ಜಿಲ್ಲೆ

ಜಿಲ್ಲಾಧಿಕಾರಿ ಶುಭಕಲ್ಯಾಣ್​ ಡಿಜಿಟಲ್​ ಸಹಿ ದುರುಪಯೋಗ!?; 40 ಎಕರೆ ಪಡಾ ಭೂಮಿ ಅಕ್ರಮ ಪರಿವರ್ತನೆ

ಸೋರಲಮಾವು ಶ್ರೀಹರ್ಷ

ತುಮಕೂರು: ಸರ್ಕಾರದ ಪಡಾ ಬಿದ್ದ 40 ಎಕರೆ ಜಮೀನನ್ನು ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ಗೌರಿಬಿದನೂರು ಮೂಲದ ರಾಜಕಾರಣಿ ಪತ್ರನ ಒಡತೆನದ ಕಂಪನಿಗೆ ನೀಡಿ, ಕೈಗಾರಿಕಾ ಉದ್ದೇಶಕ್ಕೆ ಭೂಪರಿವರ್ತನೆ ಮಾಡಿರುವ ಹಗರಣ ಬೆಳಕಿಗೆ ಬಂದಿದೆ. ಹಗರಣದಲ್ಲಿ ಖುದ್ದು ಜಿಲ್ಲಾಧಿಕಾರಿ ಶುಭಕಲ್ಯಾಣ್​, ಅಪರ ಜಿಲ್ಲಾಧಿಕಾರಿ ಡಾ.ತಿಪ್ಪೇಸ್ವಾಮಿ ಹೆಸರು ತಳಕು ಹಾಕಿಕೊಂಡಿರುವುದು ಅಚ್ಚರಿ ಮೂಡಿಸಿದೆ.

ಗೌರಿಬಿದನೂರು ಮೂಲದ ಪ್ರಭಾವಿ ರಾಜಕಾರಣಿ ಪುತ್ರ ಕೆ.ಪಿ.ಪವನ್​ ಒಡೆತನದ ಏಷಿಯನ್​ ್ಯಾಬ್​ ಟೆಕ್​ ಲಿ., ಹೆಸರಿನ ಕಂಪನಿಗೆ ಎಲ್ಲಾ ಕಂದಾಯ ನಿಯಮಗಳನ್ನು ಗಾಳಿಗೆ ತೂರಿ ಸರ್ಕಾರದ ಪಡಾ ಬಿದ್ದ 40 ಎಕರೆ ಜಮೀನನನ್ನು ಕೈಗಾರಿಕಾ ಉದ್ದೇಶಕ್ಕೆ ಭೂಪರಿವರ್ತನೆಗೊಳಿಸಿ ಜಿಲ್ಲಾಧಿಕಾರಿ ಜೂ.3ರಂದು ಆದೇಶಿಸಿದ್ದಾರೆ ಆದರೆ, ಕಡತಗಳಿಗೆ ಸಹಿ ಇಲ್ಲದೆ ಆದೇಶವಾಗಿರುವುದು ಅಕ್ರಮ ನಡೆದಿರುವುದು ಜಿಲ್ಲಾಧಿಕಾರಿಗೆ ಜೂ.5ರಂದು ಗೊತ್ತಾಗಿದೆ.

ಮಧುಗಿರಿ ತಾಲೂಕು ಐಡಿ ಹಳ್ಳಿ ಹೋಬಳಿ ತುಮ್ಮುಲು ಗ್ರಾಮದಲ್ಲಿ ಉಳುಮೆಗೆ ಯೋಗ್ಯವಲ್ಲದ 40 ಎಕರೆ ಭೂಮಿ ಸರ್ಕಾರದ ಪಡಾ ಹೆಸರಿನಲ್ಲಿದ್ದು ಅದನ್ನು ಭೂ ಸುಧಾರಣಾ ಕಾಯ್ದೆಯಲ್ಲಿ ಈಗಾಗಲೇ ಕಾರ್ಯನಿರ್ವಹಿಸಿ ಮೃತರಾಗಿರುವ ಉಪವಿಭಾಗಾಧಿಕಾರಿ ಹೆಸರಿನಲ್ಲಿ ಆದೇಶ ಸೃಷ್ಠಿಸಿಕೊಂಡು ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿ ದಾಖಲೆಗಳನ್ನು ಸೃಷ್ಠಿಸಿಕೊಂಡು ಕೋಟ್ಯಾಂತರ ರೂ. ಅಕ್ರಮ ಎಸಗಲಾಗಿದೆ ಎನ್ನಲಾಗಿದ್ದ ತನಿಖೆ ನಡೆಯಬೇಕಿದೆ.

