ತುಮಕೂರು: ಜಿಲ್ಲೆಯೆಲ್ಲೆಡೆ ರಭಸವಾಗಿ ನಿರಂತರವಾಗಿ ಮಳೆ ಮುಂದುವರಿದಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಮಂಗಳವಾರ ದಿನಪೂರ್ತಿ ಭರ್ಜರಿಯಾಗಿ ಮಳೆ ಧಾರಾಕಾರವಾಗಿ ಸುರಿದ ಹಿನ್ನೆಲೆಯಲ್ಲಿ ಜನಸಾಮಾನ್ಯರು ದಿನನಿತ್ಯದ ಕೆಲಸ ಕಾರ್ಯಗಳಿಗೆ ಪರದಾಡಿದರು. ಪದವಿ ವಿದ್ಯಾರ್ಥಿಗಳು ಪ್ರಯಾಸಪಟ್ಟರು ಕಾಲೇಜುಗಳಿಗೆ ತಲುಪಿದರು.
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮುಂದಿನ 5 ದಿನ ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆ ಬೀಳುವ ಸಾಧ್ಯತೆಯಿದೆ. ಅ.17ರಂದು ಅತೀ ಹೆಚ್ಚು ಮಳೆ ಸುರಿಯುವ ಸಾಧ್ಯತೆಯಿದ್ದು ಜನರೆಲ್ಲರೂ ಎಚ್ಚರಿಕೆ ವಹಿಸಬೇಕಿದೆ. ಅ.16ರಂದು ಚಿಕ್ಕನಾಯಕನಹಳ್ಳಿಯಲ್ಲಿ 18.5ಮಿಮೀ, ಗುಬ್ಬಿ 14.5, ಕೊರಟಗೆರೆ 25.3, ಕುಣಿಗಲ್ 24.9, ಮಧುಗಿರಿ 25.9, ಪಾವಗಡ 10.4, ಶಿರಾ 23.8, ತಿಪಟೂರು 14.2, ತುಮಕೂರು 20.8 ಹಾಗೂ ತುರುವೇಕೆರೆ ತಾಲೂಕಿನಲ್ಲಿ 15.9ಮಿಮೀ ಮಳೆಯಾಗುವ ಸಾಧ್ಯತೆಯಿದೆ.
ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಭೂಮಿ ತಂಪಾಗಿದ್ದು, ಕೊಂಚ ಮಳೆಯಾದರೂ ಸಹ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಹೊಲ, ತೋಟಗಳಲ್ಲಿ ನೀರು ನಿಂತು ಜಲಾವೃತಗೊಳ್ಳುತ್ತಿವೆ ಆದರೆ, ಜಲಾಶಯಗಳಿಗೆ ನೀರು ಬಂದಿಲ್ಲ. ನಿರಂತರ ಮಳೆಯಾಗುವ ಮುನ್ಸೂಚನೆಯಿದ್ದು ಹವಾಮಾನ ಇಲಾಖೆ ನೀಡಿದೆ. ನಿರಂತರ ಮಳೆಯಾದರೆ ರಾಗಿ ಬೆಳೆ ಹಾಗೂ ತೋಟಗಳು ನೀರು ತುಂಬಿಕೊಂಡು ಬೆಳೆ ಹಾಳಾಗುವ ಆತಂಕ ರೈತರನ್ನು ಕಾಡುತ್ತಿದೆ.
ನಿರಂತರ ಮಳೆಯಿಂದಾಗಿ ಕೆಲವರು ಕೆಲಸಗಳಿಗೆ ಹೋಗಲಾಗದೆ ರಜೆ ಹಾಕಿ ಮನೆಯಲ್ಲಿದ್ದರೆ, ಇನ್ನು ಕೆಲವರು ದ್ವಿಚಕ್ರ ವಾಹನಗಳನ್ನು ಬಿಟ್ಟು ಆಟೋ ರಿಕ್ಷಾಗಳನ್ನು ಆಶ್ರಯಿಸಿ ಕೆಲಸಗಳಿಗೆ ತೆರಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ರೈತರ ಹರ್ಷಗೊಂದಿದ್ದು ಕೆರೆಗಳು ತುಂಬಲಿ ಎಂಬ ಪ್ರಾರ್ಥನೆಯಲ್ಲಿದ್ದಾರೆ.