ಕೊರಟಗೆರೆ: ದ್ವಿತೀಯ ಪಿಯು ಪರೀಕ್ಷೆ ಬರೆಯಲು ತಾಯಿ ತನ್ನ ಮಗಳನ್ನು ಸೋಂಟದ ಮೇಲೆ ಎತ್ತಿಕೊಂಡು ಪರೀಕ್ಷೆ ಕೇಂದ್ರಕ್ಕೆ ಕರೆದುಕೊಂಡು ಬಂದರೂ ಅಗತ್ಯವಾಗಿದ್ದ ವೀಲ್ಚೇರ್ ಕೂಡ ಕೇಂದ್ರದಲ್ಲಿ ಗತಿ ಇರಲಿಲ್ಲ, ಜಿಲ್ಲಾಧಿಕಾರಿ ಜಿಲ್ಲಾ ಕೇಂದ್ರ ಪರೀಕ್ಷಾ ಕೇಂದ್ರಗಳನ್ನಷ್ಟೇ ಪರಿಶೀಲಿಸಿ ಎಲ್ಲೆಡೆಯೂ ಮೂಲಭೂತ ಸೌಕರ್ಯ ಒದಗಿಸಲಾಗಿದೆ ಎಂದು ನೀಡಿದ್ದ ಭರವಸೆ ಹುಸಿಯಾಗಿದೆ.
ದ್ವಿತೀಯ ಪಿಯುಸಿ ಕನ್ನಡ ಪರೀಕ್ಷೆ ಬರೆಯಲು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅವರ ಸ್ವಕ್ಷೇತ್ರ ಕೊರಟಗೆರೆ ಪಟ್ಟಣದ ಸರ್ಕಾರಿ ಪಿಯು ಕಾಲೇಜಿಗೆ ಆಗಮಿಸಿದ್ದ ವಿಶೇಷ ಚೇತನ ವಿದ್ಯಾರ್ಥಿನಿಗೆ ವೀಲ್ ಚೇರ್ ಕೂಡ ಸಿಗದಿರುವುದು ಪರೀಕ್ಷಾ ಅವ್ಯವಸ್ಥೆಗೆ ನಿದರ್ಶನ ಎನ್ನಿಸಿತು.
ತಾಲೂಕಿನ 11 ಪದವಿಪೂರ್ವ ಕಾಲೇಜುಗಳ 897 ವಿದ್ಯಾರ್ಥಿಗಳು 33 ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಪಡೆದಿದ್ದರೂ, ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸುವಲ್ಲಿ ಶಿಕ್ಷಣ ಇಲಾಖೆ ಸಂಪೂರ್ಣ ವಿಫಲವಾಗಿದೆ. ವೀಲ್ ಚೇರ್ ಅಥವಾ ಪ್ರಯೋಜನಕಾರಿ ಸೌಲಭ್ಯಗಳಿಲ್ಲದೆ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ಮೂಡಿದೆ.