ಜಿಲ್ಲೆ

ಒಸಿಟಿ ತಂತ್ರಜ್ಞಾನ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು; ಡಾ.ಪ್ರಭಾಕರ್ ಕೋರೆಗಲ್

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ನಗರದ ಸಿದ್ಧಗಂಗಾ ಆಸ್ಪತ್ರೆ ಹೃದ್ರೋಗ ವಿಭಾಗದಲ್ಲಿ ಒಸಿಟಿ ತಂತ್ರಜ್ಞಾನ ಬಳಕೆ ಮಾಡುತ್ತಿರುವುದು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಎಂದು ಹಿರಿಯ ಹೃದ್ರೋಗ ತಜ್ಞ ಡಾ.ಪ್ರಭಾಕರ್ ಕೋರೆಗಲ್ ಅಭಿಪ್ರಾಯಪಟ್ಟರು.

ನಗರದ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಭಾನುವಾರ ಹೃದ್ರೋಗ ಸಮಸ್ಯೆಗಳಿಗೆ ಒಸಿಟಿ ಟೆಕ್ನಾಲಜಿಯ ಪರಿಚಯ ಹಾಗೂ ಶಸ್ತಚಿಕಿತ್ಸೆ ನೇರಪ್ರಸಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನೂತನ ತಂತ್ರಜ್ಞಾನ ಹೃದ್ರೋಗಳಿಗೆ ಹೊಸ ಭರವಸೆಯಾಗಿದ್ದು, ತ್ವರಿತ, ನಿಖರ, ಪರಿಣಾಮಕಾರಿ ಚಿಕಿತ್ಸೆಗೆ ಬಳಕೆಯಾಗುತ್ತಿದೆ. ಇದೀಗ ಸಿದ್ಧಗಂಗಾ ಆಸ್ಪತ್ರೆ ಈ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಹೃದ್ರೋಗಳಿಗೆ ಸಂಜೀವಿನಿಯಾಗಿದೆ ಎಂದರು.

ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ಮಾತನಾಡಿ, ರಾಜ್ಯದ ಕೆಲವೇ ಕೆಲವು ಆಸ್ಪತ್ರೆಗಳಲ್ಲಿ ಕಂಡು ಬರುವ ಒಸಿಟಿ ತಂತ್ರಜ್ಞಾನ ಬಳಸಲಾಗುತ್ತಿದೆ. ದುಬಾರಿಯಾಗಿರುವ ಶಸ್ತ್ರಚಿಕಿತ್ಸೆಯನ್ನು ಸಾರ್ವಜನಿಕರ ಕೈಗೆಟುಕುವ ದರದಲ್ಲಿ ನೀಡಿ ಈ ಭಾಗದ ಹೃದ್ರೋಗಿಗಳಿಗೆ ತುರ್ತು ಸೇವೆ ಒದಗಿಸುವುದೇ ನಮ್ಮ ಧ್ಯೇಯ ಎಂದರು.

ಹೃದ್ರೋಗ ತಜ್ಞ ಡಾ.ಎಚ್.ಎಂ.ಭಾನುಪ್ರಕಾಶ್ ನೇತೃತ್ವದಲ್ಲಿ ಡಾ.ಶರತ್, ಡಾ.ಸುರೇಶ್, ಡಾ.ನಿಲೇಶ್ ಒಳಗೊಂಡ ವೈದ್ಯರ ತಂಡ, ಹೃದಯಾಘಾತಕ್ಕೆ ಒಳಗಾಗಿ ತುರ್ತುಚಿಕಿತ್ಸೆ ಅವಶ್ಯಕತೆಯಿದ್ದ 65 ವರ್ಷದ ಪುರುಷ ಹಾಗೂ 75 ವರ್ಷದ ಮಹಿಳಾ ಹೃದ್ರೋಗಿಗಳಿಗೆ ಒಸಿಟಿ ತಂತ್ರಜ್ಞಾನ ಬಳಸಿಕೊಂಡು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದರು.
ಜಿಲ್ಲೆಯ 100ಕ್ಕೂ ಹೆಚ್ಚು ವೈದ್ಯರು ಶಸ್ತ್ರಚಿಕಿತ್ಸೆಯ ನೇರಪ್ರಸಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚರ್ಚೆ ನಡೆಸಿದರು.