ಜಿಲ್ಲೆ

ಜಿಲ್ಲೆಯಲ್ಲಿ 483 ಸಾರ್ವಜನಿಕ ದೂರು ಬಾಕಿ

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಜಿಲ್ಲೆಯಲ್ಲಿ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಸಾರ್ವಜನಿಕರಿಂದ ಲೋಕಾಯುಕ್ತದಲ್ಲಿ ದಾಖಲಾಗಿರುವ ದೂರುಗಳ ಪೈಕಿ 483 ದೂರುಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಉಪ ಲೋಕಾಯುಕ್ತ 2 ಅವರು ನವೆಂಬರ್​ ತಿಂಗಳಲ್ಲಿ ಜಿಲ್ಲೆಯ ವಿವಿಧ ಉಪವಿಭಾಗಗಳಲ್ಲಿ ಆಯೋಜಿಸಲಾಗುವ ಸಾರ್ವಜನಿಕ ದೂರುಗಳ ವಿಚಾರಣೆ ಹಾಗೂ ವಿಲೇವಾರಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್​.ತಿಪ್ಪೇಸ್ವಾಮಿ ಮಾತನಾಡಿದ ಅವರು, ಉಪ ಲೋಕಾಯುಕ್ತರವರು ಇಲಾಖಾವಾರು ಸಾರ್ವಜನಿಕ ದೂರುಗಳ ವಿಚಾರಣೆ ಪರಿಶೀಲನೆ ನಡೆಸಲಿದ್ದು, ಎಲ್ಲಾ ಇಲಾಖೆಗಳ ಅಧಿಕಾರಿಗಳು ಅಗತ್ಯ ಮಾಹಿತಿಯೊಂದಿಗೆ ಹಾಜರಾಗಬೇಕು ಎಂದು ಸೂಚಿಸಿದರು.

ಉಪ ಲೋಕಾಯುಕ್ತ ಅವರು ನವೆಂಬರ್​ 14 ಮತ್ತು 15ರಂದು ಕುಣಿಗಲ್​, ಗುಬ್ಬಿ ಹಾಗೂ ತುಮಕೂರು ಉಪವಿಭಾಗಗಳಲ್ಲಿ ವಿಚಾರಣೆ ನಡೆಸಲಿದ್ದಾರೆ. ನಂತರ ನವೆಂಬರ್​ 21ರಂದು ತುರುವೇಕೆರೆ, ಚಿಕ್ಕನಾಯಕನಹಳ್ಳಿ ಮತ್ತು ತಿಪಟೂರು ಉಪವಿಭಾಗಗಳಲ್ಲಿ ಹಾಗೂ ನವೆಂಬರ್​ 29ರಂದು ಪಾವಗಡ ಹಾಗೂ ಮಧುಗಿರಿ ಉಪವಿಭಾಗಗಳಲ್ಲಿ ವಿಚಾರಣೆ ಮತ್ತು ವಿಲೇವಾರಿ ಸಭೆ ನಡೆಸಲಿದ್ದಾರೆ ಎಂದರು.

ಸಾರ್ವಜನಿಕರಿಂದ ದಾಖಲಾಗಿರುವ ಪ್ರಕರಣಗಳನ್ನು ಗರಿಷ್ಠ ಮಟ್ಟದಲ್ಲಿ ವಿಲೇವಾರಿಗೊಳಿಸಲು ಲೋಕಾಯುಕ್ತ ಇಲಾಖೆ ಬದ್ಧವಾಗಿದ್ದು, ನಾಗರಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡುವ ಉದ್ದೇಶದಿಂದ ಈ ಸಭೆಗಳನ್ನು ಆಯೋಜಿಸಲಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್​ ಉಪ ಕಾರ್ಯದರ್ಶಿ ಸಂಜೀವಪ್ಪ ಹಾಗೂ ಈಶ್ವರಪ್ಪ, ಕೃಷಿ ಜಂಟಿ ನಿರ್ದೇಶಕ ಡಾ.ರಮೇಶ್​, ತೋಟಗಳಿಗೆ ಇಲಾಖೆ ಜಂಟಿ ನಿರ್ದೇಶಕ ಶಾರದಮ್ಮ ಮತ್ತಿತರರು ಇದ್ದರು.