ಮಧುಗಿರಿ: ಗ್ರಾಮದಲ್ಲಿ ನೀರು ಸರಬರಾಜು ಮಾಡುವ ವಿಷಯದಲ್ಲಿ ಗ್ರಾಪಂ ಬಿಲ್ ಕಲೆಕ್ಟರ್ ರಾಮಕೃಷ್ಣ ಹಾಗೂ ಗ್ರಾಮಸ್ಥರ ನಡುವೆ ಆರಂಭವಾದ ಜಗಳ ವ್ಯಕ್ತಿಯೊಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ.
ತಾಲೂಕಿನ ಪೋಲೇನಹಳ್ಳಿಯಲ್ಲಿ ಆನಂದ್ ಕೊಲೆಯಾದವರು. ಬಿಲ್ಕಲೆಕ್ಟರ್ ರಾಮಕೃಷ್ಣ ಅವರ ಮಗ ನಾಗೇಶ ಪೋಲೇನಹಳ್ಳಿ ಬಸ್ ನಿಲ್ದಾಣದಲ್ಲಿ ತನ್ನ ಬುಲೇರೋ ವಾಹನದಲ್ಲಿ ಗುದ್ದಿ ಕೊಲೆಗೈದಿದ್ದಾನೆ ಎನ್ನಲಾಗಿದ್ದು ಕೊಡಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೋಲೇನಹಳ್ಳಿ ಗ್ರಾಮದ ರಾಮಚಂದ್ರಪ್ಪ ಎಂಬುವವರ ಮಗ ಆನಂದ್ ಹಾಗೂ ಗ್ರಾಪಂ ಬಿಲ್ ಕಲೆಕ್ಟರ್ ರಾಮಕೃಷ್ಣ ಬುಧವಾರ ಗಲಾಟೆಯಾಗಿದ್ದು ನಂತರ ಈ ಕೃತ್ಯ ನಡೆದಿದೆ. ರಾಮಕೃಷ್ಣನ ಮಗ ನಾಗೇಶ್ ತನ್ನ ಬುಲೇರೋ ವಾಹನದಲ್ಲಿ ಅಟ್ಟಾಡಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಆನಂದ್ ತಲೆ, ದೇಹಕ್ಕೆ ಗಂಭೀರ ಸ್ವರೂಪದ ಪೆಟ್ಟುಬಿದ್ದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.