ಜಿಲ್ಲೆ

ಭ್ರೂಣಲಿಂಗ ಪತ್ತೆ ಮಾಹಿತಿ ನೀಡಿದರೆ 1 ಲಕ್ಷ ರೂ. ಬಹುಮಾನ

ತುಮಕೂರು: ಭ್ರೂಣಲಿಂಗ ಪತ್ತೆ ಮಾಡುವ ವ್ಯಕ್ತಿ, ಸ್ಕ್ಯಾನಿಂಗ್​ ಕೇಂದ್ರದ ಬಗ್ಗೆ ನಿಖರ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಡಿ.ಎನ್​.ಮಂಜುನಾಥ್​ ಘೋಷಿಸಿದ್ದಾರೆ.

ನಗರ ಡಿಎಚ್​ಒ ಕಚೇರಿಯಲ್ಲಿ ಶನಿವಾರ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಪಿಸಿ ಅಂಡ್​ ಪಿಇನ್​ಡಿಟಿ ಕಾಯ್ದೆಯಡಿ ಜಿಲ್ಲೆಯಲ್ಲಿ ಭ್ರೂಣಲಿಂಗ ಪತ್ತೆ ಮಾಡುವ ಕ್ಲಿನಿಕ್​ ಅಥವಾ ವೈದ್ಯರ ಬಗ್ಗೆ ನಿಖರ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ನೀಡಲು ಸರ್ಕಾರ ನಿರ್ಧರಿಸಿದೆ ಎಂದರು.

ವೈದ್ಯಕಿಯ ಗರ್ಭಪಾತಕ್ಕೆ ಸಂಬಂಧಿಸಿದ ವರದಿಗಳನ್ನು ಸ್ಕಾ$ನಿಂಗ್​ ಕೇಂದ್ರಗಳು ಕಡ್ಡಾಯವಾಗಿ 2 ವರ್ಷಗಳ ಕಾಲ ಸಂರಕ್ಷಿಸಿಡಬೇಕು. ಗರ್ಭಿಣಿಯರನ್ನು ಸ್ಕಾನಿಂಗ್​ ಕೇಂದ್ರಗಳಿಗೆ ರೆಫರ್​ ಮಾಡುವ ಮುನ್ನ ರೆಫರಲ್​ ಸ್ಲಿಪ್​ ಅತ್ಯಗತ್ಯ. ರೆಫರಲ್​ ಸ್ಲಿಪ್​ನಲ್ಲಿ ಕಡ್ಡಾಯವಾಗಿ ಆರ್​ಸಿಎಚ್​ ಐಡಿ ನಮೂದಿಸಬೇಕು. ರೆಫರಲ್​ ಸ್ಲಿಪ್​ ಹಾಗೂ ಆರ್​ಸಿಹೆಚ್​ ಐಡಿ ಇಲ್ಲದೆ ಸ್ಕಾನಿಂಗ್​ ಕೇಂದ್ರಗಳಲ್ಲಿ ಗರ್ಭಿಣಿಯರಿಗೆ ಸ್ಕಾನಿಂಗ್​ ಮಾಡುವಂತಿಲ್ಲ ಎಂದು ಸೂಚಿಸಿದ್ದಾರೆ.

ಸಭೆಯಲ್ಲಿ ನೋಂದಣಿ ಹಾಗೂ ನವೀಕರಣಕ್ಕೆ ಬಂದ ಸ್ಕ್ಯಾನಿಂಗ್ ಕೇಂದ್ರಗಳಿಗೆ ಅನುಮತಿ ನೀಡಲಾಯಿತು. ಸ್ಕ್ಯಾನಿಂಗ್​ ವೈದ್ಯರಿಗೆ 2 ಸೆಂಟರ್​ಗಳಲ್ಲಿ ಮಾತ್ರ ಕರ್ತವ್ಯ ನಿರ್ವಹಿಸಲು ಅವಕಾಶವಿದೆ. 2 ಸೆಂಟರ್​ಗಳಲ್ಲಿ ಮಾತ್ರ ಕರ್ತವ್ಯ ನಿರ್ವಹಿಸುವ ಬಗ್ಗೆ ಅಫಿಡವಿಟ್​ ನೀಡಿದ ವೈದ್ಯರನ್ನು ಎಂಪ್ಯಾನಲ್​ ಮಾಡಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಬಿ.ರೇಖಾ, ಜಿಲ್ಲಾಸ್ಪತ್ರೆಯ ಸ್ತ್ರೀರೋಗ ತಜ್ಞ ಡಾ.ಲೋಕೇಶ್​ ರೆಡ್ಡಿ, ಮಕ್ಕಳ ತಜ್ಞ ಡಾ.ಸಂತೋಷ್​, ವಕೀಲ ಕುಮಾರಸ್ವಾಮಿ ಇದ್ದರು.