ಜಿಲ್ಲೆ

ಎಸಿ, ತಹಸೀಲ್ದಾರ್​ಗಳ ಮೇಲೆ ಲೋಕಾಯುಕ್ತ ಪ್ರಕರಣ

ತುಮಕೂರು: ಜಿಲ್ಲೆಯ ಸೈನಿಕರು, ಮಾಜಿ ಸೈನಿಕರು, ಸ್ವಾತಂತ್ರ್ಯ ಹೋರಾಟಗಾರಿರಿಗೆ ಹಾಗೂ ಅವಲಂಬಿತ ಕುಟುಂಬಗಳಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಲು ವಿಳಂಬ ಧೋರಣೆ ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲೆಯ ಉಪವಿಭಾಗಾಧಿಕಾರಿ, ತಹಶೀಲ್ದಾರ್​ ಗಳ ಮೇಲೆ ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದೆ.

ತುಮಕೂರು ತಹಸೀಲ್ದಾರ್​ ಪಿ.ಎಸ್​.ರಾಜೇಶ್ವರಿ, ಗುಬ್ಬಿ ಬಿ.ಆರತಿ, ಚಿಕ್ಕನಾಯಕನಹಳ್ಳಿಯ ಪುರಂದರ, ಕಣಿಗಲ್​ ರಶ್ಮಿ, ಮಧುಗಿರಿ ಎಚ್​.ಶ್ರೀನಿವಾಸ್​, ಕೊರಟಗೆರೆ ಕೆ.ಮಂಜುನಾಥ್​, ಪಾವಗಡ ವರದರಾಜು, ಶಿರಾ ಸಚ್ಚದಾನಂದ ಕೂಚನೂರ, ತಿಪಟೂರು ಮೋಹನ್​ಕುಮಾರ್​, ತುರುವೇಕೆರೆ ಎಂ.ಇ.ಕುಮಿಅಹಮದ್​ ಹಾಗೂ ಉಪವಿಭಾಗಾಧಿಕಾರಿಗಾಳದ ನಹಿದಾ ಜಮ್​ಜಮ್​, ಸಪ್ತಶ್ರೀ ಹಾಗೂ ಗೂಟೂರು ಶಿವಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ.

ಜಿಲ್ಲೆಯಲ್ಲಿ ನಿವೃತ್ತರಾದ ಯೋಧರಿಗೆ ಹಾಗೂ ಹುತಾತ್ಮ ಯೋಧರ ಅವಲಂಬಿತರಿಗೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಹಾಗೂ ಅವರ ಅವಲಂಬಿತರಿಗೆ ನಿಯಮಾನುಸಾರ ಸರ್ಕಾರದಿಂದ ದೊರೆಯಬೇಕಾದ ನಿವೇಶನವನ್ನು ನಿಗದಿತ ಸಮಯದಲ್ಲಿ ನೀಡದೆ ಸರ್ಕಾರಿ, ಸಾರ್ವಜನಿಕ ನೌಕರ, ಅಧಿಕಾರಿಗಳು ಭ್ರಷ್ಟಾಚಾರ ನಡೆಸುತ್ತಿರುವುದು ಹಾಗೂ ಕರ್ತವ್ಯಲೋಪ ಎಸಗುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು ದೂರಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಇರುವುದರಿಂದ ತನಿಖೆ ಕೈಗೊಳ್ಳಾಗಿದೆ.

ಸ್ವತಾಂತ್ರ$್ಯ ಹೋರಾಟಗಾರ ಕ್ಯಾತಸಂದ್ರದ ವಿರೂಪಾಕ್ಷ ಅವರ ಪತ್ನಿ ಎನ್​.ಕೆ.ಲಲಿತಾಂಬಿಕ ಅವರಿಗೆ 1969ರಲ್ಲಿ ಸರ್ಕಾರ ತುಮಕೂರು ತಾಲೂಕು ವಡ್ಡರಹಳ್ಳಿ ಗ್ರಾಮದ ಸರ್ವೆ ನಂ.26/7ರಲ್ಲಿ 4 ಎಕರೆ ಜಮೀನು ಮಂಜೂರು ಮಾಡಿದೆ. ಈ ಜಮೀನು ಕಲ್ಲುಬಂಡೆಯಿಂದ ಕೂಡಿದ್ದು ಕೃಷಿಗೆ ಯೋಗ್ಯವಾಗಿಲ್ಲದ ಕಾರಣಕ್ಕೆ ಬದಲಿ ಜಮೀನು ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿ 50 ವರ್ಷವಾದರೂ ಕ್ರಮಕೈಗೊಂಡಿಲ್ಲ ಹಾಗೂ ಇದೇ ಜಮೀನಿಗೂ ಹದ್ದುಬಸ್ತ್​ ಮಾಡಿ ರೀ ಸರ್ವೇ ನಂಬರ್​ ನೀಡಿಲ್ಲ ಎಂದು ದೂರು ನೀಡಿದ್ದಾರೆ.

ಇದೇ ಮಾದರಿಯ ಪ್ರಕರಣಗಳು ತುಮಕೂರು ಜಿಲ್ಲೆಯ ಎಲ್ಲಾ ಹತ್ತು ತಾಲೂಕುಗಳಲ್ಲಿಯೂ ಕಂಡುಬಂದಿರುವ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.