ಜಿಲ್ಲೆ

ಪಾಠ ಹೇಳುವ ಶಿಕ್ಷಕರು ಬೀದಿಯಲ್ಲಿದ್ದರೂ ಕಿವಿಗೊಡದ ಸರ್ಕಾರ; 20ನೇ ದಿನಕ್ಕೆ ಅತಿಥಿ ಉಪನ್ಯಾಸಕರ ಧರಣಿ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕಳೆದ 19 ದಿನದಿಂದಲೂ ನಡೆಯುತ್ತಿರುವ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಧರಣಿ ಮುಂದುವರಿದಿದೆ.

ಸೋಮವಾರ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಕೂಡ ತುಮಕೂರಿನ ಧರಣಿಯಲ್ಲಿ ಭಾಗವಹಿಸಿ, ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

ಅತಿಥಿ ಉಪನ್ಯಾಸಕ ಡಾ.ಪ್ರಸನ್ನಕುಮಾರ್ ಮಾತನಾಡಿ, ನಮ್ಮ ಬೇಡಿಕೆ ಈಡೇರುವವರೆಗೂ ಧರಣಿ ಕೈಬಿಡುವ ಪ್ರಶ್ನೆ ಇಲ್ಲ, ಮುಂದುವರಿದ ಭಾಗವಾಗಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಂಗಳವಾರದಿಂದ ಧರಣಿ ಆರಂಭಿಸಲಾಗುವುದು ಎಂದರು.

ಜಿಲ್ಲಾಧ್ಯಕ್ಷ ಡಾ.ಕೆ.ಎಚ್.ಧರ್ಮವೀರ ಮಾತನಾಡಿ, ದಶಕಗಳಿಂದ ಅತಿಥಿ ಉಪನ್ಯಾಸಕರನ್ನು ವಂಚಿಸಿದ ಸರ್ಕಾರ ಈಗ ವಿದ್ಯಾರ್ಥಿಗಳನ್ನು ವಂಚಿಸುವ ದಾರಿ ಹಿಡಿದಿದೆ, ಕಾಲೇಜು ವಿದ್ಯಾರ್ಥಿಗಳು ರಾಜ್ಯಾದ್ಯಂತ ಪ್ರತಿಭಟನೆ ಮಾಡುವ ಮುನ್ನ ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆ ಈಡೇರಿಸಬೇಕು ಎಂದರು.

ಡಾ.ಸುಮಾಲತ, ಡಾ.ಶಿವಣ್ಣ ತಿಮ್ಲಾಪುರ, ಡಾ.ಎಂ.ಟಿ.ಮಲ್ಲಿಕಾರ್ಜುನ್, ಡಾ.ಶೇಖರ್, ಡಾ.ಹನುಮಂತರಾಜು, ಡಾ.ಜಲಜಾಕ್ಷಿ, ಡಾ.ಶಿವಯ್ಯ, ಗಿರೀಶ್, ಶಂಕರಪ್ಪ, ರಘು, ವಿದ್ಯಾಜೋತಿ, ರಾಮಲಕ್ಷ್ಮೀ, ಡಿ.ಆರ್.ರೇಣುಕ, ಮಹಾಲಕ್ಷ್ಮೀ ಕಿರಣ್, ಶಶಿಧರ್ ಮತ್ತಿತರರು ಇದ್ದರು.