ತುಮಕೂರು: ಸಿದ್ಧಗಂಗಾ ಮಠದ ಹತ್ತು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಬೆಂಗಳೂರಿನ ಪೈ ಇಂಟರ್ ನ್ಯಾಷನಲ್ ಸಂಸ್ಥೆ ವತಿಯಿಂದ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
ಶ್ರೀಮಠದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೈ ಇಂಟರ್ ನ್ಯಾಷನಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜಕುಮಾರ್ ಪೈ, ಮೀನಾ ರಾಜಕುಮಾರ್ ಪೈ ಹಾಗೂ ಅವರ ಪರಿಹಾರದವರು ನೋಟ್ ಪುಸ್ತಕ ವಿತರಿಸಿದರು.
ಈ ವೇಳೆ ಮಾತನಾಡಿದ ರಾಜಕುಮಾರ್ ಪೈ, ದೃಢ ಸಂಕಲ್ಪದಿಂದ ಛಲ ಬಿಡದೆ ಏನನ್ನಾದರೂ ಸಾಧಿಸುತ್ತೇವೆ ಎಂದಾದರೆ ಗುರಿ ತಲುಪಬಹುದು ಎಂದರು. ಶಿವಕುಮಾರ ಶ್ರೀಗಳು ಲಕ್ಷಾಂತರ ಬಡಮಕ್ಕಳಿಗೆ ಅನ್ನ, ಆಶ್ರಯ, ಅಕ್ಷರ ದಾಸೋಹ ಕಲ್ಪಿಸಿದ್ದು, ನಮ್ಮ ಸೇವೆ ಅಳಿಲು ಸೇವೆ ಎನಿಸಿದೆ. ಜಾತಿ, ಧರ್ಮ ಭೇದಭಾವವಿಲ್ಲದೆ ಮಠದಲ್ಲಿ ಮಕ್ಕಳು ಕಲಿಯುತ್ತಿದ್ದು, 33 ಮಕ್ಕಳನ್ನು ಶಿಕ್ಷಣ ಕೊಡಿಸಲು ದತ್ತು ತೆಗೆದುಕೊಂಡಿದ್ದೇವೆ. ಸಂಸ್ಥೆಯ ಲಾಭಗಳಿಕೆಯಲ್ಲಿ ಕೆಲಸಗಾರರಿಗೆ ಶೇ.10 ಷೇರು ನೀಡುತ್ತಿದ್ದೇವೆ. ಹಿರಿಯರ ವೈದ್ಯಕಿಯ ವೆಚ್ಚ ನೋಡಿಕೊಳ್ಳುತ್ತಿದ್ದೇವೆ. ಇಂತಹ ಕೆಲಸಗಳು ತೃಪ್ತಿ ತಂದಿವೆ ಎಂದು ಹೇಳಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಸತತ 16 ವರ್ಷಗಳಿಂದ ಮಠದ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ನೀಡುತ್ತಾ ಬಂದಿರುವ ಪೈ ಇಂಟರ್ನ್ಯಾಷನಲ್ ಕಂಪನಿಯ ಪರಿವಾರ ಅಂದರೆ ಅದು ಅವರ ಕುಟುಂಬ ಮಾತ್ರವಲ್ಲ, ಇಡೀ ಸಂಸ್ಥೆಯ ಸಿಬ್ಬಂದಿಯನ್ನು ಕುಟುಂಬದವರಂತೆ ಕಾಣುತ್ತಾರೆ. ಪೈ ಪರಿವಾರ ಇಂತಹ ಕಾರ್ಯದಲ್ಲಿ ತೊಡಗಿಕೊಂಡಿದ್ದು ಅವರ ಸೇವೆ ಅನನ್ಯ ಎಂದು ಬಣ್ಣಿಸಿದರು.
ಸಿದ್ಧಗಂಗಾ ಮಠದ ವಿವಿಧ ಶಾಲೆಯ 1 ರಿಂದ 10ನೇ ತರಗತಿ ಮಕ್ಕಳಿಗೆ 1,10,000 ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
ಪೈ ಇಂಟರ್ ನ್ಯಾಷನಲ್ ಸಂಸ್ಥೆಯ ಗುರುದಾಸ್ ಪೈ, ಉತ್ತಮಕುಮಾರ್ ಪೈ, ಅಜಿತ್ಕುಮಾರ್ ಪೈ, ಪುಷ್ಪ, ಜಯಶ್ರೀ, ದಾಮೋದರ್ ಪೈ ಕುಟುಂಬ, ರಾಜೀವ್ ಪೈ ಕುಟುಂಬ, ಆದಿತ್ಯ ಪೈ ಕುಟುಂಬ ಹಾಗೂ 94 ಮಂದಿ ಪೈ ಸಿಬ್ಬಂದಿ ಹಾಜರಿದ್ದರು.
ನಮ್ಮ ತಾಯಿ ಬೇರೆ ಸಂಸ್ಥೆಗಳ ಬಾಗಿಲಿಗೆ ಹೋಗಿ ನನ್ನ ಅಕ್ಕನಿಗೆ ಕೆಲಸ ಕೊಡಿ ಎಂದು ಕೇಳಿದ್ದ ದೃಶ್ಯ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಇವತ್ತು ನಮ್ಮ ಸಂಸ್ಥೆಯಲ್ಲಿ ಸುಮಾರು 5 ಸಾವಿರ ಮಂದಿ ದುಡಿಯುತ್ತಿದ್ದಾರೆ. ಎಲ್ಲರನ್ನೂ ಪರಿವಾರದವರಂತೆ ಕಾಣುತ್ತಿದ್ದೇವೆ. ದೃಢ ಸಂಕಲ್ಪ, ಛಲ ಹಾಗೂ ಒಳ್ಳೆಯ ದಾರಿಯಲ್ಲಿ ಸಾಗಿದರೆ ಯಶಸ್ಸು ಸಿಕ್ಕೇ ಸಿಗುತ್ತದೆ ಎಂದು ರಾಜಕುಮಾರ್ ಪೈ ಹೇಳಿದರು.
ಪ್ರತಿ ವರ್ಷ ಸಸಿಗಳನ್ನು ನೆಡುತ್ತಿದ್ದೇವೆ. ಕೇವಲ ಸಸಿ ನೆಡುವುದು ಮಾತ್ರವಲ್ಲದೆ ಅವು ದೊಡ್ಡ ಮರಗಳಾಗುವಂತೆ ಪೋಷಿಸುತ್ತಿದ್ದೇವೆ. 1 ಕೋಟಿ ಸಸಿ ನೆಡುವ ಗುರಿ ಹೊಂದಲಾಗಿದೆ.
ರಾಜಕುಮಾರ್ಪೈ ಎಂಡಿ, ಪೈ ಇಂಟರ್ ನ್ಯಾಷನಲ್ ಸಂಸ್ಥೆ