ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕು ಕಂದಿಕೆರೆ ಹೋಬಳಿ ದೊಡ್ಡರಾಂಪುರದಲ್ಲಿ ಸರ್ಕಾರದ ಸೌಲಭ್ಯವಿಲ್ಲದೆ ಅಸಹಾಯಕವಾಗಿರುವ ಬಡ ಕುಟುಂಬಕ್ಕೆ ತುಮಕೂರಿನ ಸಮೃದ್ಧಿ ಶಿಕ್ಷಣ ಟ್ರಸ್ಟ್ ನೆರವಾಗುವ ಮೂಲಕ ಮಾನವೀಯತೆ ಮೆರೆದಿದೆ.
ಟ್ರಸ್ಟ್ ಅಧ್ಯಕ್ಷ ಬೆಳಗುಂಬ ವೆಂಕಟೇಶ್ ಮತ್ತು ತಂಡ ಗುರುವಾರ ದೊಡ್ಡರಾಂಪುರ ಗ್ರಾಮಕ್ಕೆ ಭೇಟಿ ನೀಡಿ ಅಸಹಾಯಕ ಕುಟುಂಬಕ್ಕೆ ಅಗತ್ಯವಾದ ದಿನಸಿ, ಅಡುಗೆ ಎಣ್ಣೆ, ತರಕಾರಿ, ಪಾತ್ರೆ, ಬೆಡ್ ಶೀಟ್, ಬಟ್ಟೆ ಹಾಗೂ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗೆ ನೋಟ್ ಬುಕ್, ಟ್ರಕ್ ವಿತರಿಸಿ ನೆರವಾದರು.
ಊಟ, ಬಟ್ಟೆಯಿಲ್ಲದೆ, ಸೋರುತ್ತಿದ್ದ ಮನೆಯಲ್ಲಿ ವಾಸಿಸುತ್ತಿದ್ದ ಬುದ್ಧಿಮಾಂದ್ಯ, ವಿಶೇಷಚೇತನರೇ ಇರುವ ಈ ಕುಟುಂಬದ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ತಿಳಿದು ಆ ಕುಟುಂಬಕ್ಕೆ ಬೇಕಾದ ಸೌಲಭ್ಯ ಒದಗಿಸುವ ಮೂಲಕ ಮಾನವೀಯ ಕಾರ್ಯ ಮಾಡಿದ್ದರು, ಈ ಮಾಹಿತಿ ತಿಳಿದ
ಸಮೃದ್ಧಿ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷ ಬೆಳಗುಂಬ ವೆಂಕಟೇಶ್ ಮತ್ತು ಅವರ ತಂಡ ನೆರವಿಗೆ ಧಾವಿಸಿದೆ.
ಟ್ರಸ್ಟ್ ಅಧ್ಯಕ್ಷ ಬೆಳಗುಂಬ ವೆಂಕಟೇಶ್ ಮಾತನಾಡಿ, ನಮ್ಮ ಸಂಮೃದ್ದಿ ಶಿಕ್ಷಣ ಟ್ರಸ್ಟ್ ಬಡ ಕುಟುಂಬಗಳಿಗೆ ಹಾಗೂ ಅವರ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಕಾರ್ಯ ಮಾಡುತ್ತಾ ಬಂದಿದೆ, ದೊಡ್ಡರಾಂಪುರದ ಬಡ ಕುಟುಂಬದ ಶೋಚನೀಯ ಸ್ಥಿತಿ ತಿಳಿದು ಅಗತ್ಯ ಆಹಾರ ಸಾಮಗ್ರಿ, ಬಟ್ಟೆ, ಆ ಮಕ್ಕಳ ಶಿಕ್ಷಣಕ್ಕೆ ನೆರವು ನೀಡಿದ್ದೇವೆ, ಮುಂದೆಯು ಈ ಕುಟುಂಬದ ಜೊತೆ ಟ್ರಸ್ಟ್ ಇರಲಿದೆ ಎಂದರು.
ಟ್ರಸ್ಟ್ ವತಿಯಿಂದ ಕಾನೂನು ಶಿಕ್ಷಣ ಪಡೆಯುವ ಐದು ಅನಾಥ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ನೆರವು ನೀಡಲಾಗುತ್ತೆ, ಜಿಲ್ಲೆಯ ತೀರ ಕಡುಬಡತನದ ಮಕ್ಕಳ ಶಿಕ್ಷಣಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವ ಯೋಜನೆ ಹೊಂದಿದೆ ಎಂದರು.
ಸಮೃದ್ಧಿ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ನಾಗರಾಜು ಬುಗುಡನಹಳ್ಳಿ. ಟ್ರಸ್ಟಿಗಳಾದ ನರಸಿಂಹರಾಜು ವಡ್ಡರಹಳ್ಳಿ. ನಾಗರಾಜು ನಂದಿಹಳ್ಳಿ, ಡಿಕೆ ಕಾಂತರಾಜು ದೊಡ್ಡೇರಿ, ಕುಮಾರ ಹೆಬ್ಬಾಕ, ಹರೀಶ್ ಬೈರಸಂದ್ರ, ಸುನಿಲ್ ತೊಂಡಗೆರೆ ಇದ್ದರು.