ತುಮಕೂರು: ಈಗಾಗಲೇ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಖರೀದಿ ಆರಂಭಿಸದೇ ರೈತರ ಆಕ್ರೋಶಕ್ಕೆ ಕಾರಣವಾಗಿದ್ದ ಕನಿಷ್ಟ ಬೆಂಬಲಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ರಾಗಿ ಖರೀದಿಸಲು ಜಿಲ್ಲಾಡಳಿತ ತಡವಾಗಿಯೇದರೂ ಮನಸ್ಸು ಮಾಡಿದೆ.
ಮೂರು ತಿಂಗಳ ಹಿಂದೆ ಜನವರಿ ಮೊದಲ ವಾರದಲ್ಲಿಯೇ ಆರಂಭಿಸಬೇಕಿದ್ದ ಖರೀದಿ ಕೇಂದ್ರಗಳನ್ನು ಗೋಳಿ ಚೀಲಗಳ ಕೊರತೆಯ ನೆಪ ಹೇಳಿಕೊಂಡು ಮಾರ್ಚ್ ಮೊದಲ ವಾರದಲ್ಲಿ ಆರಂಭಿಸಲಾಗುತ್ತಿದೆ. ಸಾಲ ಮಾಡಿಕೊಂಡು ಬೆಳೆ ಬೆಳೆದಿದ್ದ ರೈತರಿಗೆ ಸಕಾಲದಲ್ಲಿ ರಾಗಿ ಮಾರಾಟಕ್ಕೆ ಅವಕಾಶಸಿಗದೆ ಅಗತ್ಯವಿದ್ದಾಗ ಹಣ ಸಿಗದಂತಾಯಿತು.
ಈಗಾಗಲೇ ಜಿಲ್ಲೆಯಲ್ಲಿ 11 ರಾಗಿ ಖರೀದಿ ಕೇಂದ ತೆರೆಯಲಾಗಿದ್ದು, ಖರೀದಿ ಕೇಂದ್ರದಲ್ಲಿ ಮಾ.3 ರಿಂದ ರಾಗಿಯನ್ನು ರೈತರಿಂದ ಖರೀದಿಸುವ ಪ್ರಕ್ರಿಯೆ ಆರಂಭವಾಗಲಿದೆ. ಎಲ್ಲಾ ಕೇಂದ್ರದಲ್ಲಿಯೂ ರೈತರು ಯಾರಿಗೂ ಹಣ ನೀಡದೆ ಬೆಳೆದ ರಾಗಿ ಮಾರಾಟ ಮಾಡಲು ಅವಕಾಶ ನೀಡಲಾಗಿದ್ದು ದೂರುಗಳಿದ್ದರೆ ಜಿಲ್ಲಾಧಿಕಾರಿ ಮೊ.8277310951 ಸಂಪರ್ಕಿಸಬಹುದು.
ಜಿಲ್ಲೆಯ ಕುಣಿಗಲ್, ತಿಪಟೂರು, ತುರುವೇಕೆರೆ, ಹುಳಿಯಾರು, ಚಿ.ನಾ.ಹಳ್ಳಿ, ಗುಬ್ಬಿ, ಮಧುಗಿರಿ, ತುಮಕೂರು, ಶಿರಾ, ಕೊರಟಗೆರೆ ಹೊಸದಾಗಿ ತೆರೆಯಲಾಗಿದೆ. ಕುಣಿಗಲ್ನಲ್ಲಿ 2 ಸೇರಿದಂತೆ 11 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಖರೀದಿ ಕೇಂದ್ರದಲ್ಲಿ ಈಗಾಗಲೇ ರೈತರ ನೋಂದಣಿ ಕಾರ್ಯ ಪ್ರಾರಂಭಿಸಲಾಗಿದೆ.
ಖರೀದಿ ಕೇಂದ್ರಗಳಲ್ಲಿ ರಾಗಿ ಖರೀದಿಗಾಗಿ ಮಾರ್ಚ್ 31ರ ವರೆಗೂ ಅವಕಾಶವಿದ್ದು, ರೈತರು ತಡ ಮಾಡದೇ ಅಗತ್ಯ ದಾಖಲೆಗಳೊಂದಿಗೆ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ನೋಂದಣಿ ಮಾಡಿಸಿ ಬೆಂಬಲ ಬೆಲೆ ಯೋಜನೆಯ ಸದುಪಯೋಗ ಪಡೆಯಬಹುದು.
ಜಿಲ್ಲೆಯಲ್ಲಿ ತೆರೆಯಲಾಗಿರುವ ಎಲ್ಲಾ 11 ಖರೀದಿ ಕೇಂದ್ರಗಳಿಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ನಿಯೋಜಿತ ಅಧಿಕಾರಿಗಳು ರಾಗಿಯನ್ನು ಮಧ್ಯವರ್ತಿಗಳಿಂದ ಖರೀದಿಸದೆ ರೈತರಿಂದ ಮಾತ್ರ ಖರೀದಿಸಬೇಕು. ರಾಗಿ ಖರೀದಿ ಪ್ರಕ್ರಿಯೆ ಸುಗಮವಾಗಿ ನಡೆಸಬೇಕು. ರೈತರ ಫ್ರೂಟ್ಸ್ ಐಡಿ ಬಗ್ಗೆ ತಾಂತ್ರಿಕ ಸಮಸ್ಯೆಗಳುಂಟಾದಲ್ಲಿ ಕೃಷಿ ಇಲಾಖೆಯಲ್ಲಿ ಸ್ಥಾಪಿಸಿರುವ ಸಹಾಯವಾಣಿ 8884006306, 8884006308 ಸಂಪರ್ಕಿಸಬಹುದು.
50617 ರೈತರ ನೋಂದಣಿ: ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳಲ್ಲಿ ಈವರೆಗೆ 749973 ಕ್ವಿಂಟಾಲ್ ರಾಗಿ ಖರೀದಿಗಾಗಿ 50617 ರೈತರು ನೋಂದಣಿ ಮಾಡಿಕೊಂಡಿದ್ದು ಶೀಘ್ರವಾಗಿ ಖರೀದಿ ಪ್ರಕ್ರಿಯೆ ಆರಂಭಿಸಬೇಕು ಎಂದು ಒತ್ತಾಯ ಕೇಳಿಬಂದಿತ್ತು. ನೋಂದಣಿ ಎಲ್ಲೆಡೆಯೂ ಪೂರ್ಣವಾಗುತ್ತಿದ್ದರೂ ಜಿಲ್ಲಾಡಳಿತ ಖರೀದಿಗೆ ಮೀನಾಮೇಷ ಎಣಿಸಿದ್ದು ವ್ಯಾಪಕ ಟೀಕೆಗೆ ಗುರಿಯಾಗಿ ಜಿಲ್ಲೆಯೆಲ್ಲೆಡೆ ರೈತರು ಆಕ್ರೋಶ ಹೊರಹಾಕಲಾರಂಭಿಸಿದ್ದರು. ಖರೀದಿಸುವ ರಾಗಿ ರಾಜ್ಯ ಉಗ್ರಾಣ ನಿಗಮಗಳಿಗೆ ಸಾಗಾಣಿಕೆ ಮಾಡಲು ಗುತ್ತಿಗೆದಾರ ನೇಮಕ ಮಾಡಲಾಗಿದ್ದು, ಸಾಗಾಣಿಕೆ ಮಾಡುವ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಿದೆ. ಗೋಳಿ ಚೀಲದ ಸಮಸ್ಯೆಯೂ ಭಗೆಹರಿಸಿಕೊಂಡಿದ್ದು ಇಂದಿನಿಂದ ರೈತರು ರಾಗಿ ಮಾರಾಟ ಮಾಡಲು ಅವಕಾಶವಿದೆ.