ಪ್ರಕರಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳೇ ನೇರ ಕೈವಾಡ ದೃಢವಾಗುವ ಸಾಕ್ಷ$್ಯಗಳು ಲಭ್ಯವಾದ ನಂತರ ಮುಜುಗರದಿಂದ ಪಾರಾಗಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿಯೋಜನೆ ಮೇಲೆ ಕರ್ತವ್ಯದಲ್ಲಿದ್ದ ಗ್ರಾಮ ಅಭಿವೃದ್ಧಿ ಅಧಿಕಾರಿಯನ್ನು ಜೂ.11ರಂದು ಅಮಾನತುಗೊಳಿಸಲಾಗಿದೆ. ಪ್ರಕರಣ ಬಯಲಾದ ನಂತರ ಆರೋಪಿ ಅಧಿಕಾರಿ ತಲೆಮರೆಸಿಕೊಂಡಿದ್ದು ಇಲಾಖೆ ವಿಚಾರಣೆ ಹೊರತುಪಡಿಸಿ ಕ್ರಿಮಿನಲ್​ ಮೊಕದ್ದಮೆ ದಾಖಲಾಗದೆ ಇರುವುದು ಅಚ್ಚರಿ ಮೂಡಿಸಿದೆ.

ಜಿಲ್ಲಾಧಿಕಾರಿ ಶುಭಕಲ್ಯಾಣ್​ ಆಡಳಿತದಲ್ಲಿ ಅನನುಭವಿಯಾಗಿದ್ದು ಕಚೇರಿಯಲ್ಲಿನ ಅಧಿಕಾರಿಗಳು, ಸಿಬ್ಬಂದಿ ಅವರಿಗೆ ಇಷ್ಟಬಂದಂತೆ ಆದೇಶ ಮಾಡಿರುವುದು ಜಿಲ್ಲೆಯ ಮಟ್ಟಿಗೆ ಆಘಾತ ತಂದಿದೆ. ಕಚೇರಿಯಲ್ಲಿ ಗೌಪ್ಯವಾಗಿ ಕಾಪಾಡಿಕೊಳ್ಳಬೇಕಿರುವ ಡಿಜಿಟಲ್​ ಸಹಿಯನ್ನು ಬೇರೊಬ್ಬರಿಗೆ ನೀಡಿರುವ ಜಿಲ್ಲಾಧಿಕಾರಿ ನಡೆಯ ವಿರುದ್ಧವೂ ಅನುಮಾನಗಳು ಮೂಡಿವೆ.

ತುಮಕೂರು ಜಿಲ್ಲಾಧಿಕಾರಿ ಕಡತಗಳಿಗೆ ಅನುಮೋದನೆ ನೀಡದಿದ್ದರೂ ಸಿಬ್ಬಂದಿಯೇ ಭೂ ಪರಿವರ್ತನೆ ಅರ್ಜಿಗಳನ್ನು ವಿಲೇವಾರಿ ಮಾಡಿದ್ದಾರೆ ಎಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆಯಾದರೂ ಜಿಲ್ಲಾಧಿಕಾರಿ ಲಾಗಿನ್​ ದುರುಪಯೋಗ ಆರೋಪ ಹಸ್ಯಾಸ್ಪದ ಎನ್ನಿಸಿದೆ. ಹಗರಣದಲ್ಲಿ ದೊಡ್ಡ ತಿಮಿಂಗಿಲಗಳೇ ಇದ್ದು ಸಣ್ಣ ಮೀನು ಬಲಿಯಾಗಿ ಸುಮ್ಮನಾಗದಂತೆ ತಡೆಯಬೇಕಿದೆ.

ವಿಎ ಕೈಯಲ್ಲಿ ಜಿಲ್ಲಾಧಿಕಾರಿ ಡಿಜಿಟಲ್​ ಸಹಿ!? ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್​ ಅವರಿಗೆ ಸರ್ಕಾರದಿಂದ ನೀಡಲಾಗಿರುವ ಡಿಜಿಟಲ್​ ಸಹಿ(ಲಾಗಿಲ್​) ಕಂದಾಯ ಇಲಾಖೆಯ ಅತೀ ಹೆಳಹಂತದ ಅಧಿಕಾರಿ ಬಳಿ ಇತ್ತು ಎಂದು ಅಂಶ ಜಿಲ್ಲೆಯಲ್ಲಿ ಅಚ್ಚರಿಗೆ ಕಾರಣವಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಯಾವುದೇ ಅಧಿಕೃತ ಕಾರ್ಯಾಭಾರವಿಲ್ಲದೆ ಮೆಳೇಕೋಟೆ ವೃತ್ತದ ಗ್ರಾಮ ಆಡಳಿತ ಆಧಿಕಾರಿ ಬಿ.ಭಾನುಪ್ರಕಾಶ್​ ಬಳಿ ಹೇಗಿತ್ತು ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಜಿಲ್ಲಾ ಮಟ್ಟದ ಮ್ಯಾಜಿಸ್ಟ್ರೆಟ್​ ಕೂಡ ಆಗಿರುವ ಜವಬ್ಧಾರಿಯುತ ಜಿಲ್ಲಾಧಿಕಾರಿ ಮಾತ್ರ ಬಳಸಬೇಕಿರುವ ಡಿಜಿಟಲ್​ ಸೈನ್​ ಸರ್ಟಿಫಿಕೇಜ್​(ಡಿಎಸ್​ಸಿ) ಬೇರೊಬ್ಬರು ಬಳಸಿ ಅಕ್ರಮ ನಡೆಸಿರುವುದು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಳೆದರಡು ವರ್ಷಗಳಿಂದ ಆಗಿರುವ ಆದೇಶಗಳು ಹಾಗೂ ಭೂಪರಿವರ್ತನೆಗಳ ಮೇಲೆ ಅನುಮಾನ ಮೂಡಿಸಿದೆ.
ಶುಲ್ಕ ಪಾವತಿ ಚಲನ್​ಗೆ ಸಹಿ ಹಾಕಿದವರಾರು? ಜಿಲ್ಲಾಧಿಕಾರಿ ಕಚೇರಿಯಲ್ಲಿ ತಿಳಿಸುತ್ತಿರುವಂತೆ ಲಾಗಿನ್​ ದುರುಪಯೋಗ ಪಡಿಸಿಕೊಂಡು ಭೂ ಪರಿವರ್ತನೆ ಆದೇಶ ಹೊರಡಿಸಲಾಗಿದೆ ಎಂಬುದೇ ಆದರೂ, ಈ ಆದೇಶಕ್ಕೂ ಪೂರ್ವದಲ್ಲಿ ಭೂಪರಿವರ್ತನಾ ಶುಲ್ಕ452479 ಪೋಡಿ ಶುಲ್ಕ ಪಾವತಿಸಲು ಸೃಜಿಸುವ ಚಲನ್​ಗೆ ಸಹಿ ಹಾಕಿದವರು ಯಾರು ಎಂಬ ಬಗ್ಗೆ ಪ್ರಶ್ನೆಗಳೆದ್ದಿವೆ. ದಾಖಲೆಗಳೆಲ್ಲವೂ ಒಪ್ಪಿಗೆಯಾದ ನಂತರ ಖುದ್ದು ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿ ಚಲನ್​ಗೆ ಸಹಿ ಹಾಕಲು ಅಧಿಕಾರ ಹೊಂದಿದ್ದು ಈ ಭೂಪರಿವರ್ತನೆಯ ವಿಷಯ ಮೇಲಾಧಿಕಾರಿಗಳ ಗಮನಕ್ಕಿಲ್ಲದಂತೆ ನಡೆಯಲು ಸಾಧ್ಯವಿಲ್ಲ ಎಂಬ ಮಾತುಗಳಿವೆ. ಅಥವಾ ಲಾನುಭವಿ ಪಾವತಿಸಿರುವ ಚಲನ್​ ಕೂಡ ನಕಲಿಯೇ ಎಂಬ ಪ್ರಶ್ನೆಗಳೆದ್ದಿವೆ.
ಏನಿದು ಭೂ ಪರಿವರ್ತನೆ ಹಗರಣ? ಕೈಬರಹದ ಪಹಣಿಗಳಲ್ಲಿ ಇಂದಿಗೂ ಸರ್ಕಾರಿ ಪಡಾ ಎಂದೇ ನಮೂದಾಗಿರುವ 40 ಎಕರೆ ಭೂಮಿಯ ನಕಲಿ ದಾಖಲೆಗಳನ್ನು ಸೃಷ್ಠಿಸಿ ಪರಾಭಾರೆ ಮಾಡಲಾಗಿದೆ. ಮೃತರಾಗಿರುವ ಉಪವಿಭಾಗಾಧಿಕಾರಿ ಹೆಸರಿನಲ್ಲಿ ಆದೇಶ ಮಾಡಿಕೊಂಡು ಭೂಮಿಯ ಮಾಲೀಕತ್ವವನ್ನು ವಿಶ್ವೇರಯ್ಯ ಶಾಸ್ತ್ರೀ, ಸತ್ಯಪ್ರಕಾಶ್​, ಭಾನುಪ್ರಕಾಶ್​ ಎಂಬುವವರಿಗೆ ತಲಾ 10 ಎಕರೆ ಭೂಮಿ ನೀಡಲಾಗಿದೆ. ಎಸಿ ಅಧ್ಯಕ್ಷತೆಯ ಭೂ ಸುಧಾರಣಾ ಕಾಯ್ದೆ ಸಮಿತಿ ಸಭೆಯಲ್ಲಿ ಗರಿಷ್ಟ 4.38ಎಕರೆ ಮಾತ್ರ ಭೂಮಿ ನೀಡಲು ಅವಕಾಶವಿದ್ದು ತಹಸೀಲ್ದಾರ್​ ಬಳಿ ಾರಂ 7 ತಿರುಸತವಾಗದ್ದಿದ್ದರೂ, ಾರಂ 7ಎ ಅರ್ಜಿ ಪಡೆದು ದಾಖಲೆಗಳನ್ನು ಸೃಷ್ಠಿಸಲಾಗಿದೆ ಎನ್ನಲಾಗಿದೆ. ಆದರೆ, ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಇದರ ಸಂಬಂಧಪಟ್ಟ ಯಾವ ದಾಖಲೆಗಳೂ ಇಲ್ಲದಿರುಇವುದು ಅಕ್ರಮದ ಅನುಮಾನ ಹೆಚ್ಚಿಸಿದೆ. ಮಂಜೂರಾದ ಭೂಮಿಯನ್ನು 15 ವರ್ಷ ಪರಾಭಾರೆ ಮಾಡಬಾರದು ಎಂಬ ನಿಯಮವಿದ್ದರೂ 2007&08ರಲ್ಲಿ ಮಹಮದ್​ ಇಕ್ಬಾಲ್​ ಎಂಬುವವರಿಗೆ ಹಾಗೂ ಅದೇ ವರ್ಷ ಸಿ.ಎನ್​.ಗೋಪಾಲಗೌಡ ಎಂಬುವರಿಗೆ ಹಾಗೂ ಇತ್ತಿಚೆಗೆ ಏಷಿಯನ್​ ್ಯಾಬ್​ ಟೆಕ್​ ಲಿ., ಕಂಪನಿಗೆ ಮಾರಾಟಮಾಡಲಾಗಿದೆ. ಈ ಭೂಮಿಯನ್ನು ಸೋಲಾರ್​ ಪ್ಲಾಂಟ್​ ಮಾಡಲು ಭೂಪರಿವರ್ತನೆ ಬಯಸಿ 2025 ಜೂ.13ರಂದು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ಗಮನಕ್ಕೂ ಇಲ್ಲದಂತೆ ಭೂಪರಿವರ್ತನೆ ನಡೆದೆ ಎನ್ನಲಾಗಿದ್ದು ಪ್ರಸ್ತುತ ಆರೋಪಿತ ಅಧಿಕಾರಿಯನ್ನು ಅಮಾನತುಗೊಳಿಸಿ ಭೂಪರಿವರ್ತನೆಯನ್ನು ರದ್ದುಪಡಿಸಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲಾಗಿದೆ.