ಜಿಲ್ಲೆ

ರಾಯದುರ್ಗ-ತುಮಕೂರು ರೈಲ್ವೆ ಯೋಜನೆ 2026ಕ್ಕೆ ಲೋಕಾರ್ಪಣೆ

ತುಮಕೂರು: ರಾಯದುರ್ಗ - ತುಮಕೂರು ರೈಲ್ವೆ ಯೋಜನೆ 2026ಕ್ಕೆ ಪ್ರಧಾನಿ ನರೇಂದ್ರಮೋದಿ ಅವರಿಂದ ಉದ್ಘಾಟನೆಯಾಗಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯಸಚಿವ ವಿ.ಸೋಮಣ್ಣ ಭರವಸೆ ನೀಡಿದರು.

ತುಮಕೂರಿನಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಯೋಜನೆಯ ಬಗ್ಗೆ ಕಡತಗಳ ಪರಿಶೀಲನೆ ನಡೆಸಿದ್ದೇನೆ, ಜಿಲ್ಲಾಧಿಕಾರಿ ಹಾಗೂ ರೈಲ್ವೆ ಅಧಿಕಾರಿಗಳನ್ನು ಕರೆಸಿ ಮಾತನಾಡಿ ತ್ವರಿತವಾಗಿ ಕಾಮಗಾರಿ ಮುಗಿಸಲು ಸೂಚನೆ ನೀಡಿದ್ದೇನೆ ಎಂದರು.

ಯೋಜನೆ ಸಾಕಾರಕ್ಕೆ ರಾಜ್ಯ ಸರ್ಕಾರದ ನೆರವು ಬೇಕಿದ್ದು ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಹಣ ಬಿಡುಗಡೆ ಮಾಡಲು ಹೇಳಿದ್ದೇವೆ. ಆದರೆ ಅವರು ಹಣ ನೀಡಿಲ್ಲ ಎಂದರೆ ರಾಜ್ಯ ಸರ್ಕಾರ ಜವಾಬ್ದಾರಿ ಎಂದರು.

11 ಕಿಮೀ ಭೂಸ್ವಾಧೀನ ಮಾತ್ರ ಬಾಕಿಯಿದೆ, ಕೇಂದ್ರ ಸರ್ಕಾರದ ಯೋಜನೆ ಯಶಸ್ಸು ಆಗಬೇಕಾದ್ರೆ ರಾಜ್ಯ ಸರ್ಕಾರ ಬೆಂಬಲ ಕೂಡ ಅಗತ್ಯವಿದೆ ಎಂದರು. 2026 ಕ್ಕೆ ರಾಯದುರ್ಗ ತುಮಕೂರು ರೈಲ್ವೆ ಯೋಜನೆ ಪ್ರಧಾನಿ ನರೇಂದ್ರ ಮೋದಿ ಅವರ ಕೈಯಲ್ಲಿ‌ ಲೋಕಾರ್ಪಣೆಯಾಗಲಿದೆ ಎಂದರು.

ಜತೆಗೆ ಚಿತ್ರದುರ್ಗ- ತುಮಕೂರು ರೈಲ್ವೆ ಯೋಜನೆ ಕೂಡ ಆಗಬೇಕಿದೆ. ತುಮಕೂರು ‌ರೈಲ್ವೆ ನಿಲ್ದಾಣ ಕೂಡ ಉನ್ನತಿಕರಣಗೊಳಿಸಲಾಗುವುದು,ಹೇಮಾವತಿ ಲಿಂಕ್ ಕೆನಾಲ್‌ ವಿಚಾರವಾಗಿಯೂ ಸಚಿವರಾದ ಪರಮೇಶ್ವರ್‌, ರಾಜಣ್ಣ, ಡಿಸಿ ಜತೆ ಚರ್ಚೆ ನಡೆಸಿದ್ದೇನೆ ಎಂದರು.

ರಾಜ್ಯ ಹಾಗೂ ಕೇಂದ್ರ ಎರಡು ನಾಣ್ಯದ ಮುಖಗಳಾಗಿ‌ ಕೆಲಸ ಮಾಡಬೇಕಿದೆ. ಕೇಂದ್ರ ಸರ್ಕಾರ ನಡೆಯುವ ರೀತಿಯಲ್ಲಿ ರಾಜ್ಯ ನಡೆದರೆ ರಾಮರಾಜ್ಯ ಆಗಲಿದೆ ಎಂದರು.