ತುಮಕೂರು: ರಾಜ್ಯ ಸರ್ಕಾರದ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣ ದೋಷಪೂರಿತ ದತ್ತಾಂಶ ಪರಿಗಣಿಸಿದ್ದು ಅವೈಜ್ಞಾನಿಕವಾಗಿದೆ ಹಾಗಾಗಿ, ಸರ್ಕಾರದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸೆ.10 ರಂದು ಭೋವಿ, ಬಂಜಾರ, ಕೊರಚ, ಕೊರಮ ಹಾಗೂ ಅಲೆಮಾರಿ ಸಮುದಾಯಗಳಿಂದ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಭೋವಿ ಸಂಘದ ಜಿಲ್ಲಾಧ್ಯಕ್ಷ ಓಂಕಾರ್ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರ ಕಲ್ಯಾಣಕ್ಕಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಿದ ಬಿಜೆಪಿ ಸರ್ಕಾರದ ವಿರುದ್ಧ ಅಂದಿನ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಇದು ಕೇವಲ ಆಶ್ವಾಸನೆ ಜಾರಿಗೆ ಬರುವುದಿಲ್ಲ ಎಂದು ಟೀಕೆ ಮಾಡಿತ್ತು, ಆದರೆ, ಇಂದು ಅದೇ ಮೀಸಲಾತಿ ಪ್ರಮಾಣದಲ್ಲಿ ತಮ್ಮ ಪಕ್ಷದ ನಾಯಕರನ್ನು ಮೆಚ್ಚಿಸಲು ಅವೈಜ್ಙಾನಿಕವಾಗಿ ವರ್ಗೀಕರಣ ಮಾಡಿ ಗೊಂದಲ ಸೃಷ್ಠಿಸಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿಗಳ ಮೀಸಲಾತಿ ಪ್ರಮಾಣವನ್ನು ಶೇ.15ರಿಂದ ಶೇ.17ಕ್ಕೆ ಏರಿಕೆ ಮಾಡಿ ಐತಿಹಾಸಿಕ ತೀಮಾರ್ನ ಕೈಗೊಂಡಿತ್ತು. ಈ ತೀಮಾರ್ನದಿಂದ ಇಂದು ಸಾವಿರಾರು ವಿದ್ಯಾರ್ಥಿಗಳು ಇಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ಅನೇಕ ಕೋರ್ಸ್ಗಳಿಗೆ ಪ್ರವೇಶ ಪಡೆದಿದ್ದಾರೆ ಎಂದರು.
ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಎಲ್ಲಾ ಸಮುದಾಯಗಳಲ್ಲಿ ಶಿಕ್ಷಣ, ಉದ್ಯೋಗ, ಅಂತರ್ ಹಿಂದುಳಿದಿರುವಿಕೆಯ ವಾಸ್ತವ ದತ್ತಾಂಶಗಳ ಆಧಾರದಲ್ಲಿ, ಪ್ರಾತಿನಿಧ್ಯ ಕೊರತೆ ಆಗದಂತೆ ಮೀಸಲಾತಿ ಪ್ರಮಾಣ ಹಂಚಿಕೆ ಮಾಡಬೇಕು ಎಂಬುದು ಸುಪ್ರೀಂ ಕೋರ್ಟ್ ಆದೇಶವಾಗಿದೆ. ಎಲ್ಲಾ ಸಮಾಜಗಳಿಗೂ ಸಮಾನ ಸಾಮಾಜಿಕ ನ್ಯಾಯ ಒದಗಿಸಬೇಕು ಎಂಬ ಇಚ್ಛಾಶಕ್ತಿಯನ್ನು ಸರ್ಕಾರ ತೋರಬೇಕು ಎಂದು ಹೇಳಿದರು.
ತಾಂಡಗಳಲ್ಲಿ ವಾಸಿಸುತ್ತಿರುವ ಲಂಬಾಣಿಗಳು, ನೆಲೆ ಇಲ್ಲದ ಸ್ಥಳಗಳಲ್ಲಿ ಕಲ್ಲು ಒಡೆದು ಜೀವನ ನಡೆಸುತ್ತಿರುವ ಭೋವಿ ಸಮುದಾಯ, ಇರಲು ಸೂರುಗಳೇ ಇಲ್ಲದ ಕೊರಚ, ಕೊರಮ ಸಮಾಜದವರು, ಊರೂರು ತಿರುಗುವ ಅಲೆಮಾರಿ ಸಮುದಾಯಗಳಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಈಗ ತೀಮಾರ್ನ ಮಾಡಿರುವ ಒಳಮೀಸಲಾತಿ ವರ್ಗೀಕರಣದಲ್ಲಿ ಅನ್ಯಾಯ ಮಾಡಿದೆ ಎಂದರು.
ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಶೇಕಡ 4.5 ಹಾಗೂ ಅಲೆಮಾರಿ ಸಮುದಾಯಗಳಿಗೆ ಶೇ.1ರಷ್ಟು ಒಳಮೀಸಲಾತಿ ನೀಡಬೇಕು ಎಂದು ಹಿಂದಿನ ಬಿಜೆಪಿ ಸರ್ಕಾರ ಶಿಫಾರಸು ಮಾಡಿತ್ತು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ 63 ಸಮುದಾಯಗಳನ್ನು ಒಟ್ಟಿಗೆ ಸೇರಿಸಿ ಶೇ.5ರಷ್ಟು ಮೀಸಲಾತಿ ಹಂಚಿಕೆ ಮಾಡಿ ದ್ರೋಹ ಮಾಡಿದೆ. ಒಳಮೀಸಲಾತಿ ಪ್ರಮಾಣ ಮರುಪರಿಶೀಲನೆ ಮಾಡಿ ಅವಕಾಶ ವಂಚಿತ, ಧ್ವನಿ ಇಲ್ಲದ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಂಜಾರ ಸಂಘದ ಕಾರ್ಯಾಧ್ಯಕ್ಷ ಬಾಂಬೆ ಕುಮಾರ ನಾಯಕ್, ಜಿಲ್ಲಾ ಭೋವಿ ಸಂಘದ ಉಪಾಧ್ಯಕ್ಷ ಶಿರಾ ಗೋವಿಂದರಾಜು, ಮುಖಂಡರಾದ ಸತೀಶ್, ಮಂಜುನಾಥ್ ಇದ್ದರು.
ರಾಜ್ಯ ಸರ್ಕಾರದ ಪರಿಶಿಷ್ಟ ಜಾತಿಗಳ ಅವೈಜ್ಞಾನಿಕ ಒಳಮೀಸಲಾತಿ ನಿರ್ಧಾರ ಖಂಡಿಸಿ ಸೆ.10ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ತುಮಕೂರು ಜಿಲ್ಲೆಯಿಂದಲೂ ಭೋವಿ, ಬಂಜಾರ, ಕೊರಚ, ಕೊರಮ ಹಾಗೂ ಅಲೆಮಾರಿ ಸಮುದಾಯದವರು ಸ್ವಯಂ ಪ್ರೇರಿತವಾಗಿ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರು ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಓಂಕಾರ್ ಭೋವಿ ಸಂಘದ ಜಿಲ್ಲಾಧ್ಯಕ್ಷ