆಯಲ್ಲಿ ಒಪ್ಪಿಸಿದ್ದ ಗಿಳಿಪಾಠ ಹಾಸ್ಟೆಲ್ ಗಳಲ್ಲಿ‌ ಠುಸ್! : ಮಕ್ಕಳ ರಕ್ಷಣಾ ಆಯೋಗಕ್ಕೆ ಶಾಕ್

ತುಮಕೂರು: ಶಿರಾ ನಗರದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಹಾಗೂ ಚಿಕ್ಕನಹಳ್ಳಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಅನಿರೀಕ್ಷಿತ ಭೇಟಿನೀಡಿ ಪರಿಶೀಲನೆ ನಡೆಸಿದರು.

ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಆಯೋಗ ನೀಡಿದ್ದ ಸೂಚನೆಗಳ ಪಾಲನೆ ಬಗ್ಗೆ ಪರಿಶೀಲಿಸಲು ಖುದ್ದು ಆಯೋಗದ ಸದಸ್ಯ ತಿಪ್ಪೇಸ್ವಾಮಿ ಅವರೇ ಶನಿವಾರ ರಾತ್ರಿ ಭೇಟಿ ನೀಡಿ ಅಚ್ಚರಿಗೊಳಗಾದರು.

ವಸತಿ ನಿಲಯಗಳಲ್ಲಿ ಸಹಾಯವಾಣಿ ಸಂಖ್ಯೆ ಶಾಶ್ವತ ಫಲಕದಲ್ಲಿ ಪ್ರದರ್ಶಿಸುವುದು, ಮಕ್ಕಳ ರಕ್ಷಣಾ ನೀತಿ ರೂಪಿಸುವುದು, ಮಕ್ಕಳ ಸುರಕ್ಷತಾ ಸಮಿತಿ ರಚಿಸಿ ನಿಗದಿತವಾಗಿ ಸಭೆ ನಡೆಸಿ ದಾಖಲೆ ನಿರ್ವಹಿಸುವುದು ಸೇರಿದಂತೆ ಹಲವು ಸಲಹೆಗಳು ಅನುಷ್ಟಾನವಾಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಶಿರಾ ನ್ಗರದ ನಗರದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಬೌತಿಕ ವಾತಾವರಣ ಹಾಗೂ ಸ್ವಚ್ಛತೆ ಉತ್ತವಾಗಿದೆ. ಆದರೆ, ವಸತಿ ನಿಲಯದಲ್ಲಿ 108 ಮಕ್ಕಳು ದಾಖಲಾತಿ ಪಡೆದಿದ್ದರೂ ಸದಸ್ಯರ ಭೇಟಿಯ ಸಮಯದಲ್ಲಿ ಕೇವಲ 46 ಮಕ್ಕಳು ಹಾಜರಿದ್ದರು.

ಸಾಕಷ್ಟು ಮಕ್ಕಳು ವಸತಿ ನಿಲಯದಲ್ಲಿ ಇಲ್ಲದಿದ್ದರೂ ಸಂಪೂರ್ಣ ಹಾಜರಾತಿ ಹಾಕುತ್ತಿರುವುದನ್ನು ಮಕ್ಕಳೇ ಹೇಳಿದರು. ಕೆಲವು ಮಕ್ಕಳು ನಿಲಯದಲ್ಲಿ ಊಟ ಮುಗಿಸಿ ಮನೆಗೆ ತೆರಳುವುದು, ಕೆಲವು ಮಕ್ಕಳು ಊರಿಗೆ ಹೋದರೆ ವಾರಗಟ್ಟಲೆ ವಾಪಾಸ್ ಬಾರದಿಲ್ಲವೆಂದು ಮಾಹಿತಿನೀಡಿದರು. ಆದರೆ, ನಿಲಯ ಪಾಲಕರು ಆ ಎಲ್ಲಾ ಮಕ್ಕಳಿಗೂ ಹಾಜರಾತಿ ನೀಡಿರುವುದು ಹಲವು ಅನುಮಾನಕ್ಕೆ ಕಾರಣವಾಯಿತು.

ಚಿಕ್ಕನಹಳ್ಳಿಯ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿನೀಡಿದಾಗಲೂ ಇದೆ ಸಮಸ್ಯೆ ಗಮನಿಸಲಾಯಿತು. ವಸತಿ ನಿಲಯದಲ್ಲಿ 80 ಮಕ್ಕಳು ದಾಖಲಾತಿ ಪಡೆದಿದ್ದರೂ ಸದಸ್ಯರ ಭೇಟಿಯ ಸಮಯದಲ್ಲಿ ಕೇವಲ 40 ಮಕ್ಕಳು ಹಾಜರಿದ್ದರು.

ನಿಲಯದ ಮೇಲ್ವಿಚಾರಕ ಸಣ್ಣದುಗ್ಗಪ್ಪ ಕೂಡ ಹಾಜರಿರಲಿಲ್ಲ. ಅಡುಗೆ ಸಿಬ್ಬಂದಿಯೇ ಮಕ್ಕಳ ಮೇಲ್ವಿಚಾರಣೆ ಮಾಡುತ್ತಿದ್ದರು. ವಸತಿ ನಿಲಯದಲ್ಲಿ ಮಕ್ಕಳಿಗೆ ಸಮವಸ್ತ್ರ, ಬ್ಯಾಗ್ ಕೂಡ ವಿತರಣೆಯಾಗಿಲ್ಲದಿರುವ ಬಗ್ಗೆ ತರಾಟೆಗೆ ತೆಗೆದುಕೊಂಡರು.