ತುಮಕೂರು: ಕೇಂದ್ರ ಸರ್ಕಾರ ದೇಶದ ಎಲ್ಲಾ ಮಹಾನಗರಗಳಲ್ಲಿಯೂ ತಲಾ ಎರಡು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಮುಂದಾಗಿದ್ದು ಬೆಂಗಳೂರಿನಲ್ಲಿಯೂ ಎರಡು ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿದೆ.
ದೇವನಹಳ್ಳಿಗೆ ಹತ್ತಿರವಾಗಿರುವ ತುಮಕೂರು ಜಿಲ್ಲೆಯ ಕೊರಟಗೆರೆ, ಮಧುಗಿರಿ ಹಾಗೂ ಶಿರಾ ತಾಲೂಕುಗಳನ್ನು ಒಳಗೊಂಡಂತೆ 8000 ಎಕರೆ ಭೂಮಿಯನ್ನು ಗುರುತಿಸಿ, ಸ್ವಾಧೀನ ಪಡಿಸಿಕೊಳ್ಳಲು ಕರ್ನಾಟಕ ಕೈಗಾರಿಕೆ ಅಭಿವೃದ್ಧಿ ಮಂಡಳಿ ಭಾರತ ಸರ್ಕಾರದ ಕೈಗಾರಿಕಾ ಅಭಿವೃದ್ಧಿ ಮಂಡಳಿಗೆ ಶಿಫಾರಸು ಮಾಡಿದೆ.
ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ 8 ಸಾವಿರ ಎಕರೆ ಭೂಮಿಯನ್ನು ಮೂರು ತಾಲೂಕುಗಳಲ್ಲಿ ಗುರುತಿಸಲಾಗಿದೆ. ಕೊರಟಗೆರೆಯಲ್ಲಿ 3 ಸಾವಿರ ಎಕರೆ, ಮಧುಗಿರಿಯಲ್ಲಿ 2366 ಹಾಗೂ ಶಿರಾ ತಾಲೂಕಿನಲ್ಲಿ 3600 ಸಾವಿರ ಎಕರೆ ಭೂಮಿಯನ್ನು ಗುರುತಿಸಲಾಗಿದ್ದು ಬರದ ಸೀಮೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಗರಿಗೆದರಿದೆ.
ಕೆಐಡಿಬಿ ಅಧಿಕಾರಿಗಳು ಗುರುತಿಸಿರುವ 8000 ಎಕರೆ ಭೂಮಿ ವಿಮಾನ ನಿಲ್ದಾಣಕ್ಕೆ ಸೂಕ್ತವೇ ಎಂಬ ಬಗ್ಗೆ ಐಡಿಬಿ ಪರಿಶೀಲಿಸಿ ವರದಿ ನೀಡಬೇಕು. ಇದಕ್ಕಾಗಿ ಕೇಂದ್ರದ ತಂಡ ಶೀಘ್ರದಲ್ಲಿಯೇ ಆಗಮಿಸಿ ಸ್ಥಳ ಪರಿಶೀಲನೆ ನಡೆಸಲಿದೆ ಎನ್ನಲಾಗಿದೆ.
ಬೆಂಗಳೂರಿಗೆ ಹತ್ತಿರವಾಗುವಂತೆ ತುಮಕೂರು ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಅಗತ್ಯವಾದ 8 ಸಾವಿರ ಎಕರೆಯನ್ನು ಗುರುತಿಸಲಾಗಿದ್ದು ಕೇಂದ್ರ ಸರ್ಕಾರಕ್ಕೆ ತಿಳಿಸಲಾಗಿದೆ. ಕೈಗಾರಿಕೆ ಇಲಾಖೆ ಕಾರ್ಯದರ್ಶಿ ಜತೆಗೆ ನಾನೂ ಮಾತನಾಡಿದ್ದೇನೆ.
ಡಾ.ಜಿ.ಪರಮೇಶ್ವರ
ಜಿಲ್ಲಾ ಉಸ್ತುವಾರಿ ಸಚಿವ