ಜಿಲ್ಲೆ

ಡಿಕೆ ಸಹೋದರರ ಪಿತೂರಿಯಲ್ಲಿ ಪರಮೇಶ್ವರ್ ಕೂಡ ಭಾಗಿ!

ತುಮಕೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರರ ಜತೆಗೆ ಡಾ.ಜಿ.ಪರಮೇಶ್ವರ್ ಕೂಡ ಪಿತೂರಿ ನಡೆಸಿ ನಾನು ಎರಡನೇ ಸಲ ಸಂಸತ್ ಸದಸ್ಯನಾಗದಂತೆ ತಡೆದರು ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಹೊಸ ಬಾಂಬ್ ಸಿಡಿಸಿದರು.

ಕುಣಿಗಲ್‌ನಲ್ಲಿ 500ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರನ್ನು ಇಂದು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ಕಾಂಗ್ರೆಸ್ ವಿರುದ್ಧ ಗುಡುಗಿದರು.

ನನ್ನ ರಾಜಕೀಯವಾಗಿ ಮುಗಿಸುವ ಸಲುವಾಗಿಯೇ ದೇವೇಗೌಡರನ್ನು ಭಲವಂತವಾಗಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸ್ಫರ್ಧಿಸುವಂತೆ ಮಾಡಿದ್ದರು, ಡಿಕೆ ಸಹೋದರರು ನನಗೆ ಜೆಡಿಎಸ್‌ನಿಂದ ಸ್ಫರ್ಧಿಸುವಂತೆ ಬಲವಂತ ಮಾಡಿದ್ದ ಮರ್ಮಕ್ಕೆ ಡಾ.ಜಿ.ಪರಮೇಶ್ವರ್, ಬಿ.ಎನ್.ಚಂದ್ರಪ್ಪ ಹಾಗೂ ದಿ.ದೃವನಾರಾಯಣ ಕೂಡ ಸಾಕ್ಷಿಯಾಗಿದ್ದಾರೆ ಎಂದು ಹರಿಹಾಯ್ದರು.

ಒಕ್ಕಲಿಗ ಸಮುದಾಯದ ಮತ್ತೊಬ್ಬ ನಾಯಕ ಎರಡನೇ ಸಲ ಲೋಕಸಭೆಗೆ ಹೋದರೆ ರಾಜಕೀಯವಾಗಿ ಎಲ್ಲಿ ಪ್ರಭಾವಿಯಾಗಬಹುದು ಎಂದು ಕೆಟ್ಟ ಆಲೋಚನೆಯಿಂದ ಚುನಾವಣೆಯಲ್ಲಿ ಸೀಟು ತಪ್ಪಿಸಿದರು, ಈ ಬಗ್ಗೆ ಯಾವ ದೇವಾಲಯಕ್ಕೆ ಬಂದರೂ ಪ್ರಮಾಣಮಾಡಲು ಸಿದ್ಧ ಎಂದು ನೇರವಾಗಿಯೇ ಸವಾಲೆಸೆದರು.

ನಿಮ್ಮ ಕುಟುಂಬ ಸದಸ್ಯರೆಲ್ಲರಿಗೂ ಅಧಿಕಾರ ಬೇಕು ಆದರೆ, ನಾನು ಸಂಸತ್ ಚುನಾವಣೆಯಲ್ಲಿ ಸ್ಫಧಿಸಬಾರದು. ನಾನು ಕಾಂಗ್ರೆಸ್‌ನಲ್ಲಿದ್ದಾಗಲೇ ಯಡಿಯೂರಿನಲ್ಲಿ ರಂಗನಾಥ್‌ಗೆ ಟಿಕೆಟ್ ಎಂದು ಉದ್ಧಟನದಿಂದ ಮಾತನಾಡಿದ್ದ ಸಂಸದ ಡಿ.ಕೆ.ಸುರೇಶ್‌ಗೆ ಕುಣಿಗಲ್‌ನಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.

ಒಕ್ಕಲಿಗ ಸಮುದಾಯದ ಹಿರಿಯರಾದ ಎಚ್.ಡಿ.ದೇವೇಗೌಡರೂ ನನಗೆ ಟಿಕೆಟ್ ಬಿಟ್ಟುಕೊಡಬೇಕಿತ್ತು, ಅವರು ಹೇಳುತ್ತಾರೆ ಎಂದು ನಾನು ಕೊನೆಯವರೆಗೂ ಕಾದೇ ಆದರೆ, ಅವರಿಗೂ ಅಂತಹ ದೊಡ್ಡಗುಣ ಬರಲೇ ಇಲ್ಲ, ಅವರನ್ನು ಇದೇ ಕಾಂಗ್ರೆಸ್ ಮುಖಂಡರೂ ಕರೆತಂದು ವ್ಯವಸ್ಥಿತವಾಗಿ ಸೋಲಿಸಿ ಇಳಿವಯಸ್ಸಿನಲ್ಲಿ ಅವಮಾನ ಮಾಡಿದರು ಎಂದರು.

ಮಾಜಿ ಶಾಸಕ ಬಿ.ಸುರೇಶ್‌ಗೌಡ, ಬಿಜೆಪಿ ಉಪಾಧ್ಯಕ್ಷ ಎಂ.ಬಿ.ನAದೀಶ್, ಜಿಪಂ ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ಮುಖಂಡರಾದ ಡಾ.ಎಚ್.ಡಿ.ರಾಜೇಶ್‌ಗೌಡ, ಬಲರಾಮ್ ಮತ್ತಿತರರು ಇದ್ದರು.