ತುಮಕೂರು: ತುಮಕೂರು ವಿವಿ ನೂತನ ಕ್ಯಾಂಪಸ್ `ಜ್ಞಾನಸಿರಿ' ಉದ್ಘಾಟನೆ ಕಾರ್ಯಕ್ರಮ ದಿಢೀರ್ ಮುಂದೂಡಿಕೆಯಾಗಿದೆ. ಜನವರಿ 29ರಂದು ಸಿಎಂ ಸಿದ್ದರಾಮಯ್ಯ ಅವರಿಂದ ಕ್ಯಾಂಪಸ್ ಉದ್ಘಾಟನೆಗೆ ಸಕಲ ಸಿದ್ಧತೆ ಕೂಡ ನಡೆದಿತ್ತು.
ಜಿಲ್ಲೆಯಲ್ಲಿ ವಿವಿಧ ಯೋಜನೆಗಳ 700ಕೋಟಿ ರೂ. ಕಾಮಗಾರಿಗಳ ಉದ್ಘಾಟನೆಗೆ ಸಿಎಂ ಆಗಮಿಸುತ್ತಿದ್ದ ಇದೇ ಸಂದರ್ಭದಲ್ಲಿ ಜ್ಞಾನಸಿರಿ ಲೋಕಾರ್ಪಣೆಗೆ ವಿವಿ ಆಡಳಿತ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರೂ ಕೊನೆಯ ಕ್ಷಣದಲ್ಲಿ ಕಾರ್ಯಕ್ರಮ ರದ್ದಾಗಿರುವುದು ವಿವಿ ಆವರಣದಲ್ಲಿ ಬೇಸರ ಮೂಡಿಸಿದೆ.
ಕಾರ್ಯಕ್ರಮಕ್ಕೆ ರಾಜಪಾಲರು ಅನುಮತಿ ನೀಡದಿರುವುದು ಆಹ್ವಾನ ಪತ್ರಿಕೆಯೊಂದಿಗೆ ರಾಜಭವನಕ್ಕೆ ತೆರಳಿದ್ದ ವಿವಿ ಆಡಳಿತ ಮಂಡಳಿಗೆ ನಿರಾಸೆ ತಂದಿದೆ. ರಾಜ್ಯಪಾಲರು ಕಾರ್ಯಕ್ರಮಕ್ಕೆ ಹಾಜರಾಗಲು ನಿರಾಕರಿಸಿರುವುದು ಕಾರ್ಯಕ್ರಮ ಮೂಂದೂಡಿಕೆಯಾಗಲು ಕಾರಣ ಎನ್ನಲಾಗಿದೆ.
ವಿವಿಯಲ್ಲಿ ನೂತನ ಕ್ಯಾಂಪಸ್ 40 ಕೋ.ರೂ., ವೆಚ್ಚದಲ್ಲಿ ನಿರ್ಮಿಸಿರುವ ಶೈಕ್ಷಣಿಕ ಭವನ ಉದ್ಘಾಟನೆ ಸಮಾರಂಭ ಆಯೋಜಿಸಲಾಗಿತ್ತು. ತುಮಕೂರು ಗ್ರಾಮಾಂತರ ಕ್ಷೇತ್ರದ ಬಿದರೆಕಟ್ಟೆಯಲ್ಲಿನ ಕ್ಯಾಂಪಸ್‌ಗೆ ತುಮಕೂರು ನಗರದಲ್ಲಿ ಕಾರ್ಯಕ್ರಮ ಆಯೋಜಿಸಿರುವ ಬಗ್ಗೆಯೂ ಕೆಲವು ಬಿಜೆಪಿ ನಾಯಕರು ರಾಜಭವನಕ್ಕೆ ಮುಟ್ಟಿಸಿರುವ ಗುಸುಗುಸು ಕೇಳಿಬಂದಿದೆ.
ಕಾಮಗಾರಿ ಇನ್ನೂ ಪೂರ್ಣಗೊಳ್ಳದಿದ್ದರೂ ಲೋಕಸಭಾ ಚುನಾವಣೆ ನೀತಿಸಂಹಿತೆಯ ನೆಪ ಮಾಡಿಕೊಂಡು ತರಾತುರಿಯಲ್ಲಿ ಕ್ಯಾಂಪಸ್ ಉದ್ಘಾಟನೆಗೆ ವಿವಿ ಆಡಳಿತ ಮುಂದಾಗಿದೆ ಎನ್ನಲಾಗಿದೆ. ಉದ್ಘಾಟನೆ ಬಗ್ಗೆ ಸಿಂಡಿಕೇಟ್ ಸಭೆಯಲ್ಲಿ ಯಾವುದೇ ನಿರ್ಣಯ ತೆಗೆದುಕೊಳ್ಳದಿರುವ ಬಗ್ಗೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ವಿವಿ ಮೂಲಗಳು ಖಚಿತಪಡಿಸಿವೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಕಾಮಗಾರಿ ಸಂಪೂರ್ಣ ಮುಗಿದ ಮೇಲೆ ಉದ್ಘಾಟನೆ ಮಾಡೋಣ ಎಂದು ಹೇಳಿದ್ದರಾದರೂ ಜ.21ರಂದು ಸಿದ್ಧಗಂಗಾ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಭೇಟಿಯಾದ ಕುಲಪತಿ ಪ್ರೊ.ಎಂ.ವೆAಕಟೇಶ್ವರಲು ಜ.29ರಂದು ಕ್ಯಾಂಪಸ್ ಉದ್ಘಾಟನೆಗೆ ಒಪ್ಪಿಸಿದ್ದು ಪರಮೇಶ್ವರ್‌ಗೂ ಬೇಸರ ಮೂಡಿಸಿತ್ತು ಎಂಬ ಮಾತಿದೆ.