ಪಾವಗಡ: ಪಟ್ಟಣದ ಜ್ಞಾನಬೋಧಿನಿ ಸಂಸ್ಥೆಯಲ್ಲಿ ಶನಿವಾರ ಶ್ರೀಶಾರದಾದೇವಿ ಕಣ್ಣಿನ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ಶಾಲಾ ಮಕ್ಕಳಿಗೆ ನೇತ್ರ ತಪಾಸಣಾ ಶಿಬಿರ ನಡೆಸಲಾಯಿತು.
ಶಿಬಿರಕ್ಕೆ ಚಾಲನೆ ನೀಡಿ ಪಾವಗಡ ರಾಮಕೃಷ್ಣ ಸೇವಾಶ್ರಮದ ಡಾ.ಜಪಾನಂದಜೀ ಮಹಾರಾಜï ಮಾತನಾಡಿ, ಗ್ರಾಮಾಂತರ ವಿಭಾಗದ ಶಾಲೆಗಳಲ್ಲಿ ಮಕ್ಕಳಿಗೆ ನೇತ್ರ ತಪಾಸಣಾ ಶಿಬಿರ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ನಮ್ಮ ಸಂಸ್ಥೆ ಇದೀಗ ಅತ್ಯಾಧುನಿಕ ಯಂತ್ರೋಪಕರಣಗಳುಳ್ಳ ಹಾಗೂ ನೇತ್ರ ತಜ್ಞರುಗಳುಳ್ಳ ನೂತನ ಸಂಚಾರಿ ಕಣ್ಣಿನ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದೆ ಎಂದರು.
ನೇತ್ರ ತಪಾಸಣಾ ಶಿಬಿರದಲ್ಲಿ ಮಕ್ಕಳು ಧೈರ್ಯದಿಂದ ತಮ್ಮ ದೃಷ್ಟಿಯ ನ್ಯೂನತೆಯನ್ನು ನೇತ್ರ ತಜ್ಞರಿಗೆ ತಿಳಿಸಿದ್ದಲ್ಲಿ ತತ್ಷಣವೇ ನ್ಯೂನತೆಯನ್ನು ದೂರ ಮಾಡುವುದಕ್ಕೆ ನಮಗೆ ಸಹಕಾರವಾಗುತ್ತದೆ ಎಂದರು.
ಶಿಬಿರದಲ್ಲಿ ಉಚಿತವಾದ ನೇತ್ರ ತಪಾಸಣೆ, ಔಷಧೋಪಚಾರ ಹಾಗೂ ಅತ್ಯಂತ ರಿಯಾಯಿತಿ ದರದಲ್ಲಿ ಕನ್ನಡಕಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.
ಜ್ಞಾನಬೋಧಿನಿ ಸಂಸ್ಥೆಯ ಅಧ್ಯಕ್ಷ ಅನಿಲ್ ಕುಮಾರ್, ಆರ್ಯವೈಶ್ಯ ಸಂಘದ ಅಧ್ಯಕ್ಷ ಸುದೇಶ್‌ಬಾಬು ಮಾತನಾಡಿದರು.
ಶಿಬಿರದಲ್ಲಿ ೧೨೦ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಪಾಸಣೆಗೆ ಒಳಗಾಗಿ ಔಷಧೋಪಚಾರ ಹಾಗೂ ನೇತ್ರ ಚಿಕಿತ್ಸೆ ಪಡೆದರು. ಹಿರಿಯ ನೇತ್ರ ತಜ್ಞೆ ಡಾ.ಚಂದ್ರಕಲಾ, ಸಂಯೋಜಕ ಲೋಕೇಶ್, ದೇವರಾಜು ಮತ್ತಿತರರು ಇದ್ದರು.