ತುಮಕೂರು: ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಅತಿ ಹೆಚ್ಚು ಮಳೆಯಿಂದ ಹೊಲದಲ್ಲಿ ಉದ್ದವಾಗಿ ಬೆಳೆದು ನಿಂತಿರುವ ರಾಗಿ, ಸಾಮೆ ಬೆಳೆ ನೆಲಕ್ಕುರುಳಲಾರಂಭಿಸಿದೆ. ಮಣ್ಣು ಬಿದ್ದ ರಾಗಿ ತೆನೆ ಮೊಳಕೆಯೊಡೆದು ಹಾಳಾಗಲಿದ್ದು ಬೆಳೆ ಉಳಿಸಿಕೊಳ್ಳುವುದು ರೈತರಿಗೆ ಸವಾಲೆನ್ನಿಸಿದೆ.
ಜಿಲ್ಲೆಯಲ್ಲಿ 2 ಲಕ್ಷ ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿರುವ ರಾಗಿ ಇತ್ತೀಚಿನ ಮಳೆಗೆ ನಳನಳಿಸುತ್ತಿದ್ದು ಮಳೆ ಮುಂದುವರಿದರೆ ಆಳುದ್ದ ಬೆಳೆದ ನಿಂತ ಬೆಳೆಗೆ ಅಪಾಯ ಎದುರಾಗಿದೆ. ಬೆಳೆಹಾನಿಯಾದ ಕ್ಷೇತ್ರಗಳಿಗೆ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅ.29ರಂದು ಭೇಟಿ ನೀಡಿ ಜಂಟಿ ಸಮೀಕ್ಷೆ ಕೈಗೊಳ್ಳುವ ಶಾಸ್ತ್ರ ಪೂರೈಸಿದ್ದಾರೆ.
ಜಿಲ್ಲೆಯಲ್ಲಿ ವಾಡಿಕೆಯಂತೆ ಅಕ್ಟೋಬರ್ ತಿಂಗಳಲ್ಲಿ 115.2 ಮಿಮೀ. ಮಳೆ ಬೀಳುತ್ತದೆ, ಇದೇ ನಂಬಿಕೆಯಲ್ಲಿ ಜನರು ನವೆಂಬರ್ ಅಂತ್ಯದಲ್ಲಿ ರಾಗಿ ಕೂಯ್ಲಿಗೆ ಬರುವಂತೆ ನಾಟಿ ಮಾಡಿಕೊಂಡಿದ್ದು ಈಗ ಹಣ್ಣುತೆನೆಯೊಂದಿಗೆ ಬೆಳೆದು ನಿಂತಿರುವ ರಾಗಿಗೆ ನಿರಂತರ ಮಳೆ ಕಂಟಕವಾಗಿದೆ. ಪ್ರಸ್ತುತ ತಿಂಗಳಲ್ಲಿ ಇಲ್ಲಿಯವರೆಗೂ 289.30 ಮಿಮೀ ಮಳೆಯಾಗಿದೆ.
ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆಗಳಲ್ಲಿ ಇಲ್ಲಿಯವರೆಗೆ 108.72 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ರಾಗಿ, ನೆಲಗಡಲೆ, ಮುಸುಕಿನ ಜೋಳ, ಹತ್ತಿ ಮತ್ತು ಇತರೆ ಕೃಷಿ ಬೆಳೆಗಳು ಹಾಗೂ ಹಿಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆಗಳಲ್ಲಿ ಇಲ್ಲಿಯವರೆಗೆ 93.68 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳು ಹಾನಿಯಾಗಿದೆ.
ಬೆಳೆ ಹಾನಿಯಾದ ರೈತ ಫಲಾನುಭವಿಗಳ ವಿವರಗಳನ್ನು ಸಂಬಂಧಪಟ್ಟ ಗ್ರಾಮ ಪಂಚಾಯತಿ, ನಾಡಕಚೇರಿ, ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ತೋಟಗಾರಿಕಾ ನಿರ್ದೇಶಕರ ಕಚೇರಿ ಹಾಗೂ ತಾಲೂಕು ಕಚೇರಿಗಳಲ್ಲಿ ಈಗಾಗಲೇ ಪ್ರಕಟಿಸಲಾಗಿದೆ. ಪಟ್ಟಿಯಲ್ಲಿ ಹೆಸರಿನಲ್ಲದ ರೈತರು ಕೂಡಲೇ ಸಂಬಂಧಪಟ್ಟ ಅಧಿಕಾರಿಯನ್ನು ಸಂಪರ್ಕಿಸಿ ಬೆಳೆಹಾನಿ ವಿವರ ದಾಖಲಿಸಬೇಕಿದೆ.
ಬೆಳೆ ಹಾನಿ ಬಗ್ಗೆ ರೈತರಲ್ಲಿ ಯಾವುದೇ ದೂರುಗಳಿದ್ದಲ್ಲಿ ಕೃಷಿ ಇಲಾಖೆ ಸಹಾಯವಾಣಿ : 8884006306, 8884006308, 0816-2278474, ತೋಟಗಾರಿಕೆ ನಿರ್ದೇಶಕರು, ತುಮಕೂರು 9686503500, ಗುಬ್ಬಿ 9535781963, ಕುಣಿಗಲ್ 9980073909, ತುರುವೇಕೆರೆ9448416334, ಚಿಕ್ಕನಾಯಕನಹಳ್ಳಿ 9686056705, ತಿಪಟೂರು- 9845014293, ಶಿರಾ 9844042356, ಕೊರಟಗೆರೆ 9448001644, ಮಧುಗಿರಿ 9611789551, ಪಾವಗಡ 9448448970 ಸಂಪರ್ಕಿಸಿ